ಗೂಗಲ್ ನಲ್ಲಿದ್ದ ಎಸ್ ಬಿಐ ಹೆಲ್ಪ್ ಲೈನ್ ನಂಬರ್ ಗೆ ಕರೆ ಮಾಡಿ ಹಣ ಕಳೆದುಕೊಂಡ ವ್ಯಕ್ತಿ | ಗೂಗಲ್ ಮಾಡಿ ಪಡೆದ ಹೆಲ್ಪ್ ಲೈನ್ ಗೆ ಕರೆ ಮಾಡುವಾಗ ಎಚ್ಚರ ಎಚ್ಚರ!!

ತಂತ್ರಜ್ಞಾನ ಎಷ್ಟು ಮುಂದುವರಿದಿದೆ ಎನ್ನುವುದಕ್ಕಿಂತಲೂ, ಕಿರಾತಕರ ಬುದ್ಧಿ ಬೆಳವಣಿಗೆ ಅದಕ್ಕಿಂತ ಹೆಚ್ಚೇ ಆಗಿದೆ ಎನ್ನಬಹುದು. ಹೌದು, ಪ್ರತಿಯೊಂದಕ್ಕೂ ತಂತ್ರಜ್ಞಾನವನ್ನು ಅವಲಂಬಿಸುವ ನಾವುಗಳು ಕಾಲ್ ಸೆಂಟರ್ ನಂಬರ್ ಗಳಿಗೂ ಗೂಗಲ್ ಅನ್ನು ಬಳಸುತ್ತಿದ್ದೇವೆ.

ಹುಬ್ಬಳ್ಳಿಯಲ್ಲಿ ಈ ರೀತಿ ಮಾಡಿದ ವ್ಯಕ್ತಿಯೊಬ್ಬ ಅದೆಂತಹ ಸಮಸ್ಯೆಗೆ ಸಿಕ್ಕಿಹಾಕಿಕೊಂಡ ಎಂಬುದನ್ನು ನೀವೇ ನೋಡಿ.

ಬಿಹಾರ ಮೂಲದ ಅಮನ್ ಕುಮಾರ್ ಗೆ ಎಸ್ ಬಿ ಐ ಬ್ಯಾಂಕ್ ನ ಯೋನೋ ಆಪ್ ಸಮಸ್ಯೆ ಉಂಟಾಗಿತ್ತು. ಇದರಿಂದಾಗಿ ಗೂಗಲ್ ಸರ್ಚ್ ಮಾಡಿದ ಆತ, ಗೂಗಲ್ ನಲ್ಲಿ ಸಿಕ್ಕಂತಹ ಎಸ್ ಬಿ ಐ ಯೋನೋ ಬ್ಯಾಂಕ್ ಹೆಲ್ಪ್ ಲೈನ್ ನಂಬರ್ ಗೆ ಕರೆ ಮಾಡಿದ್ದಾನೆ. ಹೀಗೆ ಕರೆ ಮಾಡಿದಾಗ ಪೋನ್ ಸ್ವೀಕರಿಸಿದಂತಹ ಆಗಂತುಕ ವ್ಯಕ್ತಿ, ಇವರ ಸಮಸ್ಯೆಯನ್ನು ಸರಿಪಡಿಸುವ ಭರವಸೆ ನೀಡಿದ್ದಾನೆ.

ಆ ಬಳಿಕ, ಆತನಿಗೆ ಟೀಮ್ ವ್ಯೂವರ್ ಇನ್ ಸ್ಟಾಲ್ ಮಾಡಿಕೊಳ್ಳೋದಕ್ಕೆ ತಿಳಿಸಿದ್ದಾನೆ. ಆ ಆಗಂತುಕ ಹೇಳಿದಂತೆ ಮಾಡಿದ್ದರಿಂದಾಗಿ, ಟೀಂ ವ್ಯೂವರ್ ಮೂಲಕ ಅಮನ್ ಕುಮಾರ್ ನೆಟ್ ಬ್ಯಾಂಕಿಗ್ ಯೂಸರ್ ನೇಮ್ ಹಾಗೂ ಪಾಸ್ ವರ್ಡ್ ಪಡೆದು, ಹಂತ ಹಂತವಾಗಿ ಸುಮಾರು 97 ಸಾವಿರ ರೂಪಾಯಿಯನ್ನು ವರ್ಗಾವಣೆ ಮಾಡಿಕೊಂಡಿದ್ದಾನೆ.

ಹೀಗೆ ಹಣ ಕಳೆದುಕೊಂಡಂತಹ ಅಮನ್ ಕುಮಾರ್ ಅವರು, ಇದೀಗ ತನ್ನ ಹಣ ವಾಪಾಸ್ ಕೊಡಿಸುವಂತೆ ಹುಬ್ಬಳ್ಳಿಯ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿ ಮನವಿ ಮಾಡಿದ್ದಾರೆ.

ಗೂಗಲ್ ನಲ್ಲಿ ಸರ್ಚ್ ಮಾಡಿದಾಗ ಸಿಗುವ ಎಲ್ಲಾ ಹೆಲ್ಪ್ ಲೈನ್ ಸಂಖ್ಯೆಗಳು ಕೆಲವು ವೇಳೆ ಅಧಿಕೃತವಾಗಿರೋದಿಲ್ಲ. ಒಂದು ವೇಳೆ ಇದೇ ರೀತಿ ತಿಳಿಯದೇ ನೀವು ಆ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿದರೆ ನಿಮ್ಮ ಖಾತೆಯೂ ಖಾಲಿ ಆಗಬಹುದು ಎಚ್ಚರ!!

Leave A Reply

Your email address will not be published.