ಮೂಡುಬಿದಿರೆ | 2 ಕಾಡುಹಂದಿಗಳನ್ನು ಬೇಟೆಯಾಡಿ ಮಾಂಸ ಮಾಡುತ್ತಿದ್ದಾಗ ಪೊಲೀಸರ ದಿಢೀರ್ ದಾಳಿ, 12 ಮಂದಿಯ ಬಂಧನ

ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತಿಗೆ ಗ್ರಾಮದ ಕೊಡ್ಯಡ್ಕ ಗುಡ್ಡೆಯಂಗಡಿ ಮೆನೇಜಸ್ ಕಂಪೌಂಡ್‌ನ ಜಾನ್ ಸಿ.ಮೆನೇಜಸ್ ಎಂಬುವರ ಮನೆ ಹಿಂಬದಿಯಲ್ಲಿ ಬೇಟೆಯಾಡಿ ತಂದಿದ್ದ ಕಾಡು ಹಂದಿಯನ್ನು ಮಾಂಸ ಮಾಡುತ್ತಿದ್ದ ಸಂದರ್ಭ ದಾಳಿ ನಡೆಸಿದ ಪೊಲೀಸರು 12 ಮಂದಿಯನ್ನು ಬಂಧಿಸಿದ ಘಟನೆ ನಡೆದಿದೆ.

ಮೂಡುಬಿದಿರೆ ತಾಲೂಕು ಮಿತ್ತಬೈಲು ನಿವಾಸಿ ಜಾನ್ ಸಿ.ಮೆನೇಜಸ್, ಕಲ್ಲಮುಂಡೂರು ಗ್ರಾಮದ ನಿವಾಸಿಗಳ ಶ್ರೀನಿವಾಸ, ಗುರುಪ್ರಸಾದ್, ಅಜೇಯ್, ಸನತ್, ಗಣೇಶ ಬೆಳುವಾಯಿ ಗ್ರಾಮದ ಜೋಯೆಲ್ ಅನಿಲ್ ಡಿಸೋಜ, ಪಾಲಡ್ಕ ಗ್ರಾಮದ ಹರೀಶ್ ಪೂಜಾರಿ, ನೋಣಯ್ಯ, ಕಡಂದಲೆ ಗ್ರಾಮದ ಮೋಹನ್ ಗೌಡ, ರಮೇಶ್, ಕಾರ್ಕಳ ತಾಲೂಕು ಬೋಳ ಗ್ರಾಮದ ವಿನಯ್ ಪೂಜಾರಿ ಬಂಧಿತರು.

ಖಚಿತ ಮಾಹಿತಿ ಮೇರೆಗೆ ಭಾನುವಾರ ರಾತ್ರಿ 8.30 ರ ಸುಮಾರಿಗೆ ಪೊಲೀಸರು ದಾಳಿ ನಡೆಸಿದ್ದಾರೆ. ಮೀಸಲು ಅರಣ್ಯಕ್ಕೆ ಹೋಗಿ ಹಂದಿ ಬೇಟೆಯಾಡಿ ತಂದಿದ್ದರು.

Ad Widget
Ad Widget

Ad Widget

Ad Widget

ಆರೋಪಿಗಳಿಂದ ಸಾಯಿಸಿದ 2 ಕಾಡು ಹಂದಿ, 4 ಸಿಂಗಲ್ ಬ್ಯಾರೆಲ್ ರೈಫಲ್, 2 ಬಂದೂಕಿನ ತೋಟೆ, 4 ಹಂದಿ ಹಿಡಿಯಲು ಉಪಯೋಗಿಸಿದ ಬಲೆ, 1 ಕಬ್ಬಿಣದ ಬರ್ಚಿ, 3 ಹಲಗಿನ ಕತ್ತಿ, 3 ದೊಡ್ಡ ಚೂರಿ, 1 ಗ್ಯಾಸ್ ಸಿಲಿಂಡರ್ ಮತ್ತು ಹಂದಿ ಚರ್ಮ ಸುಡಲು ಬಳಸಿದ ಗ್ಯಾಸ್ ಬರ್ನರ್, 2 ಮರದ ತುಂಡು, 1 ಕಬ್ಬಿಣದ ಟೇಬಲ್, 2 ಓಮಿನಿ ಕಾರು, 12 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಕೃಷಿ ನಾಶಮಾಡುವ ಕಾಡು ಪ್ರಾಣಿಗಳನ್ನು ಓಡಿಸಲು ಬಂದೂಕು ಪರವಾನಗಿ ಪಡೆದು ಅಕ್ರಮವಾಗಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಬಳಸುತ್ತಿದ್ದರು ಎಂದು ತಿಳಿದುಬಂದಿದೆ. ಹಂದಿ ಬೇಟೆ ಈ ತಂಡದ ಪ್ರಮುಖ ಉದ್ದೇಶವಾಗಿದ್ದು, ದಾರಿಯಲ್ಲಿ ಸಿಗುವ ಇತರ ಪ್ರಾಣಿಗಳನ್ನು ಕೊಂದು ಮಾಂಸ ಮಾಡುತ್ತಿದ್ದರು. ಇಂದೊಂದು ಸ್ನೇಹಿತರ ತಂಡವಾಗಿದ್ದು, ಸ್ವಂತಕ್ಕಾಗಿ ಬೇಟೆಯಾಡಿ ಮಾಂಸ ಮಾಡುವುದು ಹಾಗೂ ಇತರರು ಕರೆದಾಗ ಹೋಗಿ ಬೇಟೆಯಾಡಿ ಕೊಡುತ್ತಿದ್ದರು. ತಂಡ ಹಿಂದೆಯೂ ಹಲವು ಬಾರಿ ಬೇಟೆಯಾಡಿರುವುದು ಮತ್ತು ಮೂಡುಬಿದಿರೆ ಹಾಗೂ ಕಾರ್ಕಳ ತಾಲೂಕಿನಲ್ಲಿ ಇಂತಹ ಹಲವು ತಂಡಗಳಿರುವ ಕುರಿತು ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ತಂಡ ಮಾರಕ ಆಯುಧಗಳನ್ನು ಹೊಂದಿರುವುದರಿಂದ ಮೂಡುಬಿದಿರೆ-ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ ನಡೆದಿರುವ ಹೆದ್ದಾರಿ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆಯೇ ಎನ್ನುವ ನಿಟ್ಟಿನಲ್ಲೂ ವಿಚಾರಣೆ ನಡೆಸಲಾಗುವುದು. ಹೆದ್ದಾರಿ ದರೋಡೆಯ ಪ್ರಕರಣಗಳಲ್ಲಿ ಈಗಾಗಲೇ 20 ಮಂದಿಯನ್ನ ಬಂಧಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ವಿಚಾರಣೆ ವೇಳೆ ಬೇಟೆಯಾಡುವುದರಲ್ಲಿ ತಪ್ಪೇನು, ಕಾಡು ಹಂದಿ ಅಲ್ಲವೇ ಎಂದು ಪ್ರಶ್ನಿಸುವ ಮೂಲಕ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಕೂಡ ತಿಳಿದುಬಂದಿದೆ.

ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆಗಾಗಿ ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ.

Leave a Reply

error: Content is protected !!
Scroll to Top
%d bloggers like this: