ಅಡಿಕೆ ಕೃಷಿಕರಿಗೆ ಸೋಲಾರ್ ಡ್ರೈಯರ್‌ಗೆ ಕೇಂದ್ರ ಸರ್ಕಾರದ ರಾಷ್ಡ್ರೀಯ ತೋಟಗಾರಿಕೆ ಮಿಷನ್ ಯೋಜನೆಯಿಂದ ಅನುದಾನ ನೀಡುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ

ಸವಣೂರು : ದ.ಕ.ಜಿಲ್ಲೆಯಲ್ಲಿ ರೈತರು ಸ್ಥಳೀಯವಾಗಿ ನಿರ್ಮಿಸುವ ಟ್ಯುಬ್ಯುಲಾರ್ ಸೋಲಾರ್ ಪಾಲಿಟನೆಲ್ ಡ್ರೈಯರ್ ಗಳಿಗೆ ರಾಷ್ಡ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಹಾಯಧನವನ್ನು ನೀಡುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ನೇತೃತ್ವದಲ್ಲಿ ಸುಳ್ಯ ವಿ.ಸ.ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ,ಸವಣೂರು ವರ್ತಕರ ಸಂಘದ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ಕಾಣಿಯೂರು ಗ್ರಾ.ಪಂ‌.ಉಪಾಧ್ಯಕ್ಷ ಗಣೇಶ್ ಉದನಡ್ಕ ಮನವಿ ಸಲ್ಲಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ತೆಂಗು, ಜಾಯಿಕಾಯಿ ಕೋಕೋ ಮುಂತಾದ ವಾಣಿಜ್ಯ ಬೆಳೆಗಳನ್ನು ರೈತರು 9mx6 m(30ಅಡಿ *20 ಅಡಿ), 9mx9m(30 ಅಡಿ *30 ಅಡಿ), 12.12mx9m(40 ಅಡಿ *30 ಅಡಿ) ಅಳತೆಯ ಕಡಿಮೆ ವೆಚ್ಚದ ಸೌರಶಕ್ತಿ ಆದಾರಿತ ಟ್ಯುಬ್ಯುಲಾರ್ ಸೋಲಾರ್ ಪಾಲಿಟನೆಲ್ ಘಟಕಗಳನ್ನು ಸ್ಥಳೀಯವಾಗಿ ನಿರ್ಮಿಸಿ ಒಣಗಿಸುತ್ತಾರೆ. ಇಂತಹ ಘಟಕಗಳಿಂದ ಕೊಯ್ಲಿನ ನಂತರ ಉತ್ಪನ್ನಗಳನ್ನು ಬೇಗನೆ ಒಣಗಿಸಲು, ಸಂಸ್ಕರಿಸಲು ಹಾಗೂ ಮಳೆಯಿಂದ ರಕ್ಷಿಸಲು ಸಾದ್ಯವಾಗುತ್ತದೆ. ಇಂತಹ ಘಟಕಗಳ ನಿರ್ಮಾಣಕ್ಕೆ ಅಂದಾಜು ಪ್ರತೀ ಚ ಮೀಗೆ ರೂ 1300.00 ರಿಂದ ರೂ 1500.00 ವೆಚ್ಚ ತಗಲುತ್ತದೆ. ಇಂತಹ ಘಟಕಗಳಿಗೆ ತೋಟಗಾರಿಕೆ ಇಲಾಖೆಯಿಂದ ಯಾವುದೇ ಸಹಾಯಧನ ಲಭ್ಯವಾಗುತ್ತಿಲ್ಲವಾದುದರಿಂದ ಈ ಘಟಕಗಳಿಗೆ ಸಹಾಯಧನಕ್ಕೆ ಪರಿಗಣಿಸುವಂತೆ ಮನವಿ ಮಾಡಲಾಯಿತು.

ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಉಲ್ಲೇಖಿತ ಮಾರ್ಗಸೂಚಿಯಂತೆ 1000 ಕೆಜಿ ಸಾಮರ್ಥಯದ 15ಮೀ ಉದ್ದ 3.75ಮೀ ಅಗಲ3ಮೀ ಎತ್ತರದ (56.25 ಚ.ಮೀ) ಸೋಲಾರ್ ಪ್ಯಾನೆಲ್ ಹಾಗೂ ಬ್ಯಾಟರಿ ಅಳವಡಿಸಿ ಸೋಲಾರ್ ಪಾಲಿಟನೆಲ್ ಡ್ರೈಯರ್ ನಿರ್ಮಿಸಲು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದ್ದು ಈ ಘಟಕಕ್ಕೆ ರೂ 6.00 ಲಕ್ಷಗಳ ವೆಚ್ಚ (ಪ್ರತೀ ಚಮೀ ಗೆ ರೂ 10133.00 ) ತಗಲುತ್ತದೆ. ಹಾಗೂ ಇದನ್ನು ಇಲಾಖೆ ನಿಗದಿಪಡಿಸಿದ ಟೆಂಡರುದಾರರಿಂದಲೇ ಮಾಡಿಸಬೇಕಾಗಿರುತ್ತದೆ. ಜಿಲ್ಲೆಯಿಂದ ಯಾವುದೇ ಟೆಂಡರುದಾರರೂ ಅನುಮೋದನೆ ಇರುವುದಿಲ್ಲ. ಜಿಲ್ಲೆಯಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರು ಅದಿಕವಾಗಿದ್ದು ಈ ಭಾರಿ ಮೊತ್ತವನ್ನು ಭರಿಸಿ ಘಟಕ ನಿರ್ಮಿಸಲು ರೈತರಿಗೆ ಸಾದ್ಯವಾಗುತ್ತಿಲ್ಲ. ಮೇಲಾಗಿ ಜಿಲ್ಲೆಯಲ್ಲಿ ಬೆಳೆಯುವ ವಾಣಿಜ್ಯ ಬೆಳೆಗಳನ್ನು ಒಣಗಿಸಲು 6.00 ಲಕ್ಷ ವೆಚ್ಚದ ಘಟಕದ ಅವಶ್ಯಕತೆ ಕಂಡುಬರುವುದಿಲ್ಲ.

ಆದರಿಂದ ಜಿಲ್ಲೆಯಲ್ಲಿ ಬೆಳೆಯುವ ವಾಣಿಜ್ಯ ಬೆಳೆಗಳ ಕೊಯ್ಲೋತ್ತರ ಸಂಸ್ಕರಣೆಗೆ ಪೂರಕವಾಗಿರುವ ರೈತರಿಗೆ ಅನುಕೂಲಕರವಾಗಿರುವ ಘಟಕಗಳನ್ನು ನಿರ್ಮಿಸಲು ಈ ಅವಕಾಶ ಕಲ್ಪಿಸುವಂತೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ

Leave A Reply

Your email address will not be published.