ಬಂಟ್ವಾಳ : ಮಿನಿ ವಿಧಾನ ಸೌದಕ್ಕೆ ಕಾಂಗ್ರೆಸ್ ಧಿಡೀರ್ ಮುತ್ತಿಗೆ

ಕೆಎಸ್ಸಾರ್ಟಿಸಿ ಐಸಿಯು ಬಸ್ ಸೇವೆ, ಕೋವಿಡ್ ಲಸಿಕೆ ಹಾಗೂ ಕೋವಿಡ್ ಕಿಟ್ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮಂಗಳವಾರ ಬಿ.ಸಿ.ರೋಡ್ ಮಿನಿ ವಿಧಾನ ಸೌಧಕ್ಕೆ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕುವ ವಿಷಯ ತಿಳಿದು ಮಿನಿ ವಿಧಾನ ಸೌಧದಲ್ಲಿ ಪೊಲೀಸರನ್ನು ನಿಯೋಜಿಸಿ ಬಾಗಿಲು ಮುಚ್ಚಲಾಗಿತ್ತು. ಆದರೂ ಬಾಗಿಲನ್ನು ತಳ್ಳಿ ಒಳನುಗ್ಗಿದ ಪ್ರತಿಭಟನಾಕಾರರು ತಹಶೀಲ್ದಾರ್ ಕಚೇರಿಗೆ ತೆರಳಿ ಮಾತುಕತೆ ನಡೆಸಿ ಮನವಿ ಸಲ್ಲಿಸಿದರು.

ತಹಶೀಲ್ದಾರ್ ಜೊತೆ ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಮಾನಾಥ ರೈ, ಕೆಎಸ್ಸಾರ್ಟಿಸಿ ಐಸಿಯು ಬಸ್ ಸರಕಾರದ್ದು. ಸರಕಾರದ ಹಣದಿಂದ ಜನರಿಗೆ ಸೇವೆ ನೀಡಲಾಗುತ್ತಿದೆ. ಆದರೆ ಐಸಿಯು ಬಸ್ ಬಿಜೆಪಿ ಬೆಂಬಲಿತ ಆಡಳಿತ ಇರುವ ಪಂಚಾಯತ್ ಗೆ ತೆರಳಿದಾಗ ಅಲ್ಲಿನ ಅಧ್ಯಕ್ಷರಿಗೆ ಅದರ ಉಸ್ತುವಾರಿ ನೀಡಲಾಗುತ್ತಿದೆ. ಕಾಂಗ್ರೆಸ್ ಬೆಂಬಲಿತ ಆಡಳಿತ ಇರುವಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಉಸ್ತುವಾರಿ ನೀಡಲಾಗುತ್ತಿದೆ. ಇದು ಯಾವ ನ್ಯಾಯ. ಇದು ರಾಜ್ಯ ಧರ್ಮವೇ ಎಂದು ಪ್ರಶ್ನಿಸಿದರು.

ಕೋವಿಡ್ ಸೋಂಕಿತರಿಗೆ ಸರಕಾರದಿಂದ ನೀಡುವ ಕಿಟ್ ಗಳನ್ನು ವಿತರಣೆ ಮಾಡುವ ಜವಾಬ್ದಾರಿ ಆಯಾಯ ಗ್ರಾಮ ಪಂಚಾಯತ್ ನ ಪಿಡಿಒಗೆ ಆಗಿದೆ. ಆದರೆ ಬಂಟ್ವಾಳದಲ್ಲಿ ಯಾರೋ ವ್ಯಕ್ತಿಗಳು ಕಿಟ್ ಗಳನ್ನು ಮನೆ ಮನೆಗೆ ತಲುಪಿಸುತ್ತಿದ್ದಾರೆ. ಕಿಟ್ ನಲ್ಲಿ 2 ಸಾವಿರ ರೂಪಾಯಿಯ ಸಾಮಗ್ರಿಗಳು ಇರಬೇಕು. ಆದರೆ ಬಂಟ್ವಾಳದಲ್ಲಿ ನೀಡಲಾಗುತ್ತಿರುವ ಕಿಟ್ ನಲ್ಲಿ ಕೇವಲ 600ರಿಂದ 700 ರೂಪಾಯಿಯ ಸಾಮಗ್ರಿಗಳು ಮಾತ್ರ ಇರುತ್ತದೆ. ಸರಕಾರದ ಕಿಟ್ ವಿತರಣೆ ಅವ್ಯವಸ್ಥಿತದಿಂದ ಕೂಡಿದೆ ಎಂದು ಆರೋಪಿಸಿದರು.

ಕೊರೋನ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿ ಇರುವ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಕಿಟ್ ವಿತರಣೆಯಾಗುತ್ತಿದೆ. ಆದರೆ ಬಂಟ್ವಾಳ ಕ್ಷೇತ್ರದಲ್ಲಿ ಯಾವುದೇ ಅರ್ಹ ಕಾರ್ಮಿಕರಿಗೆ ಕಿಟ್ ದೊರೆತಿಲ್ಲ. ಕಾರ್ಮಿಕರಿಗೆ ಸಿಗಬೇಕಾದ ಕಿಟ್ ಗಳು ಯಾರದ್ದೋ ಮನೆಗೆ ತಲುಪಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕೋವಿಡ್ ಲಸಿಕೆ ನೀಡುವುದರಲ್ಲೂ ತಾರತಮ್ಯ ಮಾಡಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡಲು ಸಾಕಷ್ಟು ವ್ಯವಸ್ಥೆ ಇದ್ದರೂ ಬಿಜೆಪಿ ಆಡಳಿತ ಇರುವಲ್ಲಿ ಪಂಚಾಯತ್ ಕಟ್ಟಡದಲ್ಲಿ ಲಸಿಕೆ ನೀಡಲಾಗುತ್ತಿದೆ. ಇದರಲ್ಲಿ ಆರೋಗ್ಯ ಇಲಾಖೆ ಕೂಡಾ ಶಾಮೀಲಾಗಿದೆ. ಅಲ್ಲದೆ ಆರೋಗ್ಯ ಸೇವೆ ನೀಡುವ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಯುತ್ತಿದೆ. ಹಲ್ಲೆ ನಡೆದ ಬಗ್ಗೆ ದೂರು ನೀಡಿದರೆ ಅವರನ್ನು ಕೆಲಸ ಮಾಡಲು ಬಿಡದೆ ರಜೆಯಲ್ಲಿ ಮನೆಗೆ ಕಳುಹಿಸುವ ಕೆಲಸ ಕೂಡಾ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಇಲ್ಲಿನ ಶಾಸಕರು ರಾಜಕೀಯ ಮಾಡುವುದನ್ನು ರಾಜ್ಯ ಧರ್ಮ ಅಂದುಕೊಂಡಿದ್ದಾರೆ. ರಾಜಕೀಯ ಮಾಡುವುದು ರಾಜ್ಯ ಧರ್ಮ ಅಲ್ಲ. ಎಲ್ಲ ಜನರನ್ನು ಸಮಾನವಾಗಿ ಕಾಣುವುದು ರಾಜ್ಯ ಧರ್ಮವಾಗಿದೆ. ಕ್ಷೇತ್ರದಲ್ಲಿ ಇದೇ ರೀತಿ ತಾರತಮ್ಯ ನೀತಿ, ಅವ್ಯವಸ್ಥೆಗಳು ಮುಂದುವರಿದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು. ತಾರತಮ್ಯ ಇಲ್ಲದೆ ಐಸಿಯು ಬಸ್ ನಲ್ಲಿ ಸೇವೆ ನೀಡದಿದ್ದರೆ ಬಸ್ ಅಡಿಯಲ್ಲಿ ಮಲಗಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಪ್ರತಿಭಟನಾನಿರತರು ಬಿಜೆಪಿ, ಆರೋಗ್ಯ ಇಲಾಖೆ, ಬಂಟ್ವಾಳ ತಾಲೂಕು ಆಡಳಿತ, ಬಂಟ್ವಾಳ ಶಾಸಕರಿಗೆ ಧಿಕ್ಕಾರ ಘೋಷಣೆ
ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮನಾಭ ಜೈನ್, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಬಂಟ್ವಾಳ ಪುರಸಭಾ ಸದಸ್ಯ ಮುಹಮ್ಮದ್ ಶರೀಫ್, ಸದಸ್ಯರಾದ ಅಬೂಬಕರ್ ಸಿದ್ದೀಕ್ ಬೋಗೋಡಿ, ಜನಾರ್ದನ ಚೆಂಡ್ತಿಮಾರ್, ಬೂಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ನವಾಝ್ ಬಡಕಬೈಲ್, ಪ್ರಮುಖರಾದ ಮಾಯಿಲಪ್ಪ ಸಾಲ್ಯಾನ್, ಮುಹಮ್ಮದ್ ನಂದಾವರ, ಯೂಸುಫ್ ಕರಂದ್ಲಾಡಿ, ಪ್ರಶಾಂತ್ ಕುಲಾಲ್ ಮತ್ತಿತರರು ಭಾಗವಹಿಸಿದ್ದರು.

Leave A Reply

Your email address will not be published.