ದೈನಿಕ ಭಾಸ್ಕರ್ ಪತ್ರಿಕೆಯಿಂದ ಬೇನಾಮಿ ಹೆಸರಿನಲ್ಲಿ ಕಂಪನಿಗಳು | 900 ಕೋಟಿಗೂ ಅಧಿಕ ತೆರಿಗೆ ವಂಚನೆ !

ನವದೆಹಲಿ: ದೈನಿಕ ಭಾಸ್ಕರ್ ಪತ್ರಿಕೆ ಕಳೆದ ಆರು ವರ್ಷಗಳಿಂದ ಸುಮಾರು 900 ಕೋಟಿ ರೂ. ಮೊತ್ತದ ತೆರಿಗೆಯನ್ನು ಪಾವತಿಸಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಶನಿವಾರ ಹೇಳಿದೆ.

ದೈನಿಕ್ ಭಾಸ್ಕರ್ ಪತ್ರಿಕಾ ಕಚೇರಿ ಮೇಲಿನ ದಾಳಿ ವೇಳೆಯಲ್ಲಿ ಸ್ಟಾಕ್ ಮಾರುಕಟ್ಟೆ ನಿಯಮಗಳ ಹಲವು ಉಲ್ಲಂಘನೆ ಮತ್ತು ಪಟ್ಟಿಮಾಡಿದ ಕಂಪನಿಗಳಿಂದ ಲಾಭ ಗಳಿಸಿದ ಪುರಾವೆಗಳು ಕಂಡುಬಂದಿವೆ ಐಟಿ ತಿಳಿಸಿದೆ. ಅಲ್ಲಿ ನಡೆದ ಶೋಧ ಕಾರ್ಯಾಚರಣೆ ವೇಳೆಯಲ್ಲಿ ದೈನಿಕ್ ಭಾಸ್ಕರ್ ಅನೇಕ ಕಂಪನಿಗಳನ್ನು ಅವರ ಉದ್ಯೋಗಿಗಳ ಹೆಸರಿನಲ್ಲಿ ನಡೆಸುತ್ತಿದೆ. ಉದ್ಯೋಗಿಗಳ ಹೆಸರನ್ನು ನಕಲಿ ವೆಚ್ಚ ತೋರಿಸಲು ಬಳಸಲಾಗುತಿತ್ತು. ಅನೇಕ ಸಿಬ್ಬಂದಿಗಳ ಹೆಸರನ್ನು ಪಾಲುದಾರರು ಮತ್ತು ನಿರ್ದೇಶಕರಾಗಿ ಉಪಯೋಗಿಸಲಾಗಿದೆ. ಅಂತಹ ಕಂಪನಿಗಳ ಬಗ್ಗೆ ಅರಿವಿಲ್ಲ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಐಟಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಅಲ್ಲಿನ ಉದ್ಯೋಗಿಗಳು ಉತ್ತಮ ನಂಬಿಕೆಯಿಂದ ತಮ್ಮ ಆಧಾರ್ ಕಾರ್ಡ್ ಮತ್ತು ಡಿಜಿಟಲ್ ಸಹಿಯನ್ನು ಉದ್ಯೋಗದಾತರಿಗೆ ನೀಡಿದ್ದರು. ಅವರಲ್ಲಿ ಕೆಲವರು ಸಂಬಂಧಿಕರಿದ್ದಾರೆ. ಅವರು ಸ್ವಇಚ್ಚೆಯಿಂದ ಮತ್ತು ಉದ್ದೇಶಪೂರ್ವಕವಾಗಿ ಪತ್ರಿಕೆಗಳಿಗೆ ಸಹಿ ಹಾಕಿದ್ದರು. ಆದರೆ ಕಂಪೆನಿಗಳ ವ್ಯವಹಾರ ಚಟುವಟಿಕೆಗಳ ಬಗ್ಗೆ ಯಾವುದೇ ಜ್ಞಾನ ಅಥವಾ ನಿಯಂತ್ರಣವನ್ನು ಹೊಂದಿರಲಿಲ್ಲ.
ಈವರೆಗೂ ಸುಮಾರು 900 ಕೋಟಿ ರೂ. ಮೊತ್ತದ ತೆರಿಗೆ ವಂಚನೆಯನ್ನು ದೈನಿಕ್ ಭಾಸ್ಕರ್ ಮಾಡಿದೆ ಎಂದು ಅಂದಾಜಿಸಲಾಗಿದೆ. ಈ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಯಿದ್ದು, ಬೆಳಕಿಗೆ ಬಾರದ ಹಣದ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

Leave A Reply

Your email address will not be published.