ಪುತ್ತೂರು : ಕೆಲವೇ ಗಂಟೆಗಳಲ್ಲಿ ದಂಪತಿ ಕಳೆದುಕೊಂಡ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಪತ್ತೆ ಮಾಡಿದ ಪೊಲೀಸ್ ಶಿವಪ್ಪ ನಾಯ್ಕ್
ದಂಪತಿಗಳು ಬಸ್‌ನಲ್ಲಿ ಕಳೆದು ಹೋದ ಲಕ್ಷಾಂತರ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಅನ್ನು ಕೆಲವೇ ಗಂಟೆಗಳಲ್ಲಿ ಹೆಡ್‌ಕಾನ್‌ಸ್ಟೇಬಲ್ ಅವರು ಪತ್ತೆ ಹಚ್ಚಿ ವಾರಿಸುದಾರರಿಗೆ ಹಿಂದಿರುಗಿಸಿದ ಘಟನೆ ಆ.20ರಂದು ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರು ನಗರ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಆಗಿರುವ ಶಿವಪ್ಪ ನಾಯ್ಕ್ ಅವರ ಸಮಯ ಪ್ರಜ್ಞೆಯಿಂದ ಬ್ಯಾಗ್ ಪತ್ತೆ ಮಾಡಿ ದಂಪತಿಗಳಿಗೆ ನೀಡಿ, ಇದೀಗ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸತೀಶ್ ದಂಪತಿ ಪಕಳಕುಂಜದಿಂದ ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಬಂದು ಪುತ್ತೂರು ಬಸ್ ನಿಲ್ದಾಣದಲ್ಲಿ ಇಳಿದಿದ್ದರು,ಬಳಿಕ ತಮ್ಮ ಬ್ಯಾಗ್ ಇಲ್ಲದನ್ನು ಗಮನಿಸಿ ಬ್ಯಾಗ್ ಕಳವಾಗಿದೆ ಎಂದು ಬೊಬ್ಬಿಡುತ್ತಿದ್ದರು.
ಈ ವೇಳೆ ಬಸ್ ನಿಲ್ದಾಣದಲ್ಲಿ ರೌಂಡ್ಸ್ ಮಾಡುತ್ತಿದ್ದ ಪುತ್ತೂರು ನಗರ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಶಿವಪ್ಪ ನಾಯ್ಕ್ ಅವರು ಸತೀಶ್ ದಂಪತಿಯನ್ನು ವಿಚಾರಿಸಿದರು.
ಬಳಿಕ ಬಸ್‌ನಿಲ್ದಾಣದ ಟ್ರಾಫಿಕ್ ಕಂಟ್ರೋಲ್ ಅವರ ಮೂಲಕ ಬಸ್‌ನಿಲ್ದಾಣಕ್ಕೆ ಬಂದ ಬಸ್ ವಿಟ್ಲಕ್ಕೆ ಹೋಗುತ್ತಿದ್ದ ಮಾಹಿತಿ ಪಡೆದು, ಆ ಬಸ್‌ನ ನಿರ್ವಾಹಕರಿಗೆ ಕರೆ ಮಾಡಿ ಬಸ್‌ನಲ್ಲಿ ಕಳೆದು ಹೋದ ಬ್ಯಾಗ್ ಪತ್ತೆಗಾಗಿ ತಿಳಿಸಿದರು.ಬಸ್‌ನಿರ್ವಾಹಕನಿಗೆ ಬಸ್‌ನ ಬ್ಯಾಗ್ ಬಿದ್ದು ಸಿಕ್ಕಿದ್ದು, ಅದನ್ನು ವಿಟ್ಲ ಬಸ್ ನಿಲ್ದಾಣದ ಮೇಲ್ವಿಚಾರಕರಲ್ಲಿ ಕೊಟ್ಟಿರುವುದಾಗಿ ಮಾಹಿತಿ ನೀಡಿದರು.
ಅದೇ ರೀತಿ ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ಶಿವಪ್ಪ ನಾಯ್ಕ ಅವರು ವಿಟ್ಲಕ್ಕೆ ತೆರಳಿ ಕಳೆದು ಹೋದ ಬ್ಯಾಗ್ ಅನ್ನು ಪಡೆದು ಪುತ್ತೂರು ನಗರ ಠಾಣೆಯಲ್ಲಿ ಎ.ಎಸ್.ಐ ಚಂದ್ರ ಅವರ ಉಪಸ್ಥಿತಿಯಲ್ಲಿ ವಾರಿಸುದಾರರಿಗೆ ಹಸ್ತಾಂತರಿಸಿದರು.
ಈಶ್ವರಮಂಗಲದ ಸತೀಶ್ ದಂಪತಿ ಅವರು ತಾವು ಕಳೆದು ಕೊಂಡ 10 ಪವನ್ ಚಿನ್ನಾಭರಣವಿದ್ದ ಬ್ಯಾಗ್ ಅನ್ನು ಪೊಲೀಸರ ಸಮಯ ಪ್ರಜ್ಞೆಯಿಂದ ಪುನಃ ಪಡೆದು ಕೊಂಡು ನೆಮ್ಮದಿಯ ಉಸಿರು ಬಿಟ್ಟಿದ್ದಾರೆ.
ಚಿನ್ನಾಭರಣವಿದ್ದ ಬ್ಯಾಗ್ ಅನ್ನು ಕೆಲವೇ ಗಂಟೆಯಲ್ಲಿ ಪತ್ತೆ ಮಾಡಿ ಕೊಟ್ಟಿರುವ ಪೊಲೀಸರಿಗೆ ದಂಪತಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.ಅಲ್ಲದೆ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಹೆಚ್ಚಿನ ಹೊಗಳಿಕೆಗೆ ಪಾತ್ರರಾಗಿದ್ದಾರೆ.