ಕಂಬಳ ಕ್ಷೇತ್ರದ ಉಸೇನ್ ಬೋಲ್ಟ್’ ಖ್ಯಾತಿಯ,
ಕರ್ನಾಟಕ ಕ್ರೀಡಾರತ್ನ’ ಪ್ರಶಸ್ತಿ ಪುರಸ್ಕೃತ, ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಅವರನ್ನು ಯುವಕನೋರ್ವ ದೂರವಾಣಿ ಕರೆಯ ಮುಖಾಂತರ ನಿಂದಿಸಿರುವ ಪ್ರಕರಣ ಮೂಡುಬಿದಿರೆ ಪೊಲೀಸ್ ಠಾಣೆಯ ಮೆಟ್ಟಲೇರಿದೆ.
ಗುರುವಾರ ಪ್ರಶಾಂತ್ ಎಂಬಾತ ದೂರವಾಣಿಯಲ್ಲಿ ಕಂಬಳದ ಕುರಿತು ಮಾತನಾಡಿ, ತನ್ನನ್ನು, ತನ್ನ ಕುಟುಂಬದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಶ್ರೀನಿವಾಸ ಗೌಡ ಅವರು ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದಾರೆ.
ಶ್ರೀನಿವಾಸಗೌಡರಿಗೆ ಕರೆ ಮಾಡಿ ಬೆದರಿಕೆ ಒಡ್ಡಿದ ವ್ಯಕ್ತಿ ಕರೆಯಲ್ಲಿ ‘ನಾನು ಪ್ರಶಾಂತ್ ಬಂಗೇರ, ಶ್ರೀರಾಮ ಸೇನೆಯಲ್ಲಿದ್ದೇನೆ ಎಂದು ಪರಿಚಯಿಸಿಕೊಂಡು ಮಂಗಳೂರು ಕಾರ್ ಸ್ಟ್ರೀಟ್‌ನಲ್ಲಿ ರಿಯಲ್ ಎಸ್ಟೇಟ್ ಕಚೇರಿ ಇದೆ ಅಲ್ಲಿಗೆ ಬನ್ನಿ ಕಂಬಳದ ಇತಿಹಾಸ ತಿಳಿಸುತ್ತೇನೆ’ ಎಂದು ಆಹ್ವಾನಿಸಿದ್ದಾರೆ. ‘ನಾನು ಬರುವುದಿಲ್ಲ ನೀವು ಒಂಟಿಕಟ್ಟೆಗೆ ಬನ್ನಿ’ ಎಂದು ಶ್ರೀನಿವಾಸ ಗೌಡ ಹೇಳಿದ್ದಾರೆ. ‘ನಾನು ಬರುತ್ತೇನೆ. ಆದರೆ, ನೀನು ಅಲ್ಲಿಗೆ ಬರುವಾಗ ಬೆನ್ನಿಗೆ ಹಾಳೆ ಕಟ್ಟಿಕೊಂಡು ಬಾ.ಜತೆಯಲ್ಲಿ ನಿನ್ನ ಬೆಂಬಲಿಗರನ್ನು ಕರೆದುಕೊಂಡು ಬಾ’ ಎಂದು ಪ್ರಶಾಂತ್ ಗದರಿಸಿದ್ದಾರೆ ಎನ್ನಲಾಗಿದೆ.
ಆರೋಪಿಯನ್ನು ಶುಕ್ರವಾರ ಸಂಜೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಶ್ರೀನಿವಾಸ ಗೌಡ ಅಭಿಮಾನಿ ಬಳಗ ಇದೇ 17 ಮಧ್ಯಾಹ್ನ 3 ಗಂಟೆಗೆ ಸಮಾಜ ಮಂದಿರದಲ್ಲಿ ಸಭೆ ಕರೆದಿದ್ದು, ಕಂಬಳ ಯಜಮಾನರು, ಓಟಗಾರರು, ಕಂಬಳಾಭಿಮಾನಿಗಳನ್ನು ಆಹ್ವಾನಿಸಿದೆ.
ಸಾಧಕ ಓಟಗಾರನನ್ನು ಅವಹೇಳನ ಮಾಡಿರುವುದನ್ನು ಜನಪ್ರತಿನಿಧಿಗಳು, ಕಂಬಳ ಕ್ಷೇತ್ರದ ಪ್ರಮುಖರು, ಕಂಬಳಾಭಿಮಾನಿಗಳು ಖಂಡಿಸಿದ್ದಾರೆ.
ಶಾಸಕ ಉಮಾನಾಥ ಕೋಟ್ಯಾನ್ ಖಂಡನೆ, ಕಾನೂನು ಕ್ರಮಕ್ಕೆ ಸೂಚನೆ: ಕಂಬಳ ರಂಗದಲ್ಲಿ ಸಾಧಕನಾಗಿ ಮಿಂಚುತ್ತ ಊರಿಗೆ, ದೇಶಕ್ಕೆ ಕೀರ್ತಿ ತಂದಿರುವ ಶ್ರೀನಿವಾಸ ಗೌಡರನ್ನು, ಅವರ ಕುಟುಂಬದವರನ್ನು ನಿಂದಿಸಿರುವುದು ಅವರಿಗೆ ಮಾಡಿರುವ ಅವಮಾನ ಮಾತ್ರವಲ್ಲ, ಇಡೀ ಕಂಬಳ ರಂಗಕ್ಕೆ, ಈ ನಾಡಿಗೆ ಮಾಡಿರುವ ಮಾಡಿರುವ ಅಪಮಾನ; ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕನಾಗಿ, ಮೂಡುಬಿದಿರೆಯ ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷನಾಗಿ ಸದಾ ಶ್ರೀನಿವಾಸ ಗೌಡರ ಜತೆ ನಾನಿದ್ದೇನೆ. ಅವರನ್ನು ನಿಂದಿಸಿರುವ ಯುವಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ’ ಎಂದು ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದ್ದಾರೆ