ವಾಯು ಮಾಲಿನ್ಯ ತಡೆಗಟ್ಟಲು ದೇಶದಲ್ಲಿ ಮೊಟ್ಟಮೊದಲು ತಲೆಯೆತ್ತಿ ನಿಂತಿದೆ ‘ಸ್ಮಾಗ್ ಟವರ್’ | ಸ್ಮಾಗ್ ಟವರ್ ಎಂದರೇನು? ಇಲ್ಲಿದೆ ಸಂಪೂರ್ಣ ವಿವರ

ರಾಜಧಾನಿ ದೆಹಲಿ ಎಂದರೆ ಸಾಕು ಅಲ್ಲಿನ ವಾಯುಮಾಲಿನ್ಯ ನೆನಪಾಗುತ್ತದೆ. ಕಾರ್ಖಾನೆಗಳಿಂದ, ವಾಹನ ದಟ್ಟಣೆಯಿಂದ ಅಲ್ಲಿ ಶುದ್ಧ ಗಾಳಿ ಸಿಗುವುದು ಅಪರೂಪವೇ ಸರಿ. ಸರ್ಕಾರ ವಾಯು ಮಾಲಿನ್ಯ ನಿಯಂತ್ರಿಸಲು ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಆದರೆ ಈ ಬಾರಿ ಇದರ ಕುರಿತಾಗಿ ದೆಹಲಿ ಸರ್ಕಾರ ಒಂದು ದೊಡ್ಡ ಹೆಜ್ಜೆಯನ್ನು ಇಟ್ಟಿದೆ.

ಕಲುಷಿತ ಗಾಳಿಯನ್ನು ಶುದ್ಧ ಗಾಳಿಯಾಗಿ ಪರಿವರ್ತಿಸುವ ದೇಶದ ಮೊಟ್ಟಮೊದಲ ಹೊಗೆ ಗೋಪುರವನ್ನು (ಸ್ಮಾಗ್ ಟವರ್) ದೆಹಲಿಯ ಕನ್ನಾಟ್‍ಪ್ಲೇಸ್‍ನಲ್ಲಿ ನಿರ್ಮಿಸಲಾಗಿದೆ.

ಈ ಸ್ಮಾಗ್ ಟವರ್ ಅಶುದ್ಧ ಗಾಳಿಯನ್ನು ಗೋಪುರದ ಮೇಲ್ಭಾಗದಿಂದ ಹೀರಿಕೊಂಡು ಪರಿಶುದ್ಧ ಗಾಳಿಯನ್ನು ತನ್ನ ಬುಡದಿಂದ ಹೊರಹಾಕುತ್ತದೆ. ಪ್ರತಿ ಸೆಕೆಂಡಿಗೆ 1,000 ಕ್ಯೂಬಿಕ್ ಮೀಟರ್‌ನಷ್ಟು ಗಾಳಿಯನ್ನು ಇದು ಸ್ವಚ್ಛಗೊಳಿಸುತ್ತದೆ ಎಂದು ತಿಳಿದುಬಂದಿದೆ.

ಮಾಲಿನ್ಯದ ವಿರುದ್ಧದ ಯುದ್ಧದಲ್ಲಿ ದೇಶದಲ್ಲೇ ಮೊದಲ ಹೊಗೆ ಗೋಪುರವನ್ನು ದೆಹಲಿಯಲ್ಲಿ ಆರಂಭಿಸಲಾಗಿದೆ. ಅಮೆರಿಕದ ತಂತ್ರಜ್ಞಾನದಿಂದ ಮಾಡಿದ ಈ ಹೊಗೆ ಗೋಪುರವು ಗಾಳಿಯಲ್ಲಿನ ಮಾಲಿನ್ಯದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಟಾಟಾ ಸಂಸ್ಥೆ, ಐಐಟಿ ಬಾಂಬೆ, ಐಐಟಿ ದೆಹಲಿ ತಜ್ಞರ ಮುಂದಾಳತ್ವದಲ್ಲಿ ಇದನ್ನು ಪ್ರಾಯೋಗಿಕವಾಗಿ ನಿರ್ಮಿಸಲಾಗಿದೆ. ಇದು ಉತ್ತಮ ಫಲಿತಾಂಶ ಕೊಟ್ಟರೆ ದೆಹಲಿಯ ವಿವಿಧ ಭಾಗದಲ್ಲಿ ಇಂಥ ಮತ್ತಷ್ಟು ಗೋಪುರಗಳನ್ನು ನಿರ್ಮಿಸಲಾಗುತ್ತದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಪ್ರಾಯೋಗಿಕವಾಗಿ ನಿರ್ಮಿಸಲಾದ ಗೋಪುರವು ಉತ್ತಮ ಫಲಿತಾಂಶ ನೀಡುವುದೋ ಎಂಬ ಕೌತುಕ ದೆಹಲಿ ನಾಗರಿಕರಲ್ಲಿ ಮೂಡಿದೆ.

Leave A Reply

Your email address will not be published.