ಜಿಲ್ಲೆಯಾದ್ಯಂತ ಹಿಂದೂ ಸಂಘಟನೆಗಳು ನಡೆಸಿದ ಪ್ರತಿಭಟನೆ ವ್ಯರ್ಥವಾಯಿತೇ?ಸ್ವಾತಂತ್ರ್ಯ ರಥಕ್ಕೆ ಅಡ್ಡಿ ಪಡಿಸಿದ ಆರೋಪಿಗಳಿಗೆ ಜಾಮೀನು | 48 ಗಂಟೆಯೊಳಗೆ ಹೊರಬಂದ ಎಸ್.ಡಿ.ಪಿ.ಐ ಕಾರ್ಯಕರ್ತರು

ಇಡೀ ಜಿಲ್ಲೆಯಲ್ಲಿ ಭಾರೀ ಸಂಚಲನ ಮೂಡಿಸಿದ್ದ, ಇಂದು ಹಲವೆಡೆ ಪ್ರತಿಭಟನೆ ಮೂಲಕ ಸರ್ಕಾರದ ಕದ ತಟ್ಟಿದ್ದ ಆ ಒಂದು ಪ್ರಕರಣದ ಆರೋಪಿಗಳಿಗೆ ಜಾಮೀನು ಮಂಜೂರಾಗಿದ್ದು, ಆ ಮೂಲಕ ಸಂಘಟನೆ ಕಾರ್ಯಕರ್ತರ ಕುದಿಯುತ್ತಿರುವ ಕೋಪಕ್ಕೆ ತುಪ್ಪ ಸುರಿದಂತಾಗಿದೆ.

ಸ್ವಾತಂತ್ರೋತ್ಸವದ ದಿನದಂದು ಪುತ್ತೂರು ತಾಲೂಕು ಕಬಕ ಗ್ರಾಮ ಪಂಚಾಯತ್ ಆವರಣದಲ್ಲಿ, ಕೇಂದ್ರ ಸರ್ಕಾರದ ಅಜಾದಿ ಕಾ ಅಮೃತ ಮಹೋತ್ಸವದ ಆಚರಣೆ ಸಂದರ್ಭ ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಹಾಗೂ ಭಾರತ ಮಾತೆಯ ಭಾವಚಿತ್ರವಿರುವ ವಾಹನದ ಚಾಲನೆಗೆ ಅಡ್ಡಿ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮೂವರಿಗೆ ನ್ಯಾಯಲಯ ಜಾಮೀನು ಮುಂಜೂರು ಮಾಡಿದೆ. ಬಂಧನಕ್ಕೆ ಒಳಗಾದ ಕೇವಲ 48 ಗಂಟೆಗಳ ಒಳಗಡೆ ಆರೋಪಿಗಳಿಗೆ ಜಾಮೀನು ದೊರೆತಿದೆ.

ಹಿಂದೂ ಸಂಘಟನೆಗಳಿಂದ ನಡೆದ ಪ್ರತಿಭಟನೆ

ಸಾರ್ವಜನಿಕ ವಲಯದಲ್ಲಿ ಭಾರೀ ಕುತೂಹಲ ಸೃಷ್ಟಿಸಿದ್ದ ಈ ಪ್ರಕರಣದ ಸಮಗ್ರ ತನಿಖೆ ನಡೆಸಿ, ಆ ಮೂಲಕ ದೇಶ ದ್ರೋಹಿಗಳನ್ನು ಮಟ್ಟಹಾಕಬೇಕೆಂಬ ಮನವಿಯೊಂದಿಗೆ ಜಿಲ್ಲೆಯಾದ್ಯಂತ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ರಥ ಜಾಥ ನಡೆಸಿದ್ದವು. ಕೃತ್ಯವೂ ಎಸ್ ಡಿ ಪಿ ಐ ಕಾರ್ಯಕರ್ತರು ನಡೆಸಿದರು ಎಂದು ಆರೋಪಿಸಿ ಆ ಪಕ್ಷವನ್ನು ನಿಷೇಧಿಸಬೇಕು ಎಂದು ಈ ಪ್ರತಿಭಟನೆ ಹಾಗೂ ಜಾಥದಲ್ಲಿ ಕೂಗು ಕೇಳಿ ಬಂದಿತ್ತು.

ಪುತ್ತೂರು ತಾಲೂಕಿನ ಕಬಕ ಗ್ರಾಮದ ವಿದ್ಯಾಪುರ ಮನೆಯ ದಿ. ಮಹಮ್ಮದ್ರವರ ಪುತ್ರ ಕೆ ಅಜೀಜ್ (43), ಕಬಕ ಗ್ರಾಮದ ಮುರ ಮನೆಯ ಉಮ್ಮರ್ ರವರ ಪುತ್ರ ಶಮೀರ್ (40 ) ಹಾಗೂ ಕೊಡಿಪ್ಪಾಡಿ ಗ್ರಾಮದ ಕೊಡಿಪ್ಪಾಡಿ ಮನೆಯ ಉಸ್ಮಾನ್ ಎಂಬವರ ಪುತ್ರ ಅಬ್ದುಲ್ ರಹಿಮಾನ್’ರವರನ್ನು ಈ ಪ್ರಕರಣದಲ್ಲಿ ಆರೋಪಿಗಳು ಎಂದು ಹೆಸರಿಸಿ ಪುತ್ತೂರು ನಗರ ಠಾಣೆ ಪೊಲೀಸರು ಆ 15 ರಂದು ಸಂಜೆ ಬಂಧಿಸಿದ್ದರು.

ಜಾಮೀನು ದೊರೆತ 3 ಆರೋಪಿಗಳ ಸಹಿತ ಒಟ್ಟು 7 ಜನ ಆರೋಪಿಗಳ ಹೆಸರಿನಲ್ಲಿ ಹಾಗೂ ಇತರರ ವಿರುದ್ಧ ಅ 15 ರಂದು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಬಕದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾರವರು “ಆರೋಪಿಗಳು ಕೋವಿಡ್ 19 ರ ನಿಯಾಮವಳಿಯನ್ನು ಉಲ್ಲಂಘಿಸಿ 75ನೇ ವರ್ಷದ ಸ್ವಾತಂತ್ರೋತ್ಸವವನ್ನು ಆಚರಿಸದಂತೆ ಸಾರ್ವಜನಿಕ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪಂಚಾಯತ್ ಅಧ್ಯಕ್ಷರನ್ನು ಕೈಯಿಂದ ದೂಡಿ, ಭಾರತ ಮಾತೆಯ ಭಾವಚಿತ್ರವನ್ನು ಹಾನಿಗೊಳಿಸಿ, ಸಾರ್ವಜನಿಕ ಆಸ್ತಿಗೆ ಹಾನಿಯನ್ನು ಉಂಟು ಮಾಡಿದ್ದಾರೆ’ ಎಂದು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಐಪಿಸಿ ಕಲಂ: 143,147,269,353,323,427 ಜೊತೆಗೆ 149 ಐ.ಪಿ.ಸಿ ಮತ್ತು 2(A) KPDLP ACT ರಡಿಯಲ್ಲಿ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಜೀಜ್, ನೌಷದ್, ಶಮೀರ್, ಹಾರೀಸ್, ಅದ್ದು, ತೌಸೀಪ್, ಶಾಫಿ ಮತ್ತು ಇತರರ ವಿರುದ್ಧ ಈ ಎಲ್ಲ ಸೆಕ್ಷನ್‌ಗಳಯಡಿಯಲ್ಲಿ ಪ್ರಕರಣ ದಾಖಲಾಗಿತ್ತು . ಇವರ ಪೈಕಿ ಅಝೀಜ್, ಸಮೀರ್ ಮತ್ತೂ ಅಬ್ದುಲ್ ರಹಿಮಾನ್ ರನ್ನು ಪೊಲೀಸರು ಆ 15 ರಂದೇ ಸಂಜೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಮಾನ್ಯ ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಈ ಮೂವರಿಗೂ ಪುತ್ತೂರು ನ್ಯಾಯಾಲಯವೂ ಜಾಮೀನು ಮಂಜೂರು ಮಾಡಿದ್ದು,ಉಳಿದ ನಾಲ್ಕು ಆರೋಪಿಗಳ ಬಂಧನವಿನ್ನಷ್ಟೇ ಆಗಬೇಕಿದೆ.

ಆರೋಪಿಗಳ ಪರ ವಕೀಲರಾದ ಆಶ್ರಫ್ ಅಗ್ನಾಡಿ, ಮಜೀದ್ ಖಾನ್, ಅಬ್ದುಲ್ ರಹೀಮಾನ್ ಹಿರೆಬಂಡಾಡಿ, ಮುಸ್ತಫಾ ವಾದಿಸಿದದ್ದರು.

Leave A Reply

Your email address will not be published.