ಈ ವಿಸ್ಕಿ ಬಾಟಲ್ ನ ಬೆಲೆ ಬರೊಬ್ಬರಿ 1 ಕೋಟಿ ! ಕಿಕ್ ಏರಿಳಿಯುವ ದರದ ಈ ಬಾಟಲ್ ನಲ್ಲಿದೆ ವಿಶ್ವದ ಅತ್ಯಂತ ಹಳೆಯ ಕಮ್ಮಗಿನ ಬಿಸಿಬಿಸಿ ವಿಸ್ಕಿ !!

ಮನುಷ್ಯರಿಗೆ ಎಲ್ಲವೂ ಹೊಸದು ಬೇಕು. ಆಭರಣ, ಕಾರು, ಮನೆ ಎಲ್ಲವೂ ಹೊಚ್ಚ ಹೊಸದು ಆಗಿದ್ದರೇನೆ ಚಂದ. ಕೊನೆಗೆ ಮದುವೆಯಾಗಲು ಕೂಡಾ ಲೇಟೆಸ್ಟ್ ಮಾಡೆಲ್ ನ ( ಚಿಕ್ಕ ಪ್ರಾಯದ) ಹುಡುಗಿ ಹುಡುಕುವವರು ಇದ್ದಾರೆ. ಆದರೆ ಅದೊಂದು ಮಾತ್ರ ಹಳೆಯದು ಬೇಕು. ಅದು ಹಳೆಯದಾದಷ್ಟು ಚಂದ. ಮಾಗಿದಷ್ಟು ಮದ್ಯಕ್ಕೆ ಮಗದಷ್ಟು ಬೆಲೆ ಹೆಚ್ಚು. ಅಂತಹಾ ಅತ್ಯಂತ ಹಳೆಯ ವಿಸ್ಕಿ ಬಾಟಲಿ ಒಂದು ಮೊನ್ನೆ ಹರಾಜಿಗೆ ಬಂದಿತ್ತು.

ಹಳೆಯ ಮದ್ಯಕ್ಕೆ ಏಜ್ಡ್ ಲಿಕ್ಕರ್ ಅಂತಲೂ ಕರೆಯುತ್ತಾರೆ. ಮರದಿಂದ ತಯಾರಿಸಿದ ದೊಡ್ಡ ಟ್ಯಾಂಕ್ ಗಳಲ್ಲಿ ಮದ್ಯವನ್ನು ವರ್ಷಾನುಗಟ್ಟಲೆ ಶೇಖರಿಸಿಟ್ಟರೆ, ಆಗ ಮದ್ಯದಲ್ಲಿ ಇರಬಹುದಾದ ಅಸಿಡಿಟಿ ಮುಂತಾದವುಗಳನ್ನು ಮರದ ಟ್ಯಾಂಕ್ ಎಳೆದುಕೊಂಡು ಮದ್ಯವನ್ನು ಮತ್ತಷ್ಟು ಸ್ಮೂತ್ ಆಗಿ ಮಾಡುತ್ತದೆ. ಇಂತಹ ಏಜ್ಡ್ ಮದ್ಯ ತುಸು ದುಬಾರಿ. ಮದ್ಯ ಪ್ರಿಯರು ಸಾವಿರಾರು ರೂಪಾಯಿ ನೀಡಿ ಇಂತಹ ಮದ್ಯವನ್ನು ಖರೀದಿಸುತ್ತಾನೆ.

ಆದರೆ ಇಲ್ಲೊಂದು ಫುಲ್ ಬಾಟ್ಲು ಬರೋಬ್ಬರಿ 1 ಕೋಟಿ ರೂ. ಗೆ ಸೇಲ್ ಆಗಿದೆ. 1 ಕೋಟಿ ರೂ.ಗೆ ವಿಸ್ಕಿ ಬಾಟಲಿಯನ್ನು ಹರಾಜಿನಲ್ಲಿ ಪಡೆಯಲಾಗಿದ್ದು, ಈ ಸುದ್ದಿ ಕೇಳಿಯೇ ಮದ್ಯಪ್ರಿಯರಿಗೆ ಒಂದಷ್ಟು ಹಾಕಿ ಏರಿದ್ದ ಅಮಲು ಧಸಕ್ಕನೆ ಇಳಿದ ಅನುಭವ.

ಅಷ್ಟಕ್ಕೂ 1 ಕೋಟಿ ರೂ. ಕೊಡುವಂಥದ್ದು ಈ ವಿಸ್ಕಿ ಬಾಟಲಿಯಲ್ಲೇನಿದೆ? ಎಂದು ನಿಮಗೆ ಪ್ರಶ್ನೆ ಕಾಡುತ್ತಿರಬಹುದು. ಇದು ಅಂತಿಂಥ ವಿಸ್ಕಿಯಲ್ಲಿ ಸ್ವಾಮಿ ! ಈ ವಿಸ್ಕಿ ಬಾಟಲಿ ಇಡೀ ವಿಶ್ವದ ಅತಿ ಪುರಾತನ ವಿಸ್ಕಿಯಾಗಿದೆ. ಹಳೆಯದಾದಷ್ಟೂ ಅದಕ್ಕೆ ಬೆಲೆ ಜಾಸ್ತಿಯಾದ್ದರಿಂದ ಈ ವಿಸ್ಕಿ ಬಾಟಲಿಯನ್ನು 1 ಕೋಟಿ ರೂ. ಹರಾಜು ಹಾಕಲಾಗಿದೆ.

ಇದೇ ವಿಶ್ವದ ಹಳೆಯ ವಿಸ್ಕಿ ಬಾಟಲ್ !
ಈ ವಿಸ್ಕಿಗೆ ಸುಮಾರು 250 ವರ್ಷದ ಇತಿಹಾಸವಿದೆ. ಈ ಬಾಟಲಿಯನ್ನು ಈಗ 1,02,63,019 ರೂ.ಗೆ ಹರಾಜಿನಲ್ಲಿ ಖರೀದಿಸಲಾಗಿದೆ. 1860ರಲ್ಲಿ ಈ ವಿಸ್ಕಿಯನ್ನು ಬಾಟಲಿಗೆ ಹಾಕಲಾಗಿದ್ದು, ಆದರೆ, ಇದರೊಳಗಿನ ವಿಸ್ಕಿಯನ್ನು ಅದಕ್ಕಿಂತಲೂ ಶತಮಾನಗಳಷ್ಟು ಹಳೆಯದು ಎನ್ನಲಾಗಿದೆ. ಈ ವಿಸ್ಕಿ ಒಂದು ಕಾಲದಲ್ಲಿ ಜಾನ್ ಫೀರ್​ಪಾಯಿಂಟ್ ಮೊರ್ಗನ್ ಎಂಬ ಫೈನಾನ್ಷಿಯರ್ ಪಾಲಾಗಿತ್ತು. ಅವರ ಮರಣದ ನಂತರ ಅವರ ಎಸ್ಟೇಟ್​ನಿಂದ ಈ ವಿಸ್ಕಿ ಬಾಟಲಿಯನ್ನು ತೆಗೆದುಕೊಂಡು ಬರಲಾಗಿತ್ತು. ಒಟ್ಟಾರೆ, ಜಗತ್ತಿನ ಅತಿ ಹಳೆಯ ವಿಸ್ಕಿ ಈಗ ಮತ್ತೆ ಸುದ್ದಿಯಾಗಿದ್ದು, ಈ ಬಾಟಲಿಯನ್ನು ಹರಾಜು ಹಿಡಿದ ಮದ್ಯದ ಮರ್ಲನ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಆತ ಅನಾಮಧೇಯನಾಗಿ ಉಳಿದಿದ್ದರೂ, ಒಂದು ಬಾಟಲಿಗೆ ಒಂದು ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದ ಈ ಮದ್ಯರಸಿಕ ಈಗ ಕುತೂಹಲ ಕೆರಳಿಸಿದ್ದಾನೆ.

Leave A Reply

Your email address will not be published.