ನಡುರಸ್ತೆಯಲ್ಲಿ ಮಹಿಳೆಯೊಬ್ಬರು ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದ ವಿಡಿಯೋ ವೈರಲ್ | ಮಹಿಳೆಯ ವಿರುದ್ಧ ಎಫ್ಐಆರ್ ದಾಖಲು

ಲಕ್ನೋ: ನಡು ರಸ್ತೆಯಲ್ಲಿಯೇ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದ ಮಹಿಳೆ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಲಕ್ನೋದ ಟ್ರಾಫಿಕ್ ಸಿಗ್ನಲ್‌ನಲ್ಲಿ ಕ್ಯಾಬ್ ಚಾಲಕನಿಗೆ ಮಹಿಳೆಯೊಬ್ಬರು ಹಿಗ್ಗಾಮುಗ್ಗಾ ಥಳಿಸಿದ್ದರು. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಳಿಕ ಅದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಬಡಪಾಯಿ ಕ್ಯಾಬ್ ಚಾಲಕನ ಮೇಲೆ ಹಿಂದೆ-ಮುಂದೆ ನೋಡದೆ ಹಲ್ಲೆ ನಡೆಸಿರುವ ಮಹಿಳೆಯನ್ನು ಬಂಧಿಸುವಂತೆ ಬಹಳಷ್ಟು ಮಂದಿ ಆಗ್ರಹಿಸಿದ್ದರು.

ಕ್ಯಾಬ್ ಚಾಲಕನಿಗೆ ಥಳಿಸಿರುವ ಮಹಿಳೆಯನ್ನು ಬಂಧಿಸುವಂತೆ ಸೋಷಿಯಲ್ ಮೀಡಿಯಾದಲ್ಲಿ ‘#arrestlucknowgirl’ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ. ಕಪಾಳಮೋಕ್ಷ ಮಾಡಿಸಿಕೊಂಡ ಕ್ಯಾಬ್ ಡ್ರೈವರ್ ದೂರು ನೀಡಿದ ನಂತರ ಪ್ರಕರಣ ದಾಖಲಿಸಲಾಗಿದೆ ಎಂದು ಲಕ್ನೋದ ಸೆಂಟ್ರಲ್ ಉಪ ಪೊಲೀಸ್ ಆಯುಕ್ತ ಚಿರಂಜೀವ್ ನಾಥ್ ಸಿನ್ಹಾ ಹೇಳಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಬಿಳಿ ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿದ್ದ ಮಹಿಳೆಯೊಬ್ಬಳು ಲಕ್ನೋದ ಅವಧ್ ರಸ್ತೆಯ ಜೀಬ್ರಾ ಕ್ರಾಸಿಂಗ್‌ನಲ್ಲಿ ನಿಂತು ಕ್ಯಾಬ್ ಡ್ರೈವರ್ ಗೆ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದಾಗಿದೆ. ಎಷ್ಟೇ ಬೇಡಿಕೊಂಡರೂ ಬಿಡದೆ ಆತನ ಕಾಲರ್ ಹಿಡಿದು ಎಳೆದಾಡಿ ಮನಬಂದಂತೆ ಥಳಿಸಿದ್ದಾಳೆ. ಪೊಲೀಸರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಹೇಳಿ ಎಂದು ಚಾಲಕ ನೆರೆದಿದ್ದ ಜನರಲ್ಲಿ ಮನವಿ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಎಷ್ಟೇ ಬೇಡಿಕೊಂಡರೂ ಕೇಳದ ಮಹಿಳೆ, ಚಾಲಕನಿಗೆ ಪದೇ ಪದೇ ಸುಮಾರು 22 ಬಾರಿ ಕಪಾಳಮೋಕ್ಷ ಮಾಡಿ ಹಲ್ಲೆ ನಡೆಸಿದ್ದಾಳೆ. ಬಳಿಕ ಆತನ ಮೊಬೈಲ್ ಫೋನನ್ನು ನೆಲಕ್ಕೆ ಎಸೆದು ಒಡೆದು ಹಾಕಿದ್ದಾಳೆ. ಈ ಮಧ್ಯೆ ಟ್ರಾಫಿಕ್ ಪೊಲೀಸ್ ಮಧ್ಯಪ್ರವೇಶಿಸಿ ಕ್ಯಾಬ್ ಡ್ರೈವರ್‌ನಿಂದ ಮಹಿಳೆಯನ್ನು ಬೇರ್ಪಡಿಸಿ ಅವರನ್ನು ರಸ್ತೆಯ ಬದಿಗೆ ಕರೆದುಕೊಂಡು ಹೋಗಿದ್ದಾರೆ.

ಆದರೆ ಸ್ವಲ್ಪ ಸಮಯದ ನಂತರ ಮಹಿಳೆ ಮತ್ತೆ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾಳೆ. ಬಡಪಾಯಿ ಚಾಲಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಮಹಿಳೆಯನ್ನು ಕೂಡಲೇ ಬಂಧಿಸಿ ಶಿಕ್ಷೆ ನೀಡಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.

Leave A Reply

Your email address will not be published.