ನಿರಪರಾಧಿಯಾಗಿ ಭಾರತಕ್ಕೆ ಬಂದಿಳಿದ ಹರೀಶ್ ಬಂಗೇರ!!ಕಿಡಿಗೇಡಿಗಳ ಕೃತ್ಯಕ್ಕೆ ಸೌದಿಯಲ್ಲಿ ಬಂಧಿಯಾದ ಬಂಗೇರ ಮರಳಿ ತಾಯಿನಾಡಿಗೆ | ಪ್ರಕರಣ ನಡೆದುಬಂದ ಹಾದಿಯ ನೋಟ

ಈಗ ತಾನೇ ಸರಿದ ಮುಂಜಾನೆ 6 ರ ಹೊತ್ತಿಗೆ ಮೈಮೇಲೆ ಇದ್ದ ಕಷ್ಟಗಳನ್ನೆಲ್ಲ ತೊಲಗಿಸಿಕೊಂಡು ಹರೀಶ್ ಬಂಗೇರ ಭಾರತದ ಮಣ್ಣಿನಲ್ಲಿ ಕಾಲಿಟ್ಟಿದ್ದಾರೆ.

ಹರೀಶ್ ಬಂಗೇರ

ಮನೆಯಲ್ಲಿನ ಕಷ್ಟ,ದುಡಿದು ಬದುಕುವ ಕುಟುಂಬ.ಆ ಕುಟುಂಬದ ಬೆಳವಣಿಗೆ, ಕುಟುಂಬ ಮುಂದೆ ಸಾಗಲು ದುಡಿಮೆಯೇ ಅಗತ್ಯ. ಆ ದುಡಿಮೆಗಾಗಿ ದೂರದ ಸೌದಿಗೆ ತೆರಳಿದ್ದ ಸಂದರ್ಭ ಯಾರೋ ದುಷ್ಕರ್ಮಿಗಳು ದುರುದ್ದೇಶಪೂರ್ವಕವಾಗಿ ಮಾಡಿದ ತಪ್ಪಿಗೆ ಸತತ ಎರಡು ವರ್ಷಗಳ ಮನೆಯವರ ಸಂಪರ್ಕಕ್ಕೆ ಸಿಗದೇ ಕಾರಾಗೃಹದ ಶಿಕ್ಷೆ ಅನುಭವಿಸಿದ ಉಡುಪಿ ಕುಂದಾಪುರ ನಿವಾಸಿ ಹರೀಶ್ ಬಂಗೇರ ಇಂದು ಮರಳಿ ತನ್ನ ತಾಯ್ನಾಡಿಗೆ ಮರಳಿದ ದಿನ.

ಹರೀಶ್ ನರಕ ಅನುಭವಿಸಲು ಕಾರಣರಾದ ಕಿಡಿಗೇಡಿಗಳು

ಹೌದು. 2019 ರ ಡಿಸೆಂಬರ್ ತಿಂಗಳಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಿ.ಎ.ಎ ಎನ್.ಆರ್.ಸಿ ವಿರುದ್ಧ ಭುಗಿಲೆದ್ದಿದ್ದ ಪ್ರತಿಭಟನೆಯ ದಿನ ಪೊಲೀಸರು ಪ್ರತಿಭಟಣಾಕಾರರ ಮೇಲೆ ನಡೆಸಿದ ಲಾಠಿ ಚಾರ್ಜ್ ನ ಫೋಟೋ ಸಹಿತ ವಿಡಿಯೋಗಳನ್ನು ರಂಜಿತ್ ಹೆಂಗವಳ್ಳಿ ಎನ್ನುವ ಯುವಕನೊಬ್ಬ ತನ್ನ ಫೇಸ್ ಬುಕ್ ಖಾತೆಯಲ್ಲಿ ‘ಪೊಲೀಸರಿಂದ ಪ್ರಸಾದ ವಿತರಣೆ’ ಎಂಬ ಶೀರ್ಷಿಕೆಯೊಂದಿಗೆ ಶೇರ್ ಮಾಡುತ್ತಾನೆ. ಸೌದಿಯಲ್ಲಿ ಉದ್ಯೋಗದಲ್ಲಿದ್ದ ಹರೀಶ್ ಬಂಗೇರ ಕೂಡಾ ತನ್ನ ಫೇಸ್ ಬುಕ್ ಖಾತೆಯಲ್ಲಿ ಈ ವೀಡಿಯೋವನ್ನು ಶೇರ್ ಮಾಡುತ್ತಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಹಲವಾರು ಕಮೆಂಟ್’ಗಳು ಬರಲಾರಂಭಿಸುತ್ತವೆ. ಕೆಲವು ಕಡೆಗಳಿಂದ ಬೆದರಿಕೆಗಳು ಬರಲು ಶುರುವಾದಾಗ ಇತ್ತ ಊರಿನಲ್ಲಿದ್ದ ಹರೀಶ್ ಮಡದಿ ಶ್ರೀಮತಿ ಸುಮನಾರಿಗೆ ಭಯವಾಗುತ್ತದೆ. ಅವರು ತನ್ನ ಪತಿಗೆ ತಿಳಿ ಹೇಳಿ ನೀವು ಈಗಲೇ ಇದರ ಬಗ್ಗೆ ಜನರಲ್ಲಿ ಕ್ಷಮೆ ಕೇಳಿ, ಅಕೌಂಟ್ ಡಿಲೀಟ್ ಮಾಡಿ ಎನ್ನುತ್ತಾರೆ. ಅದರಂತೆ ಆ ಕೂಡಲೇ ಹರೀಶ್ ಒಂದು ವಿಡಿಯೋ ಮಾಡಿ, ಅದರಲ್ಲಿ ನನ್ನಿಂದ ತಪ್ಪಾಗಿದೆ ದಯವಿಟ್ಟು ಕ್ಷಮಿಸಿ ಎಂದು ಹೇಳಿ ಬಳಿಕ ತನ್ನ ಖಾತೆಯನ್ನು ತೆಗೆದುಬಿಡುತ್ತಾರೆ.

ಪತ್ನಿ ಮಗು ಸಹಿತ ಹಲವರು ಮಾಜಿ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸುತ್ತಿರುವುದು

ಇಲ್ಲಿಗೇ ಹರೀಶ್ ಬಂಗೇರರು ತನ್ನ ಪ್ರಕರಣ ಇತ್ಯರ್ಥವಾಯಿತು ಎಂದು ನಿಟ್ಟುಸಿರುಬಿಡುತ್ತಿರುವಾಗಲೇ ಮತ್ತೊಂದು ಸಿಡಿಲು ಬಡಿದಂತಾಗುತ್ತದೆ. ತಾನು ಖಾತೆಯನ್ನು ಡಿಲೀಟ್ ಮಾಡಿದ ಮರುದಿನ ಹರೀಶ್ ಬಂಗೇರ ಎಸ್ ಎಂಬ ಹೆಸರಿನಲ್ಲಿ ಒಂದು ನಕಲಿ ಖಾತೆ ತೆರೆದುಕೊಂಡಿದ್ದು, ಅದರಲ್ಲಿ ಸೌದಿ ದೊರೆಯನ್ನು ಅವಹೇಳನಕಾರಿಯಾಗಿ ಬಯ್ಯುವ ಕೆಲ ಪದಗಳು ಹಾಗೂ ಮೆಕ್ಕಾ ದ ಬಗೆಗಿನ ಅವಾಚ್ಯ ಪದಗಳಿಂದ ತುಂಬಿದ ಪೋಸ್ಟ್ ಒಂದನ್ನು ಅಪ್ಲೋಡ್ ಮಾಡಲಾಗುತ್ತದೆ. ಆ ನಂತರ ಆ ಪೋಸ್ಟ್ ನ ಜೊತೆಗೆ ಹರೀಶ್ ಬಂಗೇರ ಸಿಎಎ ವಿರುದ್ಧ ಹಾಕಿದ ಪೋಸ್ಟ್ ಗೆ ಕ್ಷಮೆ ಕೇಳಿದ ವಿಡಿಯೋ ಕೂಡಾ ಬಿಡಲಾಗಿದ್ದು, ತನ್ನಿಂದ ತಪ್ಪಾಗಿದೆ ಎಂದು ಹೇಳುವ ವಿಡಿಯೋ ಕಂಡ ಜನ ಈತನೇ ಈ ಕೃತ್ಯ ನಡೆಸಿದ್ದಾನೆ ಎಂದುಕೊಂಡು ಆ ಕೂಡಲೇ ಅವರು ಕೆಲಸಕ್ಕಿದ್ದ ಕಂಪನಿ ಯಿಂದ ಕೆಲಸ ಕಳೆದುಕೊಳ್ಳುತ್ತಾರೆ ಹಾಗೂ 2019 ಡಿಸೆಂಬರ್ 21ರಂದು ಸೌದಿಯಲ್ಲಿ ಬಂಗೇರರನ್ನು ಬಂಧನವಾಗುತ್ತದೆ.

ಇತ್ತ ಬಂಧನದ ವಿಚಾರ ತಿಳಿದ ಕೂಡಲೇ ಮಡದಿಯ ಸಹಾಯಕ್ಕೆ ನಿಲ್ಲುವವರಾರು ಇರಲಿಲ್ಲ.ಇದೇ ಸಮಯಕ್ಕೆ ಹರೀಶ್ ಆಪ್ತರಾದ ಲೋಕೇಶ್ ಅಂಕದಕಟ್ಟೆ ಎನ್ನುವ ಅಪ್ಪಟ ಸಮಾಜ ಸೇವಕ ಸುಮನಾರ ಜೊತೆಗೆ ಉಡುಪಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ತನ್ನ ಗಂಡನ ಹೆಸರಿನಲ್ಲಿ ನಕಲಿ ಖಾತೆಯೊಂದು ಸೃಷ್ಟಿಯಾಗಿದ್ದು, ಸದ್ಯ ಅವರ ಬಂಧನ ಕೂಡಾ ಆಗಿದೆ ಎಂದು ದೂರು ನೀಡುತ್ತಾರೆ. ಅಂದಿನ ಉಡುಪಿ ಸೈಬರ್ ಕ್ರೈಂ ಸರ್ಕಲ್ ಇನ್ಸ್ಪೆಕ್ಟರ್ ಸೀತಾರಾಮ ಅವರು ಆ ಕೂಡಲೇ ತನಿಖೆ ಕೈಗೆತ್ತಿಕೊಳ್ಳುತ್ತಾರೆ. ಗೂಗಲ್ ನ ಸಹಾಯ ಪಡೆದ ಪೊಲೀಸ್ ಇಲಾಖೆ, ಆ ಖಾತೆ ತೆರೆದ ಮೊಬೈಲ್ ನಂಬರ್ ಪತ್ತೆ ಹಚ್ಚುತ್ತಾರೆ. ಆಗ ಇಡೀ ಪ್ರಕರಣದ ರೂವಾರಿಯೊಬ್ಬ ಸಿಕ್ಕಿಬೀಳುತ್ತಾನೆ, ಆತನ ಬಂಧನಕ್ಕೆ ಪೊಲೀಸರು ಬೆಂಗಳೂರಿಗೆ ತೆರಳುತ್ತಾರೆ. ಆ ನಂಬರ್ ಅಬ್ದುಲ್ ಹುಯಿಜ್ ಎನ್ನುವಾತನಿಗೆ ಸೇರಿದ್ದಾಗಿದ್ದು, ಪೊಲೀಸರ ವಿಚಾರಣೆಯ ವೇಳೆ ಆತ ತನ್ನ ಬೇಕರಿಯ ಫೋನ್ ಪೆ, ಗೂಗಲ್ ಪೆ ಗೆ ಬಳಸುವ ನಂಬರ್ ಎನ್ನುವ ಸುಳ್ಳು ಹೇಳಿ ಪೊಲೀಸರನ್ನು ಯಾಮಾರಿಸಲು ಪ್ರಯತ್ನಿಸಿದ್ದ. ಆದರೆ ಛಲ ಬಿಡದ ಉಡುಪಿ ಪೊಲೀಸರು ಆತನ ಪೂರ್ವಾಪರ ತಿಳಿದುಕೊಂಡಾಗ ಆತನ ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದಾಗಿ ತಿಳಿಯುತ್ತದೆ ಆ ಕೂಡಲೇ ಆತನನ್ನು ಹಾಗೂ ಆತನ ತಮ್ಮನನ್ನು ಬಂಧಿಸಿ ಜೈಲಿಗಟ್ಟಲಾಗುತ್ತದೆ.

ಜೈಲಿಗೆ ಹೋದ ಆರೋಪಿಗಳು ಕೆಲವೇ ದಿನಗಳಲ್ಲಿ ಜಾಮೀನಿನ ಮೇಲೆ ಹೊರಬಂದರೂ, ಯಾವ ತಪ್ಪನ್ನು ಎಸಗದ ನಿರಪರಾಧಿ ಹರೀಶ್ ಮಾತ್ರ ಜೈಲಿನಲ್ಲೇ ಉಳಿಯುವಂತಾಗಿತ್ತು.

ಅಷ್ಟರಲ್ಲಾಗಲೇ ಹೊಸ ಸರ್ಕಲ್ ಇನ್ಸ್ಪೆಕ್ಟರ್ ಚಾರ್ಜ್ ತೆಗೆದುಕೊಳ್ಳುತ್ತಾರೆ.ಅವರು ಬಂದು ಕೆಲ ದಿನಗಳ ಕಾಲ ಪ್ರಕರಣದ ಬಗೆಗೆ ಮಾಹಿತಿ ಕಲೆ ಹಾಕಿ,ಪುನಃ ಪ್ರಕರಣದ ತನಿಖೆ ನಡೆಸುವಾಗ ಕೊಂಚ ತಡವಾಗುತ್ತದೆ.ಇಲ್ಲಿ ಎಲ್ಲಾ ವಿಚಾರದಲ್ಲೂ ಉತ್ತಮವಾಗಿ ಸಹಕರಿಸಿದ್ದು ಕಮಲ್ ಪಂತ್ ಎನ್ನುವ ಐಪಿಎಸ್ ಅಧಿಕಾರಿ, ಉಡುಪಿ ಎಸ್ಪಿ,ಹಾಗೂ ಎಲ್ಲಾ ಇಲಾಖೆಗಳು. ಈ ಪ್ರಕರಣದಲ್ಲಿ ಮೊದಲಿಗೆ ನಾವಿದ್ದೇವೆ, ನೀವೇನೂ ಗಾಬರಿ ಪಡಬೇಡಿ ಎಂದು ಕೆಲ ರಾಜಕಾರಣಿಗಳು ಮುಂದೆ ಬಂದಿದ್ದರೂ ಕೂಡಾ ಕೊನೆಯ ವರೆಗೂ ನಿಂತದ್ದು ಉತ್ತಮ ರಾಜಕಾರಣಿಗಳಾದ ಸಂಸದೆ ಶೋಭಾ ಕರಂದ್ಲಾಜೆ. ಶೋಭಕ್ಕ ಓರ್ವ ಸಹೋದರಿಯಾಗಿ ತಮ್ಮನ ಕಷ್ಟಕ್ಕೆ ಹೆಗಲಾದರೆ, ಇತ್ತ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರ ಪಾತ್ರವೂ ಗಮನಾರ್ಹವಾಗಿದ್ದು, ಈ ಮೊದಲು ರಾಯಭಾರಿ ಕಚೇರಿಯಲ್ಲಿದ್ದ ದೇಶ್ ಬಂಧು ಭಟ್ಟಿ ಹಾಗೂ ಪ್ರಸ್ತುತ ಇರುವ ಸುನಿಲ್ ಕೆ.ಆರ್ ಎಂಬವರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕುತ್ತಿದ್ದರು.

ಅಂತೂ ತನಿಖೆಯ ಎಲ್ಲಾ ಪ್ರಕ್ರಿಯೆಗಳು ಮುಗಿದು, ಹರೀಶ್ ಬಂಗೇರ ನಿರಪರಾಧಿ ಎಂದು ಸಾಬೀತಾಗುವ ದಿನ ಬಂದೇ ಬಿಟ್ಟಿತು.ಈ ವರೆಗೆ ಹರೀಶ್ ಮನೆ ಕಡೆ ತೆರಳದೇ, ಕಷ್ಟ ಕೇಳದೆ ಇದ್ದ ಕೆಲ ಹೆಸರುಪಡೆದುಕೊಳ್ಳಬಯಸುವ ರಾಜಕಾರಣಿಗಳೂ, ನಾಯಕರು ಇಂದು ನಾವಿದ್ದೇವೆ, ನಮ್ಮಿಂದಲೇ ಆತನ ಬಿಡುಗಡೆ ಆಗುತ್ತಿದೆ ಎಂದು ಜಂಭದಿಂದ ಬೀಗುತ್ತಿರುವ ಸುದ್ದಿಯೂ ಕೇಳಿಬರುತ್ತಿದೆ.ಕಳೆದ ತಿಂಗಳು ಹರೀಶ್ ಭಾರತ ಪ್ರವೇಶಕ್ಕೆ ದಿನ ನಿಗದಿಯಾಗಿತ್ತಾದರೂ ಕೆಲ ಪ್ರಕ್ರಿಯೆಗಳು, ಕೋವಿಡ್ ಪರೀಕ್ಷೆಗಳು ಬಾಕಿ ಇದ್ದ ಕಾರಣ ಆಗಸ್ಟ್ 18ಕ್ಕೆ ದಿನ ನಿಗದಿಯಾಗಿದೆ.ಅದರಂತೆ ಇಂದು ಮುಂಜಾನೆ 6:00ರ ಸುಮಾರಿಗೆ ತಾಯಿ ನಾಡಿಗೆ ಮರಳಿದ್ದಾರೆ ಬಂಗೇರ. ಕಷ್ಟಕ್ಕಾಗಿ ವಿದೇಶಕ್ಕೆ ತೆರಳಿದ್ದ ಸಂದರ್ಭ ಆದ ತನ್ನದಲ್ಲದ ತಪ್ಪಿಗೆ ತನ್ನವರ ಮುಖ ನೋಡದೆ ಎರಡು ವರ್ಷಗಳ ಕಾಲ ಅನುಭವಿಸಿದ ನೋವು, ಯಾತನೆಗೆ ಅವಕಾಶ ಮಾಡಿಕೊಟ್ಟ ಆ ಇಬ್ಬರು ದುಷ್ಕರ್ಮಿ ಗಳು ಕಾನೂನಿನ ಬಂಧನದಿಂದ ಮುಕ್ತರಾದರೂ, ಕಾಣದ ದೇವನೊಬ್ಬ ಅವರಿಗೆ ಸರಿಯಾದ ಶಿಕ್ಷೆ ನೀಡದೆ ಬಿಡಲಾರ. ಏನಿಲ್ಲವೆಂದರೂ ಅಮಾಯಕನನ್ನು ನರಕ ಯಾತನೆಗೆ ತಳ್ಳಿದ ಪಾಪ ಪ್ರಜ್ಞೆ ಮಾತ್ರ ಅವರನ್ನು ಹಿಂಸಿಸದೆ ಬಿಡಲಾರದು.

Leave A Reply

Your email address will not be published.