ಒಳ್ಳೆ ಕ್ವಾಲಿಟಿ ಮಾಲು ಹೇಗಿರುತ್ತೆ ಗೊತ್ತಾ ? | ಸಿಕ್ಸ್ ಸಿಗ್ಮಾ ಕ್ವಾಲಿಟಿ ಬಗ್ಗೆ ಒಂದಷ್ಟು ಡೀಟೇಲ್ಸ್ !

– ಸುದರ್ಶನ್ ಬಿ. ಪ್ರವೀಣ್, ಬೆಳಾಲು ( ಸಂಪಾದಕ )

ಕ್ವಾಲಿಟಿ ( ಗುಣಮಟ್ಟ) ಅಂದರೆ ಏನೆಂದು ಸಾಮಾನ್ಯ ಪರಿಭಾಷೆಯಲ್ಲಿ ವಿವರಿಸಿ ಹೇಳುವುದು ಕಷ್ಟ. ಆದರೆ ಕ್ವಾಲಿಟಿ ಅಂದರೆ ಗುಣಮಟ್ಟ ಎಂದರೇನೆಂದು ಎಲ್ಲರಿಗೂ ಗೊತ್ತಿದೆ.

ಕ್ವಾಲಿಟಿ ಅಂದರೆ ಗ್ರಾಹಕರ ಅಗತ್ಯಗಳನ್ನು ಪೂರೈಸುವ ವಸ್ತುವಿನ ತಾಕತ್ತು. ಕ್ವಾಲಿಟಿ ಅಂದರೆ ವಸ್ತುವಿನ ಬಳಕೆಗೆ ಯೋಗ್ಯ ಗುಣ. ಅದು ವಸ್ತು ಅಥವಾ ಸರ್ವೀಸಿನ ಫಿಟ್ ಫ಼ಾರ್ ಯೂಸ್ ಗುಣ. ನಮ್ಮ ಬಳಕೆಗೆ ಫಿಟ್ ಆಗಿದ್ದರೆ, ಅದು ಒಳ್ಳೆಯ ಕ್ವಾಲಿಟಿಯ ವಸ್ತು. ನಮ್ಮ ಅವಶ್ಯಕತೆಗಳನ್ನು ಪೂರೈಸಲಾರದಾದರೆ, ಅದು ಪೂರ್ ಗುಣಮಟ್ಟದ ವಸ್ತು.

ಹಾಗೆ ನೋಡಿದರೆ ನಮ್ಮಲ್ಲಿ ಪ್ರತಿಯೊಬ್ಬರೂ ಕ್ವಾಲಿಟಿ ಆಫೀಸರುಗಳೇ. ಗೃಹಿಣಿ ತರಕಾರಿ ಅಂಗಡಿಯಲ್ಲಿ ಟೊಮೇಟೊವನ್ನುಕೈಗೆತ್ತಿ ಕೊಳ್ಳುವುದು ಅದರ ಕ್ವಾಲಿಟಿ ಚೆಕ್ ಮಾಡಲು. ಟೊಮೆಟೊ ಕೊಳ್ಳುವುದರಲ್ಲಿ ನ ಕ್ವಾಲಿಟಿ ಏನು ?

‘ ಟೊಮೇಟೊ ಕೊಳೆತಿರಬಾರದು, ಜಾಸ್ತಿ ಹಣ್ಣಾಗಿರಬಾರದು, ಹಾಗಂತ ಕಾಯಿಯೂ ಇರಬಾರದು. ಕಜ್ಜಿ ಬಿದ್ದಿರಬಾರದು, ಬಜ್ಜಿ ಆಗಿರಬಾರದು, ಕೆಂಪು ಬಣ್ಣ ಇರಬೇಕು’ ಇವೆಲ್ಲವನ್ನು ತಕ್ಷಣಕ್ಕೆಆಕೆ ಪತ್ತೆ ಮಾಡಿಕೊಳ್ಳುತ್ತಾಳೆ. ಅದು ಆಕೆಯ ಪಾಲಿನ ಕ್ವಾಲಿಟಿ ಚೆಕ್ .

ಸಾಮಾನ್ಯವಾಗಿ ನಾವು ಕ್ವಾಲಿಟಿ ಅಂದರೆ ಗುಣಮಟ್ಟವನ್ನು ಪರ್ಸೆಂಟೇಜಿನ ಆಧಾರದ ಮೇಲೆ ಕೂಡ ನಿರ್ಧರಿಸುತ್ತೇವೆ. ‘ ಇದು ನೂರಕ್ಕೆ ನೂರು ವರ್ಕ್ ಆಗುತ್ತೆ ‘ ಅನ್ನುತ್ತೇವೆ. ಪ್ರಾಕ್ಟಿಕಲೀ ನೂರಕ್ಕೆ ನೂರು ಕೆಲಸ ಮಾಡುವುದು ಅಸಾಧ್ಯವೆಂದು ತಿಳಿದಿದ್ದರೂ. ನೂರಕ್ಕೆ 98% – 99% ಅಂದರೆ ಅತ್ಯಂತ ಉತ್ಕೃಷ್ಟ ಅಂತಲೇ ನಮ್ಮೆಲ್ಲರ ಸಾಮಾನ್ಯ ಅಭಿಪ್ರಾಯ.

ನಿಮ್ಮಮಗನೋ ಮಗಳೋ ನೂರಕ್ಕೆ ಎಷ್ಟು ಮಾರ್ಕೊ ತೆಗೆದುಕೊಂಡರೆ ನೀವು ತೃಪ್ತರು? ನೂರಕ್ಕೆ ತೊಂಬತ್ತೆಂಟು ಪರ್ಸೆಂಟ್ ತೆಗೆದುಕೊಂಡರೆ ಅದು ಗ್ರೇಟ್ ಪರ್ಫಾರ್ಮೆನ್ಸ್. ಇದನ್ನು ಎಲ್ಲರೂ ಒಪ್ಪುತ್ತಾರೆ.

ನೂರಕ್ಕೆ ಮೂವತ್ತೆಂಟು ಪರ್ಸೆಂಟ್ ಮಾರ್ಕ್ಸ್ ಪಡೆದರೆ ಆವಾಗ ಅದನ್ನು ಗ್ರೇಟ್ ಪರ್ಫಾರ್ಮೆನ್ಸ್ ಅಂತ ಕರೆಯಲಿಕ್ಕಾಗುವುದಿಲ್ಲ. ಅಲ್ಲವೇ?

ಇದೇ ಇನ್ನೊಂದು ಸನ್ನಿವೇಶ ನೆನಪಿಸಿಕೊಳ್ಳಿ. ನಿಮ್ಮ ಮನೆಯಲ್ಲಿ ನಿಮ್ಮ ಪತ್ನಿ ಅಥವಾ ಮನೆಯವರು ದಿನಕ್ಕೊಂದು ಬಾರಿ ಹಾಲು ಬಿಸಿ ಮಾಡುತ್ತಾರೆ ಎಂದುಕೊಳ್ಳೋಣ. ಎಷ್ಟು ದಿನಕ್ಕೊಮ್ಮೆ ಹಾಲು ಬಿಸಿ ಮಾಡುವಾಗ ಅದರಲ್ಲಿ ಹಾಲು ಉಕ್ಕಿ ಹೊರಹೋಗುತ್ತದೆ? ನಿಮ್ಮವರು ದಿನಾ ಹಾಲು ಬಿಸಿ ಮಾಡುವಾಗ ಹಾಲು ಉಕ್ಕಿ ಹೊರಹೋದರೆ ಆಗ ನೀವು ಅವರಿಗೆ ಬೈಯೋದಿಲ್ಲ? ದಿನಾ ಹಾಲು ಉಕ್ಕಿ ಹೋದರೆ, ಆಗ ಉಕ್ಕಿಸುವಾಕೆಯ ಸರ್ವೀಸು ಅತ್ಯಂತ ಪೂರ್ ಅಲ್ವೇ?

ಅದೇ ವಾರಕ್ಕೊಂದು ಬಾರಿ ಹಾಲು ಉಕ್ಕಿ ಹರಿದರೆ ನೀವು ಖಂಡಿತವಾಗಿಯೂ ಅಸಹನೆಗೊಳ್ಳುತ್ತೀರಿ. ತೀರ ಬೈಯದೆ ಹೋದರೂ. ದಿನಾ ಉಕ್ಕೋದಕ್ಕಿಂತ ಇದು ಬೆಟರ್ ಅಲ್ವ?

ನಿಮ್ಮವರು ತಿಂಗಳ 30 ದಿನದಲ್ಲಿ, ಹಾಲು ಬಿಸಿಮಾಡುವಾಗ ಯಾವತ್ತಾದರೂ ಒಂದು ದಿನ ಮಾತ್ರ ಹಾಲು ಉಕ್ಕಿಸಿ ಹೊರ ಚೆಲ್ಲಿಸುತ್ತಾರೆ ಅಂದುಕೊಳ್ಳಿ. ಆವಾಗ, ಇಂತಹ ಸಂದರ್ಭಗಳಲ್ಲಿ ನೀವು ಸುಮ್ಮನಿರಬಹುದು. ಯಾಕೆಂದರೆ ಗಮನ ಸ್ವಲ್ಪ ಆ ಕಡೆ ಈ ಕಡೆ ಹೋದ ಸನ್ನಿವೇಶದಲ್ಲಿ ಕೂಡ ಹಾಲು ಉಕ್ಕಿ ಹೊರಗೆ ಹರಿದು ಹೋಗುವುದು ಆಗುತ್ತದೆ. ತಿಂಗಳಿಗೊಮ್ಮೆ ಇಂತಹುದು ನಡೆದರೆ, ಅದು ಸಾಮಾನ್ಯವಾಗಿ acceptable. ಎಲ್ಲರ ಮನೆಯಲ್ಲೂ ಅದು ನಡೆಯುತ್ತಿರುತ್ತದೆ, ನಾವೇ ಸ್ವತಃ ಹಾಲು ಬಿಸಿ ಮಾಡಿದರೂ. ಈ ಸಂಧರ್ಭದಲ್ಲಿನ ಮಿಸ್ಟೇಕ್ ಪರ್ಸೆಂಟೇಜ್ 3.33 %. (1/30=3.33%)

ಈಗ ಬೇರೊಂದು ಸನ್ನಿವೇಶವನ್ನು ತೆಗೆದುಕೊಳ್ಳೋಣ. ನೀವು ದಿನಂಪ್ರತಿ ಉದ್ಯೋಗದ ನಿಮಿತ್ತ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಪ್ರಯಾಣ ಮಾಡುತ್ತೀರಿ ಅಂದುಕೊಳ್ಳಿ. ವರ್ಷಕ್ಕೆ ಇರುವುದು 365 ದಿನಗಳು. ಅದರಲ್ಲಿ ವಾರದ ರಜ ಮತ್ತಿತರ ರಜಾ ದಿನಗಳನ್ನು ಕಳೆದು ನಮ್ಮಕೆಲಸದ ದಿನಗಳು 300 ದಿನಗಳು ಅಂತ ಇಟ್ಟುಕೊಳ್ಳಿ. ಈ ಮೂರು ದಿನಗಳಲ್ಲಿ ನೀವು ಪ್ರಯಾಣಿಸುವ ಬಸ್ಸುಎಷ್ಟು ದಿನ ಸಣ್ಣ ಪುಟ್ಟ ರಿಪೇರಿಗೆ ಬಂದು ನಿಂತು, ನೀವು ಬೇರೆ ಬಸ್ಸು ಹತ್ತಿಕೊಳ್ಳುವಂತಾದರೆ ನಿಮ್ಮ ಪಾಲಿಗೆ ಸಹ್ಯ? ಉದಾಹರಣೆಗೆ, ವರ್ಷಕ್ಕೊಂದು ಬಾರಿ ಬಸ್ಸು ಕೆಟ್ಟು ಹೋಗಿ ನೀವು ಬೇರೆ ವಾಹನದಲ್ಲಿ ಹೋದಿರಿ ಅಂತಾದರೆ, ಆಗ ಕ್ವಾಲಿಟಿಯಲ್ಲಿನ ತಪ್ಪು ಮುನ್ನೂರರಲ್ಲಿ ಒಂದು. ಅಂದರೆ, 1/300=0.33%. ಬಹುಶ: ಈ ಮಟ್ಟಿಗಿನ ಬ್ರಾಕ್ ಡೌನ್ ಗಳು ಸಹಜ, ಇದು ಎಲ್ಲರ ಪಾಲಿಗೆ acceptable. 

ಇದೇ ತರಹ, ಎಷ್ಟು ದಿನಕ್ಕೊಮ್ಮೆ ನೀವು ಪ್ರಯಾಣಿಸುವ ಬಸ್ಸು ಆಕ್ಸಿಡೆಂಟ್ ಆದರೆ ಅದು ನಿಮಗೆ ಒಪ್ಪಿಗೆ? ಖಂಡಿತವಾಗಿಯೂ ಸೊನ್ನೆ.! ಯಾವುದೇ ಕಾರಣಕ್ಕೂನಾವು ಪ್ರಯಾಣಿಸುವ ಬಸ್ಸುಆಕ್ಸಿಡೆಂಟ್ ಆಗಬಾರದು. ಯಾವ ಕಾರಣಕ್ಕೂ ನಾವು ಪ್ರಯಾಣಿಸುವ ವಾಹನ ಅಪಘಾತ ವಾಗುವುದನ್ನು ನಾವು ಒಪ್ಪುವುದಿಲ್ಲ. ರೈಟ್ !

ಆದ್ದರಿಂದ ಹಾಲು ಉಕ್ಕುವುದು 30 ದಿನಗಳಿಗೆ ಒಂದು ಬಾರಿ ನಡೆದರೂ ಅದು ನಮಗೆ ಸಹ್ಯ. ನಾವು ಪ್ರಯಾಣಿಸುವ ಬಸ್ಸುವರ್ಷಕ್ಕೊಂದು ಬಾರಿ ಮಧ್ಯದಲ್ಲಿ ನಿಂತು ಹಾಳಾಗಿ ನಾವು ಬೇರೆ ಬಸ್ಸು ಹತ್ತಿ ಹೋದರೆ ಅದು ಕೂಡ ನಮಗೆ ಅಂತಹ ದೊಡ್ಡ ಸಮಸ್ಯೆಯಲ್ಲ. ಆದರೆ ನಾವು ಪ್ರಯಾಣಿಸುವ ಬಸ್ಸು ಯಾವುದೇ ಕಾರಣಕ್ಕೂಆಕ್ಸಿಡೆಂಟ್ ಆಗಬಾರದು. ಈ ಬೇರೆ ಬೇರೆ ಸನ್ನಿವೇಶಗಳಲ್ಲಿ, ನಮ್ಮ ಕ್ವಾಲಿಟಿಯ ನಿರೀಕ್ಷೆ ಬೇರೆ ಬೇರೆ ಯಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಕ್ವಾಲಿಟಿಯನ್ನು ಅಳೆಯಲು ಬಳಸುವ ಮಾಪಕದ ಹೆಸರು ಸಿಕ್ಸ್ ಸಿಗ್ಮ.

ಮೇಲಿನ ಎಲ್ಲ ಉದಾಹರಣೆಗಳ ಸಂಬಂಧಿತ ಈ ಚಾರ್ಟ್ ನೋಡಿ.

ಸಿಕ್ಸ್ ಸಿಗ್ಮಕ್ವಾಲಿಟಿ ಅಂದರೇನು ?
ಸಿಕ್ಸ್ ಸಿಗ್ಮ ಅನ್ನೋದೊಂದು ಸಂಖ್ಯಾಶಾಸ್ತ್ರದ ಆಧಾರದ ಮೇಲೆ ವಸ್ತುವಿನ ಅಥವಾ ಸರ್ವಿಸ್ ನ ಗುಣಮಟ್ಟವನ್ನು ಅಳೆಯುವ ಸಾಧನ.
ನಮ್ಮದಿನನಿತ್ಯದ ಆಗುಹೋಗುಗಳಲ್ಲಿ ಎಷ್ಟು ತಪ್ಪುಗಳು ಅಥವಾ ಫೈಲ್ಯೂರ್ ಗಳು, ಮತ್ತವು ಯಾವ ಕ್ವಾಲಿಟಿಯ ಮಟ್ಟದಲ್ಲಿದೆ ಎಂದು ಸಿಕ್ಸ್ ಸಿಗ್ಮಾಅಂಕಿಗಳು ನಮಗೆ ತೋರಿಸಿ ತೋರಿಸಿಕೊಡುತ್ತವೆ.

ಎಲ್ಲಿ ಎಷ್ಟು ಪರ್ಫೆಕ್ಟ್ ಕ್ವಾಲಿಟಿಯ ಅಗತ್ಯ ಇದೆ?

ಜೀರೋ ಡಿಫೆಕ್ಟ್ ಅನ್ನುವುದು ಒಂದು ದೊಡ್ಡ ಸುಳ್ಳು ಅಥವಾ ಮೋಸ. ಯಾಕೆಂದರೆ ಡಿಫೆಕ್ಟ್ ಇಲ್ಲದ ವಸ್ತು ಅಥವಾ ಸರ್ವೀಸು, ಈ ಜಗತ್ತಿನಲ್ಲಿ ಇರುವುದಿಲ್ಲ.
ಆದರೆ, ಪರ್ಫೆಕ್ಟ್ ಗೆ ಹತ್ತತ್ತಿರದ ಕ್ವಾಲಿಟಿಯ ಸಾಧ್ಯತೆ ಮತ್ತು ಅಗತ್ಯತೆ ಖಂಡಿತಾ ಇದೆ.
ಮಗ ನೂರಕ್ಕೆ ನೂರು ಮಾರ್ಕು ಪಡೆದರರೂ ಪಡೆಯದೇ ಹೋದರೆ ಅಂತಹ ಅವಗಡ ಏನೂ ಆಗುವುದಿಲ್ಲ. ಮನೆಯಾಕೆ ವಾರಕ್ಕೊಂದು ಬಾರಿ ಹಾಲು ಉಕ್ಕಿ ಚೆಲ್ಲಿದರೂ, ಹಾಲಿಗೆ ಕೊಟ್ಟ ದುಡ್ಡು ಹಾಳಾಗಬಹುದೇ ವಿನಾ ಅಂತಹ ದೊಡ್ಡ ತೊಂದರೆ ಆಗುವುದಿಲ್ಲ.

ಆದರೆ ಏವಿಯೇಶನ್ ಇಂಡಸ್ಟ್ರಿಯಲ್ಲಿ, ವಿಮಾನಯಾನದ ಸಂದರ್ಭದಲ್ಲಿ ವಿಮಾನ ಟೇಕಾಫ್ ಆಗುವಾಗ ಅಥವಾ ವಿಮಾನ ಹಾರಾಟದಲ್ಲಿ ಬರಬಹುದಾದ ತೊಂದರೆಗಳ ಸಂದರ್ಭಗಳಲ್ಲಿ ಏನಾದರೂ ಸಣ್ಣ ತೊಂದರೆ ಆದರೂ ಅದರ ಪರಿಣಾಮ ಭೀಕರವಾಗಿರುತ್ತದೆ. ಆದ್ದರಿಂದ ವಿಮಾನಯಾನದ ಇಂಡಸ್ಟ್ರಿಗಳಲ್ಲಿ ಸಿಕ್ಸ್ ಸಿಗ್ಮಾಲೆವೆಲ್ ಅಥವಾ ಅದಕ್ಕಿಂತ ಅಧಿಕ ಕ್ವಾಲಿಟಿಯ, ಪರ್ಫೆಕ್ಷನ್ ನ ಅತ್ಯಂತ ಅಗತ್ಯವಾದದ್ದು.
ವಿಮಾನಯಾನದಲ್ಲಿ ಇತರ ಎಲ್ಲಾ ವಿಭಾಗಗಳಲ್ಲೂ ಸಿಕ್ಸ್ ಸಿಗ್ಮಾ ಕ್ವಾಲಿಟಿಯ ಅಗತ್ಯತೆ ಏನೂ ಇಲ್ಲ. ಏವಿಯೇಷನ್ ಸಂಸ್ಥೆಗಳ ಇತರ ನಾನ್ ಕೋರ್ ವಿಭಾಗಗಳಾದ ಬ್ಯಾಗು ವಿತರಣೆ, ಬ್ಯಾಗು ಮಿಸ್ಸಿಂಗ್, ಬೋರ್ಡಿಂಗ್ ಪಾಸ್ ವಿತರಣೆ, ಟಿಕೆಟ್ ಚೆಕಿಂಗ್ ಮುಂತಾದ ವಿಭಾಗಗಳಲ್ಲಿ ಪರ್ಫೆಕ್ಟ್ ಕ್ವಾಲಿಟಿಯ ಅನಿವಾರ್ಯತೆ ಏನೂ ಇಲ್ಲ.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಿನವೊಂದಕ್ಕೆ ಆರುನೂರರಿಂದ ಆರುನೂರ ಅರವತ್ತೈದು ಏರೋಪ್ಲೇನ್ ಗಳು ಟೇಕ್ ಆಫ್ ಆಗುತ್ತವೆ. ದಿನಕ್ಕೆ85000 ಕ್ಕೆ ಮಿಕ್ಕಿ ಪ್ರಯಾಣಿಕರು ಪ್ರಯಾಣಿಸುತ್ತಾರೆ. ವಿಮಾನಯಾನದಲ್ಲಿ, ಯಾವುದೇ ಕಾರಣಕ್ಕೂ ಅವಘಡ ಸಂಭವಿಸಬಾರದು. ಅದು ನಮ್ಮ ಟಾರ್ಗೆಟ್. ಯಾಕೆಂದರೆ ಗಾಳಿಯಲ್ಲಿ ಹಾರಲ್ಪಡುವ, ಅತ್ಯಂತ ವೇಗವಾಗಿ ಸಾಗುವ ವಿಮಾನಗಳು, ಯಾವುದೇ ಕಾರಣಕ್ಕೆ ಸಣ್ಣ ಅವಘಡ ಕೂಡ ಆಗದಂತೆ ಕಾರ್ಯನಿರ್ವಹಿಸಬೇಕಾಗುತ್ತದೆ. ಸಣ್ಣ ಒಂದು ತಪ್ಪು ಕೂಡಾ ದೊಡ್ಡ ಅಪಘಾತಕ್ಕೆ ದಾರಿಯಾಗುತ್ತದೆ. ವಿಪರೀತ ಸಾವುನೋವಿಗೆ ಕಾರಣವಾಗುತ್ತದೆ.

ಆದುದರಿಂದ ವಿಮಾನಯಾನದಲ್ಲಿ ನಮ್ಮಇಂದಿನ 98 % ಅಥವಾ 99 % ಸಕ್ಸಸ್ ರೇಟ್ ಸಾಕಾಗುವುದಿಲ್ಲ. ಮೇಲೆ ತೋರಿಸಿದ ಚಾರ್ಟಿನಂತೆ, ವಿಮಾಯಣದಲ್ಲಿ ಸಿಕ್ಸ್ ಸಿಗ್ಮಾಕ್ಕಿಂತಲೂ ಅಧಿಕ ಮಟ್ಟದ ಸುರಕ್ಷತೆಯಿದೆ. ಸಿಕ್ಸ್ ಸಿಗ್ಮಾಲೆವೆಲ್ ನ ಕ್ವಾಲಿಟಿಯಲ್ಲಿ, ಪ್ರತಿ ಮಿಲಿಯ ( 1 ಮಿಲಿಯನ್ ಅಂದರೆ ಹತ್ತು ಲಕ್ಷ) ಯಾನದಲ್ಲಿ ಕೇವಲ 3.4 ಅವಘಡ ಆಗಬಹುದು.
ಅದೇ ಪ್ರತಿ ಮಿಲಿಯನ್ ವಿಮಾನಯಾನ ಪ್ರಯಾಣಿಕರಿಗೆ ಎಷ್ಟು ಸಾವು ಸಂಭವಿಸುತ್ತದೆ ಅನ್ನುವುದು ಇನ್ನೊಂದು ಸಿಗ್ಮಾಲೆಕ್ಕಾಚಾರ. ಒಟ್ಟಾರೆಯಾಗಿ ಹೇಳಬೇಕೆಂದರೆ, 10 ಲಕ್ಷ ಘಟನೆಗಳಿಗೆ,10 ಲಕ್ಷ ಸರ್ವೀಸುಗಳಿಗೆ, ಹತ್ತು ಲಕ್ಷ ವಿಮಾನ ಪ್ರಯಾಣಕ್ಕೆ, ಹತ್ತು ಲಕ್ಷ ಸಲ ಹಾಲು ಬಿಸಿ ಮಾಡುವಾಗ, ಹತ್ತು ಲಕ್ಷ ಸಲ ಬಸ್ಸು ಪ್ರಯಾಣಕ್ಕೆ- ಎಲ್ಲ ಸಂಧರ್ಭದಲ್ಲೂ 10 ಲಕ್ಷಕ್ಕೆ ಕೇವಲ 3.4 ಮಿಸ್ಟೇಕು ಮಾತ್ರ ಆಗಬೇಕು. ಹಾಗಾದಾಗ ಮಾತ್ರ ಅದು ಸಿಕ್ಸ್ ಸಿಗ್ಮಾಕ್ವಾಲಿಟಿ ಯ ಸರ್ವೀಸು !

ಸಿಕ್ಸ್ ಸಿಗ್ಮಾಕ್ವಾಲಿಟಿಯನ್ನು ಔದ್ಯಮಿಕ ಜಗತ್ತು ತನ್ನ ತಕ್ಷಣದ ಸ್ಟ್ಯಾಂಡರ್ಡ್ ಆಗಿ ಗುರುತಿಸಿದೆ. ತಯಾರಿಕೆ, ವಿತರಣೆ, ಪೂರೈಕೆ, ಸಾರಿಗೆ, ಆಹಾರ, ಬ್ಯಾಂಕಿಂಗು-ಹೀಗೆ ಕ್ಷೇತ್ರ ಯಾವುದೇ ಇದ್ದರೂ ಸಿಕ್ಸ್ ಸಿಗ್ಮಾ ಲೆವೆಲ್ಲಿನ ಕ್ವಾಲಿಟಿ ಇದ್ದರೆ, ಅದು ಅತ್ಯ೦ತ ತೃಪ್ತ ಮಟ್ಟದ ಗುಣಮಟ್ಟ ಅನ್ನಬಹುದು. ಆದರೆ, ವಿಮಾನಯಾನ, ವೈದ್ಯಕೀಯ, ಅಣು-ಪರಮಾಣುವಿಗೆ ಸಂಬಂಧಿಸದ ಕಾರ್ಯಗಳು, ಫಾರ್ಮಾಸ್ಯುಟಿಕಲ್, ರಕ್ಷಣೆ, ಬಾಹ್ಯಾಕಾಶ ಮುಂತಾದ ವಿಭಾಗಗಳಲ್ಲಿ ಎಂಟು, ಹತ್ತು ಸಿಗ್ಮಾಮಟ್ಟದ ಕ್ವಾಲಿಟಿ ಅಗತ್ಯತೆ ಇದೆ .

ಸಿಕ್ಸ್ ಸಿಗ್ಮಾಮಟ್ಟದ ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟದ ಕ್ವಾಲಿಟಿಯ ಬಗ್ಗೆ ತಿಳಿದುಕೊಂಡೆವು. ಸಿಕ್ಸ್ ಸಿಗ್ಮಾ ಕಾನ್ಸೆಪ್ಟ್ ಇರುವುದು ಕೇವಲ ಗುಣಮಟ್ಟದ ಅಳತೆಗೆ ಮಾತ್ರ ಅಲ್ಲ. ಆ ಮಟ್ಟದ ಗುಣಮಟ್ಟವಿರುವ ವಸ್ತುವನ್ನು ಅಥವಾ ಸರ್ವೀಸನ್ನು ನಾವು ಬಯಸಿದಲ್ಲಿ ತಯಾರು ಮಾಡಬಹುದು.
ಹಾಗೆ ಸಿಕ್ಸ್ ಸಿಗ್ಮ ಕ್ವಾಲಿಟಿಯನ್ನು ಹೊಂದಲು ಏನು ಮಾಡಬೇಕು. ಆ ಮಟ್ಟದ ಉತ್ಕೃಷ್ಟ ಕ್ವಾಲಿಟಿಯನ್ನು ಹೊಂದುವುದು ಕೇವಲ ಔದ್ಯಮಿಕ ವಲಯಗಳಲ್ಲಿ ಮಾತ್ರವಲ್ಲ, ಜೀವನದ ಪ್ರತಿ ಸಂಘಟನೆಯಲ್ಲಿಯೂ ಸಾಧುವಾಗುವಂತೆ ಮಾಡಬಹುದು. ಆ ಟೆಕ್ನಿಕ್ ನ ಬಗ್ಗಿ ಇನ್ನೊಂದು ಬಾರಿ ತಿಳಿದುಕೊಳ್ಳೋಣ.

?ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave A Reply

Your email address will not be published.