ಸುಳ್ಯ | ಆಕಸ್ಮಿಕವಾಗಿ ಕಾಲು ಸಂಕದಿಂದ ಹೊಳೆಗೆ ಬಿದ್ದ ವ್ಯಕ್ತಿಯ ಮೃತದೇಹ ಮೂರು ದಿನಗಳ ನಂತರ ಪತ್ತೆ

ಆಕಸ್ಮಿಕವಾಗಿ ಕಾಲು ಜಾರಿ ಕಾಲು ಸಂಕದಿಂದ ಹೊಳೆಗೆ ಬಿದ್ದು ಮೃತಪಟ್ಟ ವ್ಯಕ್ತಿಯ ಶವ ಮೂರು ದಿನದ ನಂತರ ಪತ್ತೆಯಾದ ಘಟನೆ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದಲ್ಲಿ ನಡೆದಿದೆ.

ಏಣಾವರ ನಿವಾಸಿ ಕೆಮ್ಮಾರ ದಿ.ಶೇಷಪ್ಪ ಗೌಡ ರವರ ಪುತ್ರ ಚಂದ್ರಶೇಖರ ಗೌಡ ಕೆಮ್ಮಾರ (ಕುಡೆಂಬಿ) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.

ವಿಪರೀತ ಮದ್ಯ ಸೇವನೆ ಮಾಡುತ್ತಿದ್ದ ಇವರು, ಕಳೆದ ಮೂರು ದಿನಗಳ ಹಿಂದೆ ಮನೆಯಿಂದ ಹೋದವರು ಮತ್ತೆ ಮನೆಗೆ ವಾಪಸ್ಸಾಗಿರಲಿಲ್ಲ. ಆದರೆ ಮನೆಯವರು ಮದ್ಯದ ಚಟದಲ್ಲಿ ಮನೆಗೆ ಬಾರದೆ ಎಲ್ಲೋ ಹೋಗಿರಬಹುದು ಎಂದುಕೊಂಡು ಯಾವುದೇ ದೂರು ನೀಡಿರಲಿಲ್ಲ.

ಎರಡು ದಿನಗಳ ಬಳಿಕ ಅವರ ಪತ್ನಿ ಮೀನಾಕ್ಷಿ ಯವರು ಏಣಾವರದಲ್ಲಿರುವ ಕಾಲು ಸಂಕದ ಬಳಿ ಬರುತ್ತಿರುವಾಗ ಸೇತುವೆಯ ತಳ ಭಾಗದಲ್ಲಿ ಪತಿಯ ಕೊಡೆ ಇರುವುದನ್ನು ಗಮನಿಸಿದರು.

ಆಕಸ್ಮಿಕವಾಗಿ ಹೊಳೆಗೆ ಬಿದ್ದಿರಬಹುದೆಂದು ಸಂಶಯಿಸಿ ತಮ್ಮ ಇಬ್ಬರು ಮಕ್ಕಳನ್ನು ಕರೆದುಕೊಂಡು ಬಂದು ಹೊಳೆಯ ಕೆಳ ಭಾಗದಲ್ಲಿ ಹುಡುಕಾಟ ನಡೆಸಿದ್ದಾರೆ. ಈ ಸಂದರ್ಭ ಸೇತುವೆಯಿಂದ 200 ಮೀಟರ್ ಕೆಳಗಡೆ ಹೊಳೆಯಲ್ಲಿ ಬಿದ್ದಿದ್ದ ತೆಂಗಿನಮರ ಮರದ ಎಡೆಯಲ್ಲಿ ಮೃತದೇಹ ಪತ್ತೆಯಾಗಿದೆ.

ಬಳಿಕ ಸುಳ್ಯ ಪೋಲೀಸರಿಗೆ ವಿಷಯ ತಿಳಿಸಿ, ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಮೇಲಕ್ಕೆತ್ತಿ ಮಹಜರು ನಡೆಸಿ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ನಂತರ ಮೃತರ ಸಂಬಂಧಿಕರು ಮತ್ತು ಮನೆಯವರ ಸಮ್ಮುಖದಲ್ಲಿ ಕೊಡಿಯಾಲಬೈಲಿನಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

ಏಣಾವರದ ಹೊಳೆಗೆ ನಿರ್ಮಿಸಲಾಗಿರುವ ಈ ಕಾಲು ಸೇತುವೆಯು ಬಹಳ ಕಿರಿದಾಗಿದ್ದು, ಎಲ್ಲಾ ವಾಹನಗಳು ಸಂಚರಿಸಲು ಸಾಧ್ಯವಿಲ್ಲ. ಅಲ್ಲದೇ ಕಾಲು ಸೇತುವೆ ಎರಡು ಬದಿಯಲ್ಲಿ ತಡೆಬೇಲಿ ಇಲ್ಲದೇ ಇಂತಹ ಅಪಾಯಕ್ಕೆ ನೂಕುತ್ತಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.