ಸೀರೆಯಲ್ಲಿ ಉಯ್ಯಾಲೆ ಮಾಡಿ ಆಡುತ್ತಿದ್ದಾಗ ಕುತ್ತಿಗೆಗೆ ಬಿಗಿದ ಸೀರೆ, ಬಾಲಕಿ ಸಾವು

ಸೀರೆಯಲ್ಲಿ ಉಯ್ಯಾಲೆ ಮಾಡಿಕೊಂಡು ಆಡುತ್ತಿದ್ದಾಗ ಸೀರೆ ಕುತ್ತಿಗೆಗೆ ಬಿಗಿದು ಒಬ್ಬಳು ಬಾಲಕಿ ಸಾವನ್ನಪ್ಪಿ, ಮತ್ತೊಬ್ಬಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಮೇಘನಾ (12) ಮೃತಪಟ್ಟ ಬಾಲಕಿ. ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ಪೆದ್ದೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇನ್ನೊಬ್ಬ ಬಾಲಕಿಯನ್ನು ಶ್ರೀನಿವಾಸಪುರ ತಾಲ್ಲೂಕಿನ ಯಮನೂರು ಗ್ರಾಮದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪೆದ್ದೂರು ಗ್ರಾಮದ ಮೃತ ಮೇಘನಾ ಮತ್ತು ಶ್ರೀನಿವಾಸಪುರ ತಾಲ್ಲೂಕಿನ ಯಮನೂರು ಗ್ರಾಮದ ಸೋಮಪ್ಪ ಎಂಬುವವರ ಮಗಳಾದ ದೇವಿಶ್ರೀ ಪೆದ್ದೂರು ಗ್ರಾಮದ ತಮ್ಮ ತಾತ ಚಂಗಲರಾಯಪ್ಪ ಮತ್ತು ಅಜ್ಜಿ ಲಕ್ಷ್ಮಮ್ಮ ಮನೆಯಲ್ಲಿ ಇದ್ದುಕೊಂಡು, ನಂಗಲಿ ಆರ್.ಎಂ.ಇಂಟರ್ ನ್ಯಾಷನಲ್ ಶಾಲೆಯಲ್ಲಿ ಆರನೆಯ ತರಗತಿ ಓದುತ್ತಿದ್ದರು. ಈಗ ಶಾಲೆ ಇಲ್ಲದ ಹಿನ್ನೆಲೆ ಇಬ್ಬರು ಸೇರಿ ಮನೆಯ ಚಾವಣಿಯ ಕಬ್ಬಿಣದ ಕೊಂಡಿಗಳಿಗೆ ಎರಡು ಸೀರೆಗಳನ್ನು ಪಕ್ಕ ಪಕ್ಕದಲ್ಲಿ ಉಯ್ಯಾಲೆಯಾಗಿ ಮಾಡಿಕೊಂಡು ಆಡುತ್ತಿದ್ದಾಗ ಎರಡೂ ಸೀರೆಗಳು ಆಕಸ್ಮಿಕವಾಗಿ ಒಂದಾಗಿ ಎರಡೂ ಒಂದರಲ್ಲಿ ಸುತ್ತಿಕೊಂಡಿವೆ.

ಒಂದು ಸೀರೆಯ ಉಯ್ಯಾಲೆಯಲ್ಲಿದ್ದ ಮೇಘನಾ ಕತ್ತಿಗೆ ಗಟ್ಟಿಯಾಗಿ ಸುತ್ತಿಕೊಂಡು ಉಸಿರು ಕಟ್ಟಿಕೊಂಡು ಸಾವನ್ನಪ್ಪಿದ್ದಾಳೆ. ಮತ್ತೊಂದು ಸೀರೆಯಲ್ಲಿ ದೇವಿಶ್ರೀ ಕತ್ತಿಗೆ ಸೀರೆ ಸುತ್ತಿಕೊಂಡು ಕಿರುಚಾಡುತ್ತಿದ್ದಾಗ ಮನೆಯಲ್ಲಿದ್ದ ಅಜ್ಜಿ ಮತ್ತು ತಾತಾ ಬಂದು ಸೀರೆಯನ್ನು ಬಿಡಿಸಿದ್ದಾರೆ. ದೇವಿಶ್ರೀ ಉಸಿರಾಟದಲ್ಲಿ ತೊಂದರೆಯಾಗಿ ಕೋಲಾರ ಜಾಲಪ್ಪ ಆಸ್ಪತ್ರೆಗೆ ಕೂಡಲೇ ದಾಖಲು ಮಾಡಲಾಗಿದೆ. ಆದರೆ ಮೇಘನಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.

ಸ್ಥಳಕ್ಕೆ ನಂಗಲಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Leave A Reply

Your email address will not be published.