ಪುಣ್ಯಕೋಟಿಯ ಸ್ನೇಹ ಮಾಡಿದ ಚಿರತೆ | ರಾತ್ರಿಯ ಹೊತ್ತಿಗೆ ಬಂದು ದನದ ಜತೆ ಮಲಗಿ ಆಟವಾಡಿ ಮರಳುವ ವೈರಲ್ ಮ್ಯಾಟರ್ !!

ಅಸ್ಸಾಮಿನ ಮನೆಯಲ್ಲಿ ಸಾಕಿರುವ ಹಸುವೊಂದು ಮತ್ತು ಕಾಡಿನ ಚಿರತೆಯೊಂದು ರಾತ್ರಿಯ ಹೊತ್ತು ಸ್ನೇಹ ಜೀವನ ನಡೆಸುವ ವೈರಲ್ ಫೋಟೋ- ವಿಷಯ ಇದೀಗ ಸುದ್ದಿಯಲ್ಲಿದೆ.

ಆ ಮನೆಯಲ್ಲಿ ರಾತ್ರಿ ಮಲಗಿದ ನಂತರ ರಾತ್ರಿಹೊತ್ತು ನಾಯಿಗಳು ವಿಪರೀತವಾಗಿ ಬೊಗಳುತ್ತಿದ್ದವು. ಸ್ವಲ್ಪ ದಿನ ಇದನ್ನು ಗಮನಿಸಿದ ಮನೆಯ ಯಜಮಾನ ತನ್ನ ಮನೆಯ ಸುತ್ತ ಸಿಸಿಟಿವಿಗಳನ್ನು ಅಳವಡಿಸಿದ.

ಅದೊಂದು ದಿನ ರಾತ್ರಿಯ ಸಿಸಿಟಿವಿ ಫುಟೇಜ್ ಗಮನಿಸಿದಾಗ ಮನೆ ಯಜಮಾನ ಮತ್ತು ಮನೆಯವರು ಬೆಚ್ಚಿಬಿದ್ದಿದ್ದರು. ಕಾರಣ ರಾತ್ರಿಯ ಹೊತ್ತು ಚಿರತೆಯೊಂದು ಕಾಡಿನಿಂದ ಬಂದು ಅವರ ಮನೆಯ ಹಸುವಿನ ಜೊತೆ ಆಟವಾಡಲು ತೊಡಗಿತ್ತು. ಇದು ಪ್ರತಿದಿನ ನಡೆಯುತ್ತಿತ್ತು. ಹಸುವಿನ ಜೊತೆ ಮಲಗಿ ಒಂದಕ್ಕೆ ಒಂದು ಒರಗಿಕೊಂಡು ಕಾಲ ಕಳೆಯುತ್ತಿತ್ತು. ಪರಸ್ಪರ ಕತ್ತು ಬಳಸಿ ಅಪ್ಪಿಕೊಳ್ಳುತ್ತಿದ್ದವು.
ಆ ಯಜಮಾನ ಆಶ್ಚರ್ಯಗೊಂಡು ಆ ಹಸುವನ್ನು ಕೊಂಡ ಹಳೆಯ ಯಜಮಾನನ್ನು ವಿಚಾರಿಸುತ್ತಾರೆ. ಆಗ ಯಜಮಾನರು ಹಿಂದೆ ತಾವು ಸಾಕಿದ್ದ ಈ ಹಸುವು, ಆಗ ಚಿಕ್ಕ ಮರಿಯಾಗಿದ್ದ, ಅಮ್ಮ ಸತ್ತಿದ್ದ 20 ದಿನದ ಚಿರತೆ ಮರಿಯೊಂದಕ್ಕೆ ಹಾಲುಣಿಸಿ ಪೋಷಿಸಿತ್ತು. ಹಾಗೆ ಹಾಲು ಕೊಟ್ಟ ಹಸುವನ್ನೇ ತನ್ನ ಅಮ್ಮನೆಂದು ಕೊಂಡ ಚಿರತೆ ಈಗಲೂ ಬಂದು ಹಸುವಿನ ಜೊತೆಗೆ ಕಳೆಯುತ್ತದೆ ಎಂದು ಆ ಹಳೆಯ ಹಸುವಿನ ಯಜಮಾನರು ಹೇಳಿದ್ದರು. ಇಂತಹದೊಂದು ಸ್ಟೋರಿ ಇವತ್ತು ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿದೆ. ಅಲ್ಲದೆ ಈ ಪೋಸ್ಟ್ ಅಮ್ಮಂದಿರ ದಿನದಲ್ಲೂ ವೈರಲ್ ಆಗಿತ್ತು.

ನಿಜವಾಗಿ ನಡೆದದ್ದೇನು ?!

ನಿಜಕ್ಕೂ ಚಿರತೆ ಮತ್ತು ಹಸು ಸ್ನೇಹದಲ್ಲಿ ಇದ್ದದ್ದು ನಿಜ. ಪ್ರತಿನಿತ್ಯ ಬಂದು ತನ್ನ ಸ್ನೇಹಿತೆಯ ಜೊತೆ ಆ ಚಿರತೆ ಕಾಲ ಕಳೆಯುತ್ತಿತ್ತು. ಪಕ್ಕದಲ್ಲೇ ಮಲಗಿ ರಾತ್ರಿ ಹೊತ್ತು ಕಳೆಯುತ್ತಿದ್ದವು. ಆದರೆ ಈ ಘಟನೆ ನಡೆದದ್ದು ಇತ್ತೀಚೆಗೆ ಅಲ್ಲ. ಇದು ಸರಿ ಸುಮಾರು ಎರಡು ದಶಕಗಳ ಹಿಂದೆ ಅಂದರೆ 2002ರಲ್ಲಿ ಗುಜರಾತಿನಲ್ಲಿ ನಡೆದಿದ್ದು, ಅದನ್ನು ಗುಜರಾತನ ಟೈಮ್ಸ್ ಆಫ್ ಇಂಡಿಯಾ ವರದಿಗಾರ ಶ್ಯಾಮ್ ಪರೇಖ್ ಅವರು ಇದರ ಚಿತ್ರಸಹಿತ ರಿಪೋರ್ಟ್ ಮಾಡಿದ್ದರು. ಆಗ ಅದು ದೊಡ್ಡ ಸಂಚಲನ ಸೃಷ್ಟಿಸಿತ್ತು.
ನಿಜಕ್ಕೂ ಅದು ತನಗೆ ಹಾಲು ಕೊಟ್ಟ ಹಸುವಿನ ಭೇಟಿಗೆಂದು ಬರುತ್ತಿರಲಿಲ್ಲ. ಆ ಚಿರತೆಯು ವಯಸ್ಕನಾಗುವ ಮೊದಲು ಕಾಡಂಚಿನಲ್ಲಿ ವಾಸಿಸುತ್ತಿದ್ದು ನಿಬಿಡ ಕಾಡು ಅಲ್ಲದ, ಇತ್ತ ಊರೂ ಅಲ್ಲದ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿತ್ತು. ಆದುದರಿಂದ ಆ ಚಿರತೆಗೆ ಮನುಷ್ಯರು ಮತ್ತಿತರ ಸಾಕು ಪ್ರಾಣಿಗಳ ಬಗ್ಗೆ ಇರುವ ಭಾವನೆ ಮೂಡಿರಲಿಲ್ಲ. ಅದೇ ಕಾರಣದಿಂದ ಅದು ಪಕ್ಕದ ಹಳ್ಳಿಯ ಹಸುವಿನ ಜೊತೆ ಸ್ನೇಹಭಾವದಿಂದ ಇರುತ್ತಿತ್ತು. ಕೆಲವೊಂದು ಸಲ ಕ್ರೂರ ಪ್ರಾಣಿಗಳಲ್ಲಿ ಇಂತಹ ಮನೋ ಬದಲಾವಣೆಯನ್ನು ನಾವು ನೋಡುತ್ತೇವೆ ಎನ್ನುತ್ತಾರೆ ಪ್ರಾಣಿಶಾಸ್ತ್ರ ಪ್ರವೀಣರು.

ಒಟ್ಟಾರೆ ವಿಭಿನ್ನ ಮನಸ್ಥಿತಿಯ ಎರಡು ಪ್ರಾಣಿಗಳು ಕೂಡ ಸ್ನೇಹ ಮಾಡಬಲ್ಲವು ಎನ್ನುವ ಕಾರಣಕ್ಕೆ ಈ ಘಟನೆ ನಡೆದು ಎರಡು ದಶಕಗಳು ಕಳೆದರೂ ಮತ್ತೆ ಮತ್ತೆ ಹೊಸ ಹೊಸ ರೂಪದೊಂದಿಗೆ ಮುನ್ನೆಲೆಗೆ ಬರುತ್ತಲೆ ಇದೆ. ಇಂತಹ ಒಂದು ಒದೆಯಲಾಗದ, ಹಾಯಲಾಗದ ಪುಣ್ಯಕೋಟಿಯ ಸ್ನೇಹ ಮಾಡಬಹುದಾದರೆ, ಎರಡು ವಿಭಿನ್ನ ಧರ್ಮಗಳು ಯಾಕೆ ಪರಸ್ಪರ ಸ್ನೇಹಹಸ್ತ ಚಾಚಿಕೊಳ್ಳಲಾಗದೆ ಪರದಾಡುತ್ತಿವೆ. ಒಂದನ್ನೊಂದು ಘೋಷಿಸಿಕೊಂಡು ದ್ವೇಷಿಸಿ ಕೊಂಡು ಬದುಕುತ್ತಿವೆ. ಪ್ರಾಣಿಗಳಿಂದ ನಾವು ಕಲಿಯುವುದು ಸಾಕಷ್ಟಿದೆ ಅಲ್ಲವೇ ?!

Leave A Reply

Your email address will not be published.