ಕಳ್ಳತನ ಮಾಡಿದ್ದಲ್ಲದೆ ಸಾರ್ವಜನಿಕರ ಭಯಕ್ಕೆ ಚಿನ್ನದ ಸರವನ್ನೇ ನುಂಗಿದ ಖತರ್ನಾಕ್ ಕಳ್ಳ !!

ಕಳ್ಳತನದ ಸಂಖ್ಯೆ ಇದೀಗ ಹೆಚ್ಚಾಗುತ್ತಲೇ ಇದ್ದು, ಇದು ಸರ್ವೇ ಸಾಮಾನ್ಯದಂತೆ ಆಗಿದೆ. ಆದರೆ ಕಳ್ಳತನ ಮಾಡಿದ ಸರವನ್ನು ನುಂಗುವುದನ್ನು ನೀವು ನೋಡಿದ್ದೀರಾ!? ಹೌದು ಇಲ್ಲೊಬ್ಬ ಮಹಾನುಭಾವ ಸಾರ್ವಜನಿಕರ ಭಯಕ್ಕೆ ಕದ್ದ ಸರವನ್ನೇ ನುಂಗಿದ ಪ್ರಸಂಗ ಕೆ.ಆರ್‌.ಮಾರುಕಟ್ಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಹಿಳೆಯೊಬ್ಬರ ಸರ ಕದ್ದು ಪರಾರಿಯಾಗುತ್ತಿದ್ದ ಖದೀಮರನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಾರ್ವಜನಿಕರ ಧರ್ಮದೇಟಿಗೆ ಅಂಜಿದ ಖದೀಮನೊಬ್ಬ ಕದ್ದ ಚಿನ್ನದ ಸರ ನುಂಗಿದ್ದು, ಆಸ್ಪತ್ರೆಯಲ್ಲಿ ಸ್ಕ್ಯಾ‌ನಿಂಗ್‌ಗೆ ಒಳಪಡಿಸಿದಾಗ ಆರೋಪಿಯೊಬ್ಬನ ಹೊಟ್ಟೆಯಲ್ಲಿ ಚಿನ್ನದ ಸರ ಪತ್ತೆಯಾಗಿದೆ.

ಎಂ.ಟಿ.ಸ್ಟ್ರೀಟ್‌ನ ನಿವಾಸಿ ಹೇಮಾ(32) ಸರಗಳ್ಳತನಕ್ಕೆ ಒಳಗಾದವರಾಗಿದ್ದು, ಖದೀಮರಾದ ಕೆ.ಆರ್‌.ಮಾರುಕಟ್ಟೆಯ ವಿಜಿ(25) ಮತ್ತು ಸಂಜಯ್‌(25) ಎಂಬುವವರು ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡಿದ್ದು ಪೊಲೀಸರು ಶೋಧ ಮುಂದುವರಿಸಿದ್ದಾರೆ.

Ad Widget / / Ad Widget

ಹೇಮಾ ಶನಿವಾರ ರಾತ್ರಿ 9 ಗಂಟೆಗೆ ಚಿಕ್ಕಪೇಟೆಯ ಎಂ.ಟಿ.ಸ್ಟ್ರೀಟ್‌ನ ಅಂಗಡಿಯಿಂದ ರಕ್ಷಾ ಬಂಧನ ಖರೀದಿಸಿ ಮನೆಗೆ ವಾಪಸ್ಸಾಗುತ್ತಿದ್ದರು. ಆ ವೇಳೆ ಮೂವರು ಆರೋಪಿಗಳು ಇವರನ್ನು ಹಿಂಬಾಲಿಸಿಕೊಂಡು ಹೋಗಿ ಈ ಘಟನೆ ನಡೆದಿದೆ.

ಮೂವರ ಪೈಕಿ ವಿಜಿ, ಹೇಮಾ ಕತ್ತಿನಲ್ಲಿದ್ದ 80 ಗ್ರಾಂ ಚಿನ್ನದ ಸರ ಕಸಿದುಕೊಳ್ಳಲು ಯತ್ನಿಸಿದ್ದ. ಕೂಡಲೇ ಎಚ್ಚೆತ್ತುಕೊಂಡ ಹೇಮಾ ತನ್ನ ಕತ್ತಿನಲ್ಲಿದ್ದ ಸರವನ್ನು ಗಟ್ಟಿಯಾಗಿ ಹಿಡಿದು ಸಹಾಯಕ್ಕಾಗಿ ಕೂಗಿಕೊಂಡಿದ್ದರು.

ಇವರ ಬೊಬ್ಬೆಯನ್ನು ಕೇಳಿದ ಸಾರ್ವಜನಿಕರು ಸ್ಥಳಕ್ಕೆ ಬರುತ್ತಿರುವುದನ್ನು ಗಮನಿಸಿದ ಕಳ್ಳರು,ಅಲ್ಲಿಂದ ಓಡಿ ಹೋಗಿದ್ದರು. ಇಬ್ಬರು ಕಳ್ಳರನ್ನು ಬೆನ್ನಟ್ಟಿ ಹಿಡಿದ ಸಾರ್ವಜನಿಕರು ಸರಿಯಾಗಿ ಏಟು ನೀಡಿದ್ದಾರೆ.

ನಂತರ ಕಳ್ಳರನ್ನು ಕೆ.ಆರ್‌.ಮಾರುಕಟ್ಟೆ ಪೊಲೀಸರಿಗೆ ಒಪ್ಪಿಸಿದ್ದರು. ಶೇ.95ರಷ್ಟು ಚಿನ್ನದ ಸರ ಹೇಮಾ ಕೈಯಲ್ಲಿದ್ದರೆ, ಶೇ.5ರಷ್ಟನ್ನು ಆರೋಪಿಗಳು ವಶಪಡಿಸಿದ್ದರು.

ಸಾರ್ವಜನಿಕರು ಹಲ್ಲೆ ನಡೆಸಿದ ಪರಿಣಾಮ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಬಂಧಿತ ಕಳ್ಳರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಇಬ್ಬರಿಗೂ ಸ್ಕ್ಯಾನಿಂಗ್‌ ಮತ್ತು ಎಕ್ಸ್‌ರೇ ಮಾಡಿದಾಗ ವಿಜಿ ಹೊಟ್ಟೆಯೊಳಗೆ ಚಿನ್ನದ ಸರ ಇರುವುದು ಪತ್ತೆಯಾಗಿತ್ತು.

ಬಳಿಕ ಆತನನ್ನು ಈ ಬಗ್ಗೆ ಪ್ರಶ್ನಿಸಿದಾಗ ತಾನು ಸಿಕ್ಕಿ ಬೀಳುವ ಭೀತಿಯಿಂದ ಕೈಯಲ್ಲಿದ್ದ ಚಿನ್ನದ ಸರದ ತುಂಡನ್ನು ನುಂಗಿರುವುದಾಗಿ ಹೇಳಿದ್ದ. ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಆರೋಪಿ ವಿಜಿ ಹೊಟ್ಟೆಯೊಳಗಿರುವ ಸರದ ತುಂಡು ಹೊರ ತೆಗೆದಿದ್ದಾರೆ.

ಈ ಘಟನೆಯ ಆರೋಪಿಗಳ ವಿರುದ್ಧ ಕೆ.ಆರ್‌.ಮಾರುಕಟ್ಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!
Scroll to Top
%d bloggers like this: