ಮಂಗಳೂರು | ಕುಸಿದು ಆತಂಕ ಸೃಷ್ಟಿಸಿದ್ದ ಮರವೂರು ಸೇತುವೆ ದುರಸ್ತಿ ಕಾರ್ಯ ಪೂರ್ಣ, ಜುಲೈ 30 ಲಘು ಸಂಚಾರಕ್ಕೆ ತೆರವು ಸಾಧ್ಯತೆ

ಮಂಗಳೂರು: ಕಾವೂರು ಬಳಿ ಮರವೂರು ಸೇತುವೆಯ ಕುಸಿದ ಪಿಲ್ಲರ್ ದುರಸ್ತಿ ಕಾರ್ಯ ಬಹುತೇಕ ಪೂರ್ತಿಯಾಗಿದ್ದು, ಜು.30ರಿಂದ ಲಘು ವಾಹನ ಸಂಚಾರಕ್ಕೆ ತೆರವಾಗುವ ನಿರೀಕ್ಷೆಯಿದೆ.

ಪಿಡಬ್ಲ್ಯುಡಿ ಇಲಾಖೆಯ ತಜ್ಞ ಇಂಜಿನಿಯರ್‌ಗಳ ಸಲಹೆಯಂತೆ ಕೆಲದಿನಗಳ ಹಿಂದೆಯೇ ಸೇತುವೆಯ ಪಿಲ್ಲರನ್ನು ಮೇಲಕ್ಕೆತ್ತಿ ಯಥಾಸ್ಥಿತಿಗೆ ತರಲಾಗಿತ್ತು. ಅದರ ಬಳಿಕ ವಾಹನ ಸಂಚಾರ ಸುಸೂತ್ರವಾಗುವಂತೆ ಕೆಲವು ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಇದೀಗ ಬಹುತೇಕ ಪೂರ್ಣಗೊಂಡಿದೆ.

ಗುರುವಾರ ತಜ್ಞರ ಉಪಸ್ಥಿತಿಯಲ್ಲಿ ಸೇತುವೆ ವಾಹನ ಸಂಚಾರಕ್ಕೆ ಯೋಗ್ಯವಾಗಿದೆಯೇ ಎಂದು ಪರೀಕ್ಷಿಸಲು ರೋಡ್ ಟೆಸ್ಟ್ ನಡೆಸಲಾಗುತ್ತದೆ. ಈ ಪರೀಕ್ಷೆ ಯಶಸ್ವಿಯಾದರೆ ಇದೇ ತಿಂಗಳ 30 ರಿಂದಲೇ ಲಘು ವಾಹನ ಸಂಚಾರ ಅನುವು ಮಾಡಿಕೊಡಲಾಗುವುದು ಎಂದು ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಜೂ.15ರಂದು ಬೆಳಗ್ಗೆ ಸೇತುವೆಯಲ್ಲಿ ಬಿರುಕು ಮೂಡಿ ಪಿಲ್ಲರ್ ಜಗ್ಗಿದ್ದನ್ನು ಸ್ಥಳೀಯರೊಬ್ಬರು ಗಮನಿಸಿ ಮಾಹಿತಿ ರವಾನಿಸಿದ್ದರು. ಕೂಡಲೇ ಸೇತುವೆಯ ಎರಡೂ ಬದಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.

ಈ ಕಾರಣದಿಂದಾಗಿ ಮಂಗಳೂರು ವಿಮಾನ ನಿಲ್ದಾಣ, ಬಜೈ, ಕಟೀಲು, ಅದ್ಯಪಾಡಿ ಕಡೆಗೆ ತೆರಳುವರು ಸುತ್ತು ಬಳಸಿ ಹೋಗಬೇಕಾಗಿತ್ತು. ಇದೀಗ ಸುಮಾರು ಒಂದೂವರೆ ತಿಂಗಳ ಬಳಿಕ ಸೇತುವೆ ಮತ್ತೆ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಮೂಡಿದೆ.

Leave A Reply

Your email address will not be published.