ಕಂಟ್ರಿ ಗಂಗಸರ ಕುಡಿದು 16 ಮಂದಿ ಬಲಿ

ನಕಲಿ ಮದ್ಯ ಸೇವಿಸಿ 16 ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರದ ಚಂಪಾರನ್‌ನಲ್ಲಿ ನಡೆದಿದೆ.

ಪಶ್ಚಿಮ ಚಂಪಾರನ್ ಜಿಲ್ಲೆಯ ಲೌರಿಯಾ ಬ್ಲಾಕ್‌ನ ಕೆಲವು ಹಳ್ಳಿಗಳಲ್ಲಿ ನಕಲಿ ಮದ್ಯ ಸೇವಿಸಿ ಕಳೆದೆರಡು ದಿನಗಳಲ್ಲಿ 16 ಮಂದಿ ಸಾವನ್ನಪ್ಪಿದ್ದು, ಇನ್ನೂ ಅನೇಕರು ಸಾವು-ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಪರಿಸ್ಥಿತಿಯನ್ನು ಬಿಹಾರ ಸರ್ಕಾರ ಮೇಲ್ವಿಚಾರಣೆ ಮಾಡುತ್ತಿದೆ. ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡ ಇದರ ಮೇಲೆ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯರು ಘಟನೆ ಬಗ್ಗೆ ನಿಜ ಹೇಳಲು ಹಿಂದೇಟು ಹಾಕುತ್ತಿದ್ದಾರೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ರೇಣುದೇವಿ ಹೇಳಿದ್ದಾರೆ.

ಲೌರಿಯಾ ಬ್ಲಾಕ್‌ನ ಕೆಲವು ಹಳ್ಳಿಗಳಲ್ಲಿ ನಕಲಿ ಮದ್ಯ ಸೇವಿಸಿ ಅನೇಕರು ಸಾವನ್ನಪ್ಪಿರುವ ಬಗ್ಗೆ ನಾವು ಮಾಹಿತಿ ಪಡೆದುಕೊಂಡಿದ್ದೇವೆ. ಈಗಾಗಲೇ ವೈದ್ಯಕೀಯ ತಂಡವನ್ನು ಘಟನಾ ಸ್ಥಳಕ್ಕೆ ಕಳುಹಿಸಿದ್ದೇವೆ. ವರದಿ ಬಂದ ಬಳಿಕ ಘಟನೆಯ ಸತ್ಯಾಂಶ ತಿಳಿದುಬರಲಿದೆ ಎಂದು ಪಶ್ಚಿಮ ಚಂಪಾರನ್ ಜಿಲ್ಲಾಧಿಕಾರಿ ಕುಂದನ್ ಕುಮಾರ್ ಹೇಳಿದ್ದಾರೆ.

ಇದುವರೆಗೆ ಸಾವನ್ನಪ್ಪಿರುವವರ 16 ಜನರ ಪೈಕಿ 8 ಜನರ ಕುಟುಂಬಸ್ಥರು ಮದ್ಯ ಸೇವನೆಯ ಬಗ್ಗೆ ಪ್ರಸ್ತಾಪಿಸಿಲ್ಲ. ಈ ಬಗ್ಗೆ ತನಿಖೆ ನಡೆದು ವರದಿ ಬಂದ ಬಳಿಕ ನಮಗೆ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಳಿಕ ಇಬ್ಬರು ಗ್ರಾಮ ಚೌಕಿದಾರಗಳನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾಡಳಿತವು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ. ಬಿಹಾರದಲ್ಲಿ 2016ರಿಂದಲೂ ಮದ್ಯ ಸೇವನೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ.

ನಕಲಿ ಮದ್ಯ ಸೇವಿಸಿ ಅನೇಕರು ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಸಾವಿಗೆ ನಿಖರ ಕಾರಣವೇನೆಂಬುದು ಇನ್ನಷ್ಟೇ ತಿಳಿಯಬೇಕಿದೆ. ಈಗಾಗಲೇ ಈ ಬಗ್ಗೆ ತನಿಖೆ ಪ್ರಗತಿಯಲ್ಲಿದ್ದು, ಶೀಘ್ರವೇ ನಿಜಾಂಶ ತಿಳಿಯಲಿದೆ ಎಂದು ಚಂಪಾರನ್ ಜಿಲ್ಲೆಯ ಡಿಐಜಿ ಲಾಲನ್ ಮೋಹನ್ ಪ್ರಸಾದ್ ಹೇಳಿದ್ದಾರೆ.

ಈ ಮಧ್ಯೆ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಪ್ರತಿವರ್ಷ ನಕಲಿ ಮದ್ಯ ಸೇವಿಸಿ ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ. ನಿತೀಶ್ ಕುಮಾರ್ ಅವರ ‘ಉತ್ತಮ ಆಡಳಿತ’ ದಲ್ಲಿ ನಕಲಿ ಮದ್ಯ ಸೇವಿಸಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ ಎಂದು ಟೀಕಿಸಿದ್ದಾರೆ.

Leave A Reply

Your email address will not be published.