ಮಹಿಳಾ ಬಾಕ್ಸಿಂಗ್ ವೆಲ್ಟರ್ ವೇಯ್ಟ್ ನಲ್ಲಿ ಸೋತರೂ ಕಂಚಿಗೆ ಕೊರಳೊಡ್ಡಿದ ಲವ್ಲಿ ಲವ್ಲಿನಾ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಇಂದು ನಡೆದ ಮಹಿಳೆಯರ ಬಾಕ್ಸಿಂಗ್ ವೆಲ್ಟರ್‌ವೇಯ್ಟ್ ಕ್ಯಾಟಗರಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್ ಪರಾಜಯ ಅನುಭವಿಸಿದರೂ, ಭಾರತಕ್ಕೆ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಇದು ಬಾಕ್ಸಿಂಗ್ ಕ್ಷೇತ್ರದಲ್ಲಿ ಭಾರತಕ್ಕೆ ಲಭಿಸಿರುವ ಈವರೆಗಿನ ಮೂರನೇ ಪದಕವಾಗಿದ್ದು, ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಒಟ್ಟಾರೆಯಾಗಿ ಲಭಿಸಿರುವ ಮೂರನೇ ಪದಕ ಕೂಡ ಆಗಿದೆ.

ಇಂದು ನಡೆದ ಸೆಮಿಫೈನಲ್ಸ್‌ನಲ್ಲಿ ವರ್ಲ್ಡ್ ಚ್ಯಾಂಪಿಯನ್ ಆದ ಟರ್ಕಿಯ ಬುಸೆನಾಜ್ ಸೂರ್ಮೆನೆಲಿ ಅವರನ್ನು ಎದುರಿಸಿದ ಲವ್ಲಿನಾ, 0:5 ಸ್ಕೋರ್‌ನೊಂದಿಗೆ ಸೋಲನುಭವಿಸಿದರು. ಮೂರು ಸುತ್ತುಗಳ ಪಂದ್ಯದಲ್ಲಿ ತೀರ್ಪುಗಾರರ ಸರ್ವಾನುಮತದ ನಿರ್ಣಯದೊಂದಿಗೆ ಬೂಸೆನಾಜ್ ಗೆಲುವು ಸಾಧಿಸಿದ್ದು, ಒಲಿಂಪಿಕ್ಸ್ ಫೈನಲ್ಸ್ ತಲುಪಿದ್ದಾರೆ.

ಬಾಕ್ಸಿಂಗ್ ವೆಲ್ಟರ್ (64-69 ಕೆಜಿ) ವಿಭಾಗದಲ್ಲಿ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಅಸ್ಸಾಂನ ಲವ್ಲಿನಾ ಜುಲೈ 30 ರಂದು ನಡೆದ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಚೀನಾದ ಚೆನ್ ನೈನ್ ಚಿನ್ ಅವರನ್ನು 4:1 ಸ್ಕೋರ್‌ನಿಂದ ಮಣಿಸಿ, ಸೆಮಿಫೈನಲ್ಸ್ ತಲುಪಿದ್ದರು.

Leave A Reply

Your email address will not be published.