ಕೈಯಿಟ್ಟರೆ ಕೋಳಿ ಕಚ್ಚುತ್ತಿದೆ | ಬೆಂಗಳೂರಿನಲ್ಲಿ ಕೋಳಿ ಕೆ.ಜಿಗೆ 270 ರೂಪಾಯಿ, ದಕ್ಷಿಣ ಕನ್ನಡ ಉಡುಪಿಯಲ್ಲಿ ಕಿಲೋಗೆ 220 ರೂಪಾಯಿ !!

ಲಾಕ್ಡೌನ್ ವೇಳೆ ವ್ಯಾಪಾರ ಇಲ್ಲದೆ ಕುಸಿತ ಕಂಡಿದ್ದ ಕೋಳಿ ಮಾಂಸದ ಬೆಲೆ ಇದೀಗ ಅನ್ ಲಾಕ್ ಆಗಿರುವ ಹಿನ್ನೆಲೆಯಲ್ಲಿ ಹಾಗೆಯೇ ಬಕ್ರೀದ್ ಹಬ್ಬದಿಂದಾಗಿ ಜಬರ್ದಸ್ತ್ ಆಗಿ ಹೋಗುತ್ತಿದೆ.
ಲಾಕ್ಡೌನ್ ಆಗಿರುವ ಕಾರಣದಿಂದ ಕೋಳಿ ಫಾರಂಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಿಗಳನ್ನು ಸಾಕುತ್ತಿರಲಿಲ್ಲ. ದೊಡ್ಡಮಟ್ಟದಲ್ಲಿ ಕೋಳಿ ಫಾರಂ ಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಹಾಗಾಗಿ ಈಗ ಪೌಲ್ಟ್ರಿಗಳಲ್ಲಿ ಪೂರೈಕೆಯ ಕೊರತೆ ಎದುರಾಗಿದೆ.

ಇದೀಗ ಕೋಳಿ ಮಾಂಸಕ್ಕೆ ಬೇಡಿಕೆ ತುಂಬಾ ಹೆಚ್ಚಾಗಿದ್ದು, ಪೂರೈಕೆ ಕಡಿಮೆ ಆಗಿರುವುದರಿಂದ ಮಾಂಸದ ದರ ವಿಪರೀತ ಏರಿಕೆಯಾಗಿದೆ. ಪ್ರತಿ ಕೆಜಿ ಕೋಳಿ ಮಾಂಸಕ್ಕೆ ಕಳೆದ ತಿಂಗಳಿನಲ್ಲಿ 170 – 180 ಕ್ಕೆ ಇದ್ದರೆ, ಇವತ್ತು ಬೆಂಗಳೂರಿನಲ್ಲಿ ಪ್ರತಿ ಕೆಜಿ ವಿತ್ ಸ್ಕಿನ್ ಕೋಳಿ ಮಾಂಸದ ಬೆಲೆ ಬರೋಬ್ಬರಿ 270 ರೂಪಾಯಿ !
ಮಂಗಳೂರಿನ ಲೋಕಲ್ ಪಟ್ಟಣಗಳಲ್ಲಿ ಪ್ರತಿ ಕೆಜಿ ವಿತ್ ಸ್ಕಿನ್ ಕೋಳಿಯ ಬೆಲೆ 220 ಕೆಜಿ. ಮಂಗಳೂರಿನಲ್ಲಿ ಕೂಡಾ 220 ಗೆ ಮಾರಾಟ ಆಗ್ತಿದೆ ಕೋಳಿ ಮಾಂಸ.

ಉತ್ಪಾದನೆ ಮತ್ತು ಪೂರೈಕೆಯಲ್ಲಿ ಕುಸಿತ ಕಂಡಿರುವುದು ಮಾತ್ರವಲ್ಲದೆ, ಮಾಂಸಕ್ಕೆ ಬೇಡಿಕೆ ಹೆಚ್ಚಿದ್ದು, ಪೌಲ್ಟ್ರಿಗಳಲ್ಲೂ ಕೋಳಿ ದರ ನಿರಂತರವಾಗಿ ಏರಿಕೆಯಾಗುತ್ತಿದೆ ಎಂದು ಪೌಲ್ಟ್ರಿ ಉದ್ಯಮ ತಿಳಿಸಿದೆ.

ರಾಜ್ಯದಲ್ಲಿ ಕೋಳಿ ಉತ್ಪಾದನೆಯಲ್ಲಿ ಪ್ರಮುಖ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಪೌಲ್ಟ್ರಿಗಳಲ್ಲಿ ಕೋಳಿಗೆ 50 ರೂ ಕನಿಷ್ಠ ಏರಿಕೆ ಕಂಡಿದ್ದು, ಪ್ರತಿ ಕೆಜಿ ಮಾಂಸಕ್ಕೆ 60ರಿಂದ 80ರೂ ಏರಿಕೆಯಾಗಿದೆ.

ಮೇ ತಿಂಗಳಲ್ಲಿ ರಾಜ್ಯದಲ್ಲಿ ಸರಕಾರ ಜಾರಿ ತಂದ ಲಾಕ್‌ಡೌನ್‌ನಿಂದಾಗಿ ಕೋಳಿ ಉದ್ಯಮ ಬೇಡಿಕೆ ಕಳೆದುಕೊಂಡಿತ್ತು. ಇದರಿಂದಾಗಿ 42 ದಿನಕ್ಕೆ ಕಟಾವಿಗೆ ಹೋಗಬೇಕಾಗಿದ್ದ ಕೋಳಿಗಳು ಫಾರಂನಲ್ಲಿ ಉಳಿದಿದ್ದವು. ಆಗ ಲಾಸ್ ಆಗಿತ್ತು. ಅದರಿಂದಾಗಿ ಹೊಸ ಬ್ಯಾಚ್ ಹಾಕುವುದು ಕಮ್ಮಿ ಮಾಡಿದರು. ಇವುಗಳ ನಿರ್ವಹಣೆ ಕಷ್ಟವಾಗಿದ್ದರಿಂದ ಕೋಳಿಗಳ ಉತ್ಪಾದನೆ ಕಡಿಮೆ ಮಾಡಲಾಯಿತು.

ಕೋಳಿ ಮಾಂಸವನ್ನು ನಮ್ಮ ರಾಜ್ಯದಿಂದ ಕೇರಳ, ಮಹಾರಾಷ್ಟ್ರ ಸೇರಿದಂತೆ ಹಲವು ಹೊರ ರಾಜ್ಯದ ಮಾರುಕಟ್ಟೆಗಳಿಗೆ ಹೆಚ್ಚಿನ ಸಂಖ್ಯೆ ಯಲ್ಲಿ ಕೋಳಿಗಳನ್ನು ಕಳಿಸಲಾಗುತ್ತದೆ. ಅದು ಕೂಡ ಬೆಲೆಯೇರಿಕೆಗೆ ಒಂದು ಕಾರಣ ಎನ್ನಲಾಗುತ್ತಿದೆ. ಅಲ್ಲದೆ ಇದೀಗ ಕಚ್ಚಾ ವಸ್ತುಗಳ ದರ ಏರಿಕೆ ಹಾಗೂ ಉತ್ಪಾದನೆ ಕುಸಿತದಿಂದ ಕೋಳಿಗಳ ಮಾಂಸ ದರ ಸತತವಾಗಿ ಏರಿಕೆ ಕಾಣುತ್ತಿರುವುದರಿಂದ ಬೆಲೆ ಏರಿಕೆ ಹೆಚ್ಚುತಿದ್ದು, ಇನ್ನೂ ಒಂದು ತಿಂಗಳುಗಳ ಕಾಲ ಏರಿಕೆಯಾಗಲಿದ್ದು, ಮುಂದಿನ ದಿನಗಳಲ್ಲಿ ಸುಧಾರಿಸಿಕೊಳ್ಳಲಿದೆ ಎಂದು ರಾಜ್ಯ ಕೋಳಿ ಸಾಕಾಣಿಕೆ ರೈತರ ಸಂಘದ ರಾಜ್ಯಾಧ್ಯಕ್ಷ ನಂಜುಂಡಪ್ಪ ತಿಳಿಸಿದ್ದಾರೆ. ಮೊದಲೇ ಕೋಳಿ ಉದ್ಯಮದ ಬೆಲೆಯನ್ನು ಶೇರುಪೇಟೆಗೆ ಹೋಲಿಸುತ್ತಾರೆ. ಅಷ್ಟು ದೊಡ್ಡ ಮಟ್ಟದಲ್ಲಿ ಬೆಲೆ ವ್ಯತ್ಯಯ ಆಗುತ್ತಲೇ ಇರುತ್ತದೆ. ಈ ಉದ್ಯಮಕ್ಕೂ ಪ್ರೈಸ್ ಕಂಟ್ರೋಲ್ ಹಾಕಬೇಕು ಎನ್ನುವುದು ಹಲವು ಗ್ರಾಹಕರ ಅಭಿಪ್ರಾಯ.

Leave A Reply

Your email address will not be published.