ಸುಬ್ರಹ್ಮಣ್ಯ: ಕುಮಾರಧಾರ ಸ್ನಾನಘಟ್ಟ ಜಲಾವೃತ | ಮುಳುಗಿತು ದರ್ಪಣತೀರ್ಥ ಸೇತುವೆ

ಕಡಬ : ಘಟ್ಟ ಪ್ರದೇಶದಲ್ಲಿ ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಶುಕ್ರವಾರ ಸುರಿದ ನಿರಂತರ ಮಳೆಗೆ ಕುಮಾರಧಾರ ನದಿಯಲ್ಲಿ ಭಾರೀ ಪ್ರವಾಹ ಹರಿದು ಬಂದು ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಜಲಾವೃತಗೊಂಡಿತ್ತು. ಕುಮಾರಧಾರದ ಉಪನದಿಯಾದ ದರ್ಪಣತೀರ್ಥವು ತುಂಬಿ ಹರಿದು ದರ್ಪಣತೀರ್ಥ ಸೇತುವೆಯು ಮುಳುಗಡೆಗೊಂಡಿತ್ತು.

ಇದರಿಂದಾಗಿ ಸುಬ್ರಹ್ಮಣ್ಯ-ಪುತ್ತೂರು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕುಕ್ಕೆಯ ಪರಿಸರದಲ್ಲಿ ಸುರಿಯುತ್ತಿರುವ ಧಾರಾಕಾರ ಭಾರೀ ಮಳೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ನದಿ
ತೊರೆ, ಹಳ್ಳ ಕೊಳ್ಳಗಳು ತುಂಬಿ ಹರಿದಿದೆ.

ಕುಮಾರಪರ್ವತ ಸೇರಿದಂತೆ ಘಟ್ಟ ಪ್ರದೇಶದಲ್ಲಿ ಸುರಿದ ಬಾರೀ ಮಳೆಯ ಪರಿಣಾಮ ಕುಮಾರಧಾರ ನದಿಯು ಉಕ್ಕಿ ಹರಿಯಿತು.ಇದರಿಂದಾಗಿ ಕುಮಾರಧಾರ ಸ್ನಾನಘಟ್ಟವು ಶನಿವಾರ ಮುಂಜಾನೆಯಿಂದ ಮುಳುಗಡೆಗೊಂಡಿತ್ತು. ಸ್ನಾನಘಟ್ಟದಲ್ಲಿ ನಿರ್ಮಿತವಾಗಿದ್ದ ಶೌಚಾಲಯ, ಡ್ರೆಸ್ಸಿಂಗ್ ರೂಂ ನೀರಿನಿಂದ ಆವೃತಗೊಂಡಿತ್ತು.

ಅಲ್ಲದೆ ಸ್ನಾನಘಟ್ಟದಲ್ಲಿದ್ದ ಶ್ರೀ ದೇವರ ಅವಭೃತ ಕಟ್ಟೆಯು ಭಾಗಶ: ಮುಳುಗಡೆಗೊಂಡಿತ್ತು. ಸ್ನಾನಘಟ್ಟ ಮುಳುಗಡೆಯಾದುದರಿಂದ ಭಕ್ತರು ತೀರ ಪ್ರದೇಶದಲ್ಲಿ ಪಾತ್ರೆಗಳಿಂದ ಮೂಲಕ ನೀರನ್ನು ಹಾಕಿ ತೀರ್ಥಸ್ನಾನ ಪೂರೈಸಿದರು. ಕುಮಾರಧಾರ ನದಿಯ ಉಪನದಿಯಾದ ದರ್ಪಣತೀರ್ಥ ನದಿಯು ತುಂಬಿ ಹರಿದು ಸೇತುವೆ ಮುಳುಗಡೆಗೊಂಡಿತ್ತು.ಅಲ್ಲದೆ ಪುತ್ತೂರು-ಸುಬ್ರಹ್ಮಣ್ಯ ರಸ್ತೆಯು ಜಲಾವೃತ್ತವಾಗಿತ್ತು.

ಇದರಿಂದಾಗಿ ಸಂಚಾರ ಸ್ಥಗಿತಗೊಂಡಿತ್ತು. ಸುಬ್ರಹ್ಮಣ್ಯ ಪೋಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಮುಂಜಾಗೃತಾ ಕ್ರಮ ಕೈಗೊಂಡಿದ್ದರು. ಅಲ್ಲದೆ ದರ್ಪಣ ತೀರ್ಥದ ನೀರು ಸಮೀಪದ ಕೃಷಿ ತೋಟಗಳಿಗೆ ನೀರು ನುಗ್ಗಿತು. ಇದರಿಂದಾಗಿ ಅನೇಕ ಫಲವಸ್ತುಗಳು ಹಾಗೂ ಕೃಷಿಕರುಹಾಕಿದ್ದ ಗೊಬ್ಬರ ನೀರು ಪಾಲಾಯಿತು. ಕುಮಾರಧಾರ ನದಿಯಲ್ಲಿ ಪ್ರವಾಹ ಅಧಿಕಗೊಂಡು ಕುಲ್ಕುಂದ, ಪರ್ವತಮುಖಿ ಪರಿಸರದಲ್ಲಿ ಗದ್ದೆಗಳಿಗೆ ನೀರು ನುಗ್ಗಿತ್ತು.

ಗ್ರಾಮೀಣ ಪ್ರದೇಶವಾದ ಬಾಳುಗೋಡು, ಹರಿಹರಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಗುತ್ತಿಗಾರು,ಪಂಜ, ಬಳ್ಪ, ಏನೆಕಲ್, ನಿಂತಿಕಲ್, ಬಿಳಿನೆಲೆ, ನೆಟ್ಟಣ, ಅಲೆಕ್ಕಾಡಿ ಮೊದಲಾದೆಡೆ ನಿರಂತರ ಮಳೆಯಾದುದರಿಂದ ಈ ಪರಿಸರದಲ್ಲಿ ಹರಿಯುವ ನದಿ ತೊರೆಗಳು ತುಂಬಿ ಹರಿಯುತ್ತಿವೆ. ತ್ತು ನದಿಗಳು ತುಂಬಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು.

Leave A Reply

Your email address will not be published.