ಕಾರಿನಲ್ಲಿ ಸ್ವಾಮಿ ಕೊರಗಜ್ಜ ಸ್ಟಿಕ್ಕರ್ | ಆಕ್ಷೇಪಿಸಿದ ಟ್ರಾಫಿಕ್ ಪೊಲೀಸ್ | ಸಾರ್ವಜನಿಕರಿಂದ ಪ್ರತಿಭಟನೆ

ಕಾರಿನ ನಂಬರ್ ಪ್ಲೇಟ್ ಬಳಿ ಕೊರಗಜ್ಜನ ಭಾವಚಿತ್ರ ಅಂಟಿಸಿದ್ದಕ್ಕೆ ಆಕ್ಷೇಪಿಸಿದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳೂರಿನ ತೊಕ್ಕೊಟ್ಟು ಫೈಓವರ್ ಬಳಿ ಇಂದು ನಡೆದಿದೆ.

ಹೈವೇ ಪೆಟ್ರೋಲಿಂಗ್ ವಾಹನದಲ್ಲಿದ್ದ ಎಎಸೈ ರಾಬರ್ಟ್ ಲಸ್ರಾದೊ ಬಬೀಶ್ ಪೂಜಾರಿಯವರಿಗೆ ಸೇರಿದ ಮಾರುತಿ ಕಾರನ್ನು ತಡೆದು ನಿಲ್ಲಿಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ದಾಖಲೆಗಳೆಲ್ಲಾ ಸರಿಯಾಗಿದ್ದು ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಅಂಟಿಸಲಾಗಿದ್ದ ಓಂ ಸಾಯಿ, ಸ್ವಾಮಿ ಕೊರಗಜ್ಜ ಟೀಂ ಪರಶುರಾಮ್ ಎಂಬ ಸ್ಟಿಕ್ಕರ್ ಗಳನ್ನು ಕಳಚಲು ಹೇಳಿದ್ದಾರೆ. ತಪ್ಪಿದಲ್ಲಿ ಅದಕ್ಕೆ ದಂಡ ವಿಧಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಕಾರಿನ ಮಾಲಕ ನಿರಾಕರಿಸಿದರೆನ್ನಲಾಗಿದೆ. ಈ ಬಗ್ಗೆ ವಾಗ್ವಾದ ನಡೆದಾಗ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಕೂಡಾ ಟ್ರಾಫಿಕ್ ಪೊಲೀಸ್ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ತಕ್ಷಣ ಕಾರು ಚಾಲಕ ಬಬೀಶ್ ಪೂಜಾರಿಯವರು ಬಜರಂಗದಳ ಸಂಘಟನಾ ಪ್ರಮುಖರು ಹಾಗೂ ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಅವರಲ್ಲಿ ತಮಗಾದ ಘಟನೆಯನ್ನು ವಿವರಿಸಿದ್ದಾರೆ. ಸ್ಥಳಕ್ಕಾಗಮಿಸಿದ ಚಂದ್ರಹಾಸ ಪಂಡಿತ್ ಹೌಸ್ ಅವರಲ್ಲೂ ಎಎಸ್ ಐ ಲಸ್ರಾದೊ ಅವರು ಉಡಾಫೆಯಿಂದ ಮಾತನಾಡಿದ್ದು, ಇದರಿಂದ ಕೆರಳಿದ ಹಿಂದೂ ಸಂಘಟನೆ ಸದಸ್ಯರು ಕೂಡಲೇ ಜಮಾಯಿಸಿ ಪ್ರತಿಭಟಿಸಿದ್ದಾರೆ.

ಪರಿಣಾಮ, ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಸ್ಥಳಕ್ಕೆ ದಕ್ಷಿಣ ಸಂಚಾರಿ ಠಾಣಾ ಇನ್ ಸ್ಪೆಕ್ಟರ್ ಗುರುದತ್ ಕಾಮತ್ ಕೂಡಾ ಆಗಮಿಸಿ ಮಾತುಕತೆ ನಡೆಸಿದರು.

ಟ್ರಾಫಿಕ್ ಎಎಸ್ ಐ ಲಸ್ರಾದೊ ವಾಹನ ಸವಾರರಿಗೆ ವಿನಾಕಾರಣ ಪೀಡನೆ ನೀಡುತ್ತಿರುವ ಅನೇಕ ದೂರುಗಳು ಕೇಳಿ ಬಂದಿವೆ. ದಾಖಲೆಗಳು ಸಮರ್ಪಕವಾಗಿದ್ದರೂ ವಾಹನದ ಹಳೆಯ ಕೇಸುಗಳ ದಂಡವನ್ನು ಸ್ಥಳದಲ್ಲೇ ಪಾವತಿಸುವಂತೆ ವಾಹನ ಸವಾರರನ್ನು ಪೀಡಿಸುವುದು, ತಪ್ಪಿದಲ್ಲಿ ವಾಹನ ಜಪ್ತಿ ಮಾಡಲು ಮುಂದಾಗುವ ದೂರುಗಳು ಕೇಳಿ ಬಂದಿವೆ.

ಕರ್ತವ್ಯದಲ್ಲಿ ಕೋಮು ಭಾವನೆ ಅನಾವರಣಗೊಳಿಸುತ್ತಿರುವ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾಗೊಳಿಸುವಂತೆ ಪ್ರತಿಭಟನಾಕಾರರು ಇನ್ ಸ್ಪೆಕ್ಟರ್ ಗುರುದತ್ ಕಾಮತ್ ರಲ್ಲಿ ಒತ್ತಾಯಿಸಿದರು.

Leave A Reply

Your email address will not be published.