ದಿ.ವಿಠಲ ಗೌಡ ಕಾನಾವುಜಾಲು ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

ಉತ್ತಮ ವ್ಯಕ್ತಿತ್ವದಿಂದ ಸಮಾಜದಲ್ಲಿ ಚಿರಸ್ಥಾಯಿ : ಉಮೇಶ್ ಕೆಎಂಬಿ

ಪ್ರತಿಯೊಬ್ಬರನ್ನು ಗೌರವಿಸುವ ಸ್ನೇಹಜೀವಿ : ಜಗನ್ನಾಥ ಪೂಜಾರಿ ಮುಕ್ಕೂರು

ಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧಕ : ಕುಂಬ್ರ ದಯಾಕರ ಆಳ್ವ

ಮುಕ್ಕೂರು : ಕೃಷಿ, ಧಾರ್ಮಿಕ, ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ವಿಠಲ ಗೌಡ ಕಾನಾವುಜಾಲು ಉತ್ತಮ ವ್ಯಕ್ತಿತ್ವದಿಂದ ನಮ್ಮೆಲ್ಲರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದು ಪೆರುವಾಜೆ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಹೇಳಿದರು.

ಮುಕ್ಕೂರು-ಕುಂಡಡ್ಕದ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ದಿ.ವಿಠಲ ಗೌಡ ಕಾನಾವುಜಾಲು ಅವರಿಗೆ ಆ.12 ರಂದು ಮುಕ್ಕೂರಿನಲ್ಲಿ ನಡೆದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ನುಡಿ ನಮನ ಸಲ್ಲಿಸಿದರು. ಊರ ಗೌಡರಾಗಿ ಸಮುದಾಯದ ಆಚಾರ-ವಿಚಾರಗಳನ್ನು ಮನೆ ಮನೆಗೆ ಪಸರಿಸಿದ್ದಾರೆ. ಕೃಷಿಕನಾಗಿಯು ಕಾನಾವುಜಾಲು ಮನೆತನೆತದ ಹಿರಿಮೆ ಪರಿಚಯಿಸಿದ ವಿಠಲ ಗೌಡ ಅವರು ಸಂಸ್ಕಾರ, ಸಂಸ್ಕೃತಿಯ ಬದುಕು ಸಾಗಿಸಿದ್ದಾರೆ ಎಂದರು.

ಪೆರುವಾಜೆ ಗ್ರಾ.ಪಂ.ಅಧ್ಯಕ್ಷ, ಮುಕ್ಕೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ, ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಜಾತಿ, ಮತ, ಧರ್ಮದ ಬೇಧವಿಲ್ಲದೆ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಠಲ ಗೌಡ ಸ್ನೇಹಜೀವಿ ವ್ಯಕ್ತಿತ್ವದವರು. ಮನೆಗೆ ಯಾರೇ ಅತಿಥಿಗಳು ಬಂದರೂ ಅತ್ಯಂತ ಗೌರವದಿಂದ ಆದರಿಸುತ್ತಿದ್ದರು. ತನ್ನ ಉತ್ತಮ ಗುಣಗಳನ್ನು ಮಕ್ಕಳಲ್ಲಿ, ಸಹೋದರರಲ್ಲಿ ಬೆಳೆಸಿದ್ದಾರೆ. ನೇರ-ನುಡಿಯ ನಡೆಯಿಂದ ಜಾಲು ಮನೆತನಕ್ಕೆ ತನ್ನದೇ ಆದ ಗೌರವ ಸಂಪಾದಿಸಿದರು ಎಂದರು.

ಮಂಗಳೂರು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿರ್ದೇಶಕ ಕುಂಬ್ರ ದಯಾಕರ ಆಳ್ವ ಮಾತನಾಡಿ, ವಿಠಲ ಗೌಡ ಅವರು ಕೃಷಿಕರಾಗಿ ಸಾಕಷ್ಟು ಸಾಧನೆ ಮಾಡಿದವರು. ತರವಾಡು ಮನೆಯ ಯಜಮಾನರಾಗಿ ಧಾರ್ಮಿಕ ಸೇವೆ ಮಾಡಿದವರು. ಅತ್ಯಂತ ಒಡನಾಡಿ ಆಗಿದ್ದ ಅವರು ಎಲ್ಲರೊಂದಿಗೆ ಬೆರೆತು ಮಾತನಾಡುವ ಗುಣ ಹೊಂದಿದರು. ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ ಎಂದರು.

ಮುಕ್ಕೂರು-ಕುಂಡಡ್ಕ ಜ್ಯೋತಿ ಯುವಕ ಮಂಡಲ ಅಧ್ಯಕ್ಷ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ನಾರಾಯಣ ಕೊಂಡೆಪ್ಪಾಡಿ ಮಾತನಾಡಿ, ಉತ್ತಮ ಮನೆತನೆದ ವ್ಯಕ್ತಿಯಾಗಿ ತನ್ನ ವ್ಯಕ್ತಿತ್ವದ ಮೂಲಕ ಸಮಾಜದಲ್ಲಿ ಸ್ಥಾನಮಾನ ಗಳಿಸಿದ ವಿಠಲ ಗೌಡ ಕಾನಾವು ಜಾಲು ಅವರು ನಮಗೆಲ್ಲ ಮಾರ್ಗದರ್ಶಕ ಸ್ಥಾನದಲ್ಲಿದ್ದರು. ಅವರ ಉತ್ತಮ ವಿಚಾರಗಳನ್ನು ಪಾಲಿಸುವ ಮೂಲಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸೋಣ ಎಂದರು.

ಮುಕ್ಕೂರು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಕುಂಞಣ್ಣ ನಾಯ್ಕ ಅಡ್ಯತಕಂಡ ನುಡಿನಮನ ಸಲ್ಲಿಸಿದರು. ಪೆರುವೋಡಿ ದೇವಾಲಯದ ಪರವಾಗಿ ಆಡಳಿತ ಸಮಿತಿ ಸದಸ್ಯ ಕುಶಾಲಪ್ಪ ಗೌಡ ಪೆರುವಾಜೆ ದೇವಾಲಯದ ಅಭಿವೃದ್ಧಿಗೆ ವಿಠಲ ಗೌಡ ಅವರ ಕೊಡುಗೆಯನ್ನು ಸ್ಮರಿಸಿದರು. ಕಾನಾವು ಜಾಲು ಕುಟುಂಬದ ಪರವಾಗಿ ಯತೀಶ್ ಕಾನಾವು ಜಾಲು ಅವರು ಸರ್ವರಿಗೆ ಕೃತಜ್ಞತೆ ಸಲ್ಲಿಸಿದರು.
 
ವೇದಿಕೆಯಲ್ಲಿ ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು, ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯಂತ ಕುಂಡಡ್ಕ ಉಪಸ್ಥಿತರಿದ್ದರು. ಮಹೇಶ್ ಕುಂಡಡ್ಕ ಕಾರ್ಯಕ್ರಮ ನಿರೂಪಿಸಿದರು.

Leave A Reply

Your email address will not be published.