ವಿಕಲಚೇತನ ತಂಗಿಯೊಂದಿಗೆ ಜೀವನ ನಡೆಸುತ್ತಿರುವ ಬಡ ಮಹಿಳೆಗೆ ಸುಸಜ್ಜಿತ ಮನೆ ನಿರ್ಮಾಣ | ಆ.22ರಂದು ಹಸ್ತಾಂತರ, ಕಟ್ಟೋಣ ಬಾಳಿಗೊಂದು ಸೂರು ತಂಡದ ಮೂರನೇ ಯೋಜನೆ

?ಪ್ರವೀಣ್ ಚೆನ್ನಾವರ

ಸವಣೂರು : ವಿಕಲಚೇತನ ತಂಗಿಯೊಂದಿಗೆ ಇಂದೋ ನಾಳೆಯೋ ಕುಸಿದು ಬೀಳುವ ಮನೆಯಲ್ಲಿ ಜೀವನ ಸಾಗಿಸುತ್ತಿದ್ದ ಮಹಿಳೆಯೋರ್ವರಿಗೆ ಕಟ್ಟೋಣ ಬಾಳಿಗೊಂದು ಸೂರು ತಂಡದಿಂದ ಸುಸಜ್ಜಿತ ಮನೆ ಸೇವಾ ನಿಲಯ ನಿರ್ಮಿಸುವ ಮೂಲಕ ಬದುಕಿಗೆ ಭರವಸೆಯ ಬೆಳಕಾಗಿದ್ದಾರೆ.ಆ ಮನೆ ಆ.22ರಂದು ಗೃಹಪ್ರವೇಶ ಮೂಲಕ ಹಸ್ತಾಂತರ ನಡೆಯಲಿದೆ.

ಇದು ಈ ತಂಡದಿಂದ ಮಾಡುತ್ತಿರುವ ಮೂರನೇ ಯೋಜನೆಯಾಗಿದೆ.ಮೊದಲ ಯೋಜನೆ ಪಾಲ್ತಾಡಿ ಗ್ರಾಮದ ಸುಂದರಿ ಎಂಬ ಮಹಿಳೆಗೆ ಕೊಟ್ಟಿಗೆ,ಬಾವಿ ಸಹಿತ ಸುಸಜ್ಜಿತ ಮನೆ,ಎರಡನೇ ಯೋಜನೆಯಾಗಿ ಕೋರಿಕ್ಕಾರು ನಿವಾಸಿ ಸೀತಾ ಹುಕ್ರ ಅವರ ಮನೆ ರಿಪೇರಿ,ಇದೀಗ ಮೂರನೇ ಯೋಜನೆಯಾಗಿ ಅಂಗವಿಕಲ ತಂಗಿಯೊಂದಿಗೆ ಜೀವನ ಸಾಗಿಸುತ್ತಿರುವ ಪಾಲ್ತಾಡಿಯ ಮಂಜುನಾಥನಗರದ ಗಿರಿಜಾ ರೈ ಅವರಿಗೆ ಸುಸಜ್ಜಿತ ಮನೆ ನಿರ್ಮಾಣ ಕಾರ್ಯ ಮಾಡಿ ಆ.22ರಂದು ಗೃಹಪ್ರವೇಶದೊಂದಿಗೆ ಹಸ್ತಾಂತರ ನಡೆಯಲಿದೆ.

ಏನಿದು ಕಟ್ಟೋಣ ಬಾಳಿಗೊಂದು ಸೂರು ತಂಡ

ಕಳೆದ ಬಾರಿ ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಸೇವಾ ಭಾರತಿ ತಂಡದವರು ಬಡ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ ಸಂಧರ್ಭದಲ್ಲಿ ಸುಂದರಿ ಎಂಬ ವಿಧವೆ ಮಹಿಳೆ ತನ್ನ ವೃದ್ದ ತಂದೆ ಹಾಗೂ ಮೂವರು ಪುಟ್ಟ ಮಕ್ಕಳೊಂದಿಗೆ ಜೋಪಡಿಯಲ್ಲಿ ಜೀವನ ಸಾಗಿಸುತ್ತಿದ್ದಾಗ ಅವರಿಗೆ ಮನೆ ನಿರ್ಮಿಸಿಕೊಡುವ ಸಲುವಾಗಿ ದಾನಿಗಳನ್ನು ಹಾಗೂ ಮಂಜುನಾಥನಗರ ವಿವೇಕಾನಂದ ಯುವಕ ಮಂಡಲ ,ಚೆನ್ನಾವರ ಅಭ್ಯುದಯ ಯುವಕ ಮಂಡಲದವರನ್ನು ಸೇರಿಕೊಂಡು ರಚಿಸಿದ ವ್ಯಾಟ್ಸಾಪ್ ಗ್ರೂಪ್ ಈ ಕಟ್ಟೋಣ ಬಾಳಿಗೊಂದು ಸೂರು ತಂಡ.

ಕೊರೊನಾ ಸಮಯದಲ್ಲಿ ಎಲ್ಲರೂ ಮನೆಯೊಳಗಿದ್ದು ಆರೋಗ್ಯ ಮತ್ತು ಭವಿಷ್ಯದ ಚಿಂತೆಯಲ್ಲಿದ್ದರೆ ಈ ತಂಡ ಮತ್ತೊಬ್ಬರ ಬದುಕು ಕಟ್ಟುವ ಕೆಲಸ ಮಾಡಿದೆ.
ಅವರು ಈ ತಂಡದ ಮೂಲಕ 75,000 ನಗದು ಸಂಗ್ರಹ ಮತ್ತು ದಾನಿಗಳ ನೆರವಿನ ಜೊತೆಗೆ ಶ್ರಮದಾನದ ಮೂಲಕ ಬಡ ಕುಟುಂಬವೊಂದಕ್ಕೆ ಮನೆ ಕಟ್ಟಿ ಮಾದರಿಯಾಗಿದ್ದಾರೆ.
ಸುಮಾರು 4.5 ಲಕ್ಷ ರೂ.ವೆಚ್ಚದಲ್ಲಿ ಮನೆಯೊಂದನ್ನು ನಿರ್ಮಿಸಿ ಹಸ್ತಾಂತರಿಸಲು ಸಿದ್ಧತೆ ನಡೆಸಿದ್ದಾರೆ.
ಈ ತಂಡದಲ್ಲಿ ಸುಮಾರು 75,000 ನಗದು ಸಂಗ್ರಹ,60,000 ವೆಚ್ಚದ ಸಾಮಾಗ್ರಿ ಸಂಗ್ರಹ,ಕಂದಾಯ ಇಲಾಖೆಯ ಮೂಲಕ 50,000 ಹಾಗೂ ಬಂಟರ ಸಂಘದ ಕಾರ್ಯದರ್ಶಿ ರಾಕೇಶ್ ರೈ ಅವರ ನೇತೃತ್ವದಲ್ಲಿ ಬಂಟರ ಸಂಘದ ಸದಸ್ಯರಿಂದ 1,60,000 ನಗದು ಸಂಗ್ರಹ ಮಾಡಲಾಗಿದೆ.

ಸವಣೂರು ಗ್ರಾಮ ಪಂಚಾಯತ್‍ನ ಪಾಲ್ತಾಡಿ ಗ್ರಾಮದ ಮಂಜುನಾಥನಗರ ನಿವಾಸಿ ಗಿರಿಜಾ ರೈ ಅವರು ತನ್ನ ಅಂಗವಿಕಲ ತಂಗಿ ರಾಜೀವಿ ಅವರೊಂದಿಗೆ ವಾಸವಾಗಿದ್ದು,ಮಣ್ಣಿನ ಗೋಡೆಯ ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿ ಇದ್ದ ಮನೆ ಗಾಳಿ ಮಳೆಯಿಂದ ಭಾಗಶಃ ಹಾನಿಯಾಗಿತ್ತು.ಇದು ಸಂಪೂರ್ಣವಾಗಿ ಧರಶಾಹಿಯಾಗುವ ಹಂತದಲ್ಲಿದ್ದಾಗ ತಂಡದ ಮೂಲಕ ತೆರವು ಮಾಡುವ ಕೆಲಸ ಮಾಡಲಾಯಿತು. ದಾಸ್ತಾನಿನಂತಿರುವ ಸಣ್ಣ ಮನೆ, ಅಡುಗೆ ಕೋಣೆಯಿಂದ ಹಿಡಿದು ಎಲ್ಲವೂ ಅದರಲ್ಲಿಯೇ ನಡೆಯಬೇಕು.

ಮಳೆ ಬಂದರೆ ಸೋರುವ ಮೇಲ್ಛಾವಣಿ, ಭದ್ರತೆ ಇಲ್ಲವೇ ಇಲ್ಲ ಇಂತಹ ಅಸಹಾಯಕ ಸ್ಥಿತಿಯಲ್ಲಿಯೇ ಗಿರಿಜಾ ರೈ ಹಾಗೂ ಅವರ ಅಂಗವಿಕಲ ತಂಗಿ ಅವರ ಜೀವನ ಕಳೆಯುತ್ತಿದ್ದರು.
ಈ ಸಂದರ್ಭದಲ್ಲಿ ತಂಡದ ಪ್ರಮುಖರಾದ ಸವಣೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ ಅವರು ಬೇಟಿ ನೀಡಿ,ನೂತನ ಮನೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ದಾನಿಗಳನ್ನು ಸಂಪರ್ಕಿಸಿ ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳಲಾಯಿತು.ಇವರಿಗೆ ಬೆಂಬಲವಾಗಿ ಬಂಟರ ಸಂಘದ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಅವರು ಸುಮಾರು 1,60,000 ಸಂಗ್ರಹಿಸಿಕೊಟ್ಟಿದ್ದಾರೆ.

ಇದೀಗ ಮನೆ ನಿರ್ಮಾಣಗೊಂಡು ಆ.22ರಂದು ಗೃಹಪ್ರವೇಶ ನಡೆಸಿ ಗಿರಿಜಾ ರೈ ಅವರಿಗೆ ಹಸ್ತಾಂತರ ನಡೆಯಲಿದೆ.

ಇದು ಕೇವಲ ಮನೆಯಲ್ಲ ದೇವಾಲಯ

ಅಸಹಾಯಕ ಕುಟುಂಬಕ್ಕೆ ಸಹಾಯ ನೀಡುವ ಸಲುವಾಗಿ ಪ್ರಾರಂಭಗೊಂಡ ಕಟ್ಟೋಣ ಬಾಳಿಗೊಂದು ಸೂರು ತಂಡದ ಮೂಲಕ ಕೈಗೊಂಡ ಕಾರ್ಯಗಳು ಯಶಸ್ಸನ್ನು ಕಂಡಿದೆ.ಲಾಕ್‌ಡೌನ್ ಸಂಧರ್ಭದ ವಿರಾಮದ ಸಮಯವನ್ನು ಈ ಮನೆಗೋಸ್ಕರ ತಂಡದ ಸದಸ್ಯರು ವಿನಿಯೋಗಿಸಿದ್ದಾರೆ.ಸಂಘ ಸಂಸ್ಥೆಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತ್, ದಾನಿಗಳ ಸಹಕಾರದಿಂದ ಮೂರನೇ ಯೋಜನೆಯ ಸೇವಾ ನಿಲಯ ನಿರ್ಮಾಣಗೊಂಡಿದೆ.ಸರ್ವರಿಗೂ ಅಭಿಮಾನದ ವಂದನೆಗಳು.

ಇಂದಿರಾ ಬಿ.ಕೆ , ಮುಂದಾಳು ಕಟ್ಟೋಣ ಬಾಳಿಗೊಂದು ಸೂರು ತಂಡ

ಸೇವಾ ನಿಲಯಕ್ಕೆ ಪುತ್ತೂರು ತಾಲೂಕು ಬಂಟರ ಸಂಘದ ಮುಖಾಂತರವಾಗಿ ರೂ 1,63,000/-ನ್ನು ದಾನಿಗಳ ಮತ್ತು ಬಂಟರ ಸಂಘದ ಕ್ಷೇಮ ನಿಧಿಯ ಮುಖಾಂತರವಾಗಿ ಆರ್ಥಿಕವಾದ ಸಹಕಾರವನ್ನು ನೀಡಲಾಗಿದೆ.
ಗಿರಿಜಾ ರೈ ಮತ್ತು ರಾಜೀವಿ ರೈ ಸಹೋದರಿಯರ ಅಸಹಾಯಕ ಸ್ಥಿತಿಯ ಮತ್ತು ಮನೆಯ ಸ್ಥಿತಿಯ ಬಗ್ಗೆ ವಾಟ್ಸಪ್ ಮೂಲಕ ಸಹಕಾರವನ್ನು ಪಡೆದುಕೊಳ್ಳಲಾಗಿದೆ.ಯಾರನ್ನೂ ಕೂಡ ವೈಯುಕ್ತಿಕವಾಗಿ ಸಂಪರ್ಕ ಮಾಡಿ ಸಂಗ್ರಹ ಮಾಡಿಲ್ಲ , ಮನವಿಯನ್ನು ನೋಡಿ ಸ್ವಯಂಪ್ರೇರಣೆಯಿಂದ ಎಲ್ಲಾ ದಾನಿಗಳು ಸ್ಪಂದನೆ ನೀಡಿದ್ದಾರೆ.ವಿಶೇಷವಾಗಿ ಒಮಾನ್ ಬಂಟರ ಸಂಘದ ಅಧ್ಯಕ್ಷರು, ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ತಲಾ 25000 ನೀಡಿದ್ದಾರೆ.

ಬಾರ್ಕೂರು ಮಹಾಸಂಸ್ಥಾನದ ಶ್ರೀ ಶ್ರೀ ವಿಶ್ವಸಂತೋಷ ಸ್ವಾಮೀಜಿಯವರು ವಾಟ್ಸಾಪ್ ಮುಖಾಂತರವಾಗಿ ವಿಚಾರವನ್ನು ತಿಳಿದು ಮಠದ ವತಿಯಿಂದ ಹತ್ತು ಸಾವಿರ ರೂಪಾಯಿಯನ್ನು ಕಳಿಸಿಕೊಟ್ಟಿದ್ದಾರೆ.ಹೀಗೆಯೇ ಹಲವಾರು ಸಹೃದಯಿ ದಾನಿಗಳು ನೇರ ಫಲಾನುಭವಿಗಳ ಖಾತೆಗೆ ಹಣವನ್ನು ಜಮಾ ಮಾಡಿದ್ದಾರೆ.ಅವರೆಲ್ಲರಿಗೂ ಸಂಘದ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳು , ಬಹಳ ಪ್ರಾಮುಖ್ಯವಾಗಿ ಸ್ಥಳೀಯವಾಗಿ ಕಟ್ಟೋಣ ಬಾಳಿಗೊಂದು ಸೂರು ತಂಡದ ಸದಸ್ಯರು , ಯುವ ಸಂಸ್ಥೆಗಳು ಸ್ಥಳೀಯವಾಗಿ ಶ್ರಮದಾನದ ಮುಖಾಂತರವಾಗಿ ಮನೆ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದ್ದಾರೆ‌. ಅಲ್ಲದೆ ಸ್ಥಳೀಯವಾಗಿ ಕೂಡ ಹಲವಾರು ದಾನಿಗಳು ಅಧಿಕಾರಿಗಳು ಸಹಕಾರವನ್ನು ನೀಡಿರುವಂತಹ ದು ಉಲ್ಲೇಖನೀಯ.

ಪುತ್ತೂರು ತಾಲೂಕು ಬಂಟರ ಸಂಘದ ಮೂಲಕವಾಗಿ ಕೂಡ ಕೋವಿಡ್ ನ ಒಂದನೇ ಅಲೆಯ ಸಂದರ್ಭದಲ್ಲಿ ಸುಮಾರು ರೂ ಐದು ಲಕ್ಷಕ್ಕಿಂತ ಮೌಲ್ಯದ ಧನಸಂಗ್ರಹ ಸಹೃದಯಿಗಳಿಂದ ಆಗಿದ್ದು ಆ ಮೂಲಕ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ಕಿಟ್ಟನ್ನು ವಿತರಿಸಲಾಗಿತ್ತು ಈ ವರ್ಷ ಕೂಡ ಇದೇ ತರ ಇನ್ನೂ ಎರಡು ಮನೆಗಳ ನಿರ್ಮಾಣ ಬಂಟರ ಸಂಘದ ಸಹಕಾರದ ಮುಖಾಂತರವಾಗಿ ನಡೆದಿದೆ.

ಅಲ್ಲದೆ ಕೋವಿಡ್ ನಿಯಮಗಳಿಗೆ ಅನುಸಾರವಾಗಿ ಯಾವುದೇ ವೇದಿಕೆಯ ಕಾರ್ಯಕ್ರಮಗಳು ಸಾರ್ವಜನಿಕ ಕಾರ್ಯಕ್ರಮಗಳನ್ನು ಮಾಡಲಿಕ್ಕೆ ಅವಕಾಶ ಇಲ್ಲದ ಕಾರಣ ಪ್ರಮುಖವಾಗಿ ಸೇವಾ ಚಟುವಟಿಕೆಗಳನ್ನು ಮಾಡಲಾಗಿದೆ. ಎರಡು ವರ್ಷಗಳ ಅವಧಿಯಲ್ಲಿ ಬಂಟರ ಸಂಘದ ಕ್ಷೇಮ ನಿಧಿಯ , ಹಾಗೂ ದಾನಿಗಳ ಮೂಲಕವಾಗಿ ಮನೆ ನಿರ್ಮಾಣಕ್ಕಾಗಿ ರೂ 6 ಲಕ್ಷಕ್ಕೂ ಮಿಕ್ಕಿದ ಧನಸಹಾಯ ನೀಡಲಾಗಿದೆ , ಹೆಣ್ಣು ಮಕ್ಕಳ ಮದುವೆಗೆ ಸುಮಾರು ರೂ. 12 ಲಕ್ಷಕ್ಕೂ ಮಿಕ್ಕಿದ ಸಹಕಾರವನ್ನು ನೀಡಲಾಗಿದೆ.
ವೈದ್ಯಕೀಯ ಚಿಕಿತ್ಸೆಗಾಗಿ ಸುಮಾರು ರೂ 8 ಲಕ್ಷಕ್ಕೂ ಮಿಕ್ಕಿದ ಸಹಕಾರವನ್ನು ನೀಡಲಾಗಿದೆ.ಆರ್ಥಿಕ ಸಂಕಷ್ಟದ ವಿದ್ಯಾರ್ಥಿಗಳ ವೈದ್ಯಕೀಯ, ಇಂಜಿನಿಯರಿಂಗ್ ವ್ಯಾಸಂಗ ವ ಮತ್ತು ವಿದ್ಯಾರ್ಥಿ ವೇತನಕ್ಕಾಗಿ ಸುಮಾರು 12 ಲಕ್ಷಕ್ಕೂ ಮಿಕ್ಕಿದ ಧನಸಹಾಯವನ್ನು ನೀಡಲಾಗಿದೆ ಈಸಂದರ್ಭದಲ್ಲಿ ಸಹಕರಿಸಿದ ಸಹೃದಯಿಗಳಿಗೆ ಸಂಘದ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು.

ರಾಕೇಶ್ ರೈ ಕೆಡೆಂಜಿ, ಪ್ರಧಾನ ಕಾರ್ಯದರ್ಶಿ, ಬಂಟರ ಸಂಘ ಪುತ್ತೂರು

Leave A Reply

Your email address will not be published.