ಇನ್ನು ಮುಂದೆ ‘ಯೂಸ್ ಅಂಡ್ ಥ್ರೋ ಪ್ಲಾಸ್ಟಿಕ್’ ಗಳ ಬಳಕೆ, ತಯಾರಿಕೆ ಹಾಗೂ ಮಾರಾಟ ಸಂಪೂರ್ಣ ನಿಷೇಧ | ಕೇಂದ್ರ ಸರ್ಕಾರ ಘೋಷಣೆ

ನವದೆಹಲಿ : ಭಾರತವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತವಾಗಿಸುವ ನಿಟ್ಟಿನಲ್ಲಿ, ‘ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳ’ ಬಳಕೆ, ತಯಾರಿಕೆ ಹಾಗೂ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

ಮುಂದಿನ ವರ್ಷ 2022 ರ ಜುಲೈ 1 ರಿಂದ ಈ ನಿಯಮಗಳು ಜಾರಿಯಾಗಲಿವೆ. ಸ್ಟ್ರಾಗಳು, ತಟ್ಟೆಗಳು, ಕಪ್‌ಗಳು, ಟ್ರೇಗಳು ಮತ್ತು ಪಾಲಿಸ್ಟೈರೀನ್‌ಗಳಿಗೆ ಈ ನಿಯಮಗಳು ಅನ್ವಯವಾಗುತ್ತದೆ.

ಏಕ ಬಳಕೆಯ (use and throw) ಪ್ಲಾಸ್ಟಿಕ್ ವಸ್ತುಗಳನ್ನು, ಕೇವಲ ಒಂದೇ ಬಾರಿ ಬಳಸಿ ನಂತರ ಎಸೆಯುವುದರಿಂದ ಇದು ಪರಿಸರಕ್ಕೆ ಹಾನಿಕಾರಕ. ಆದ್ದರಿಂದ, ಇದರ ತಯಾರಿಕೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗುವುದು ಎಂದು ಸರ್ಕಾರ ಶುಕ್ರವಾರ ಘೋಷಿಸಿದೆ.

ಈ ನಿಯಮ ಜಾರಿ ಆದ ಬಳಿಕ ಯಾವುದೇ ಕಾರ್ಯಕ್ರಮಗಳು, ಹೋಟೆಲ್​ಗಳು, ಅಂಗಡಿಗಳು ಹಾಗೂ ಬೀದಿ ಬದಿ ವ್ಯಾಪಾರಿಗಳು ಪ್ಲಾಸ್ಟಿಕ್​​ ಲೋಟ-ತಟ್ಟೆ ಬಳಸುವಂತಿಲ್ಲ.

ಪರಿಸರ ಸಚಿವಾಲಯ ಮಾಡಿದ ಈ ನಿಯಮವನ್ನು ಎಲ್ಲಾ ಭಾರತೀಯರೂ ತಿಳಿದುಕೊಳ್ಳಬೇಕು. ಒಂದು ವೇಳೆ ಈ ನಿಯಮಗಳನ್ನು ಉಲ್ಲಂಘಿಸಿದರೆ, ದಂಡ ಮತ್ತು ಶಿಕ್ಷಾರ್ಹ ಅಪರಾಧವಾಗಲಿದೆ.

ಇದಕ್ಕೆ ಅನುಗುಣವಾಗಿ ಸರ್ಕಾರವು ಪಾಲಿಥಿನ್ ಚೀಲಗಳ ದಪ್ಪವನ್ನು 50 ಮೈಕ್ರಾನ್‌ಗಳಿಂದ 120 ಮೈಕ್ರಾನ್‌ಗಳಿಗೆ ಹೆಚ್ಚಿಸಿದ್ದು,120 ಮೈಕ್ರಾನ್‌ಗಳಿಗಿಂತ ಕಡಿಮೆ ಇರುವ ಬ್ಯಾಗ್‌ಗಳನ್ನು ಡಿಸೆಂಬರ್ 31, 2022 ರಿಂದ ನಿಷೇಧಿಸಲಾಗುವುದು.

ಪಾಲಿಥಿನ್ ಬ್ಯಾಗ್​ಗಳ ದಪ್ಪದಲ್ಲಿನ ಬದಲಾವಣೆಯನ್ನು ಎರಡು ಹಂತಗಳಲ್ಲಿ ಅಳವಡಿಸಲಾಗುವುದು. ಮೊದಲ ಹಂತವು ಸೆಪ್ಟೆಂಬರ್ 30 ರಂದು ಆರಂಭವಾಗಲಿದ್ದು, 75 ಮೈಕ್ರಾನ್‌ಗಳಿಗಿಂತ ಕಡಿಮೆ ಇರುವ ಚೀಲಗಳ ಮೇಲೆ ನಿಷೇಧ ಹೇರಲಾಗುತ್ತದೆ.

ಈ ನಿಯಮ ಕಾಂಪೋಸ್ಟ್ ಮಾಡಬಹುದಾದ ಪ್ಲಾಸ್ಟಿಕ್‌ನಿಂದ ಮಾಡಿದ ಚೀಲಗಳನ್ನು ಬಳಸಲು ಅನ್ವಯಿಸುವುದಿಲ್ಲ. ಈ ಬ್ಯಾಗ್‌ಗಳ ತಯಾರಕರು ಅಥವಾ ಅವುಗಳನ್ನು ಬಳಸುವ ಬ್ರಾಂಡ್ ಮಾಲೀಕರು ಅವುಗಳನ್ನು ಮಾರುವ ಅಥವಾ ಬಳಸುವ ಮೊದಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (CPCB) ಪ್ರಮಾಣಪತ್ರವನ್ನು ಪಡೆಯಬೇಕಾಗುತ್ತದೆ.

ತ್ಯಾಜ್ಯ ವಿಂಗಡಣೆ, ವಿಲೇವಾರಿ ಖಚಿತಪಡಿಸಿಕೊಳ್ಳಲು ಸ್ಥಳೀಯ ಸಂಸ್ಥೆಗಳು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳು ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಸ್ಥಾಪಿಸುವ ಮತ್ತು ಅದನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುತ್ತವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Leave A Reply

Your email address will not be published.