ಅರಬ್ಬೀ ಸಮುದ್ರ ದೊಡ್ಡದಾಗಿ ಕುಲುಕಿದೆ | ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಜುಲೈ 18 ರವರೆಗೆ ರೆಡ್ ಅಲರ್ಟ್ ಘೋಷಣೆ !
ದ.ಕ, ಉಡುಪಿ: ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದಾದ್ಯಂತ ಇಂದಿನಿಂದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಜು.18ರವರೆಗೆ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿಯಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿಎಸ್ ಪಾಟೀಲ್ ತಿಳಿಸಿದ್ದಾರೆ.
ಈ ನಡುವೆ ಅರಬ್ಬೀ ಸಮುದ್ರ ದೊಡ್ಡದಾಗಿ ಕುಲುಕಿದೆ. ನಿನ್ನೆಯಿಂದ ದಕ್ಷಿಣಕನ್ನಡದಾದ್ಯಂತ ಸುರಿಯುತ್ತಿರೋ ಭಾರೀ ಮಳೆಗೆ ಅರಬ್ಬೀ ಸಮುದ್ರ ಪ್ರಕ್ಷುಬ್ಧವಾಗಿದೆ. ದಡಕ್ಕೆ ಅಪ್ಪಳಿಸುತ್ತಿರುವ ಭಾರೀ ಗಾತ್ರದ ಅಲೆಗಳಲ್ಲಿ ಎಂದೂ ಇಲ್ಲದ ತಳಮಳ. ಉಳ್ಳಾಲ, ಸೋಮೇಶ್ವರ, ಉಚ್ಚಿಲ ಕಡಲ ಕಿನಾರೆಯಲ್ಲಿ ಆತಂಕ ಅಧಿಕ. ಅಲೆಗಳ ಅಬ್ಬರ ಕಂಡು ಉಚ್ಚಿಲದ ಸಮುದ್ರ ಬದಿ ರೆಸಾರ್ಟ್ ನಲ್ಲಿರೋ ಪ್ರವಾಸಿಗರ ಹಣೆಯಲ್ಲಿ, ಈ ಮಳೆಗಾಲದ ತಂಪು ವಾತಾವರಣದಲ್ಲೂ ಸಣ್ಣಗೆ ಬೆವರು.
ಸಮುದ್ರದ ರುದ್ರ ಸೌಂದರ್ಯ ಸವಿಯಲು ಬಂದಿದ್ದ ಪ್ರವಾಸಿಗರಲ್ಲಿ ಒಂದು ತರಹದ ಭಯ ಮನೆ ಮಾಡಿದೆ.
ಅಲೆಗಳ ಅಬ್ಬರ ಕಂಡು ಉಚ್ಚಿಲದ ಸಮುದ್ರ ಬದಿ ರೆಸಾರ್ಟ್ ನಲ್ಲಿರೋ ಪ್ರವಾಸಿಗರಲ್ಲಿ ಆತಂಕ ಸ್ಪಷ್ಟವಾಗಿ ಕಾಣುತ್ತಿತ್ತು.
ಉಚ್ಚಿಲದ ರೆಸಾರ್ಟ್ ಗೆ ಟ್ರಿಪ್ ಬಂದಿದ್ದ ಬೆಂಗಳೂರಿನ ಪ್ರವಾಸಿಗರು ಅಲೆಗಳ ಅಬ್ಬರಕ್ಕೆ ಕಂಗಾಲಾಗಿ ಪ್ಯಾಕಪ್ ಮೂಡಿನಲ್ಲಿದ್ದರು.
” ದಕ್ಷಿಣ ಕನ್ನಡ ಮತ್ತು ಉಡುಪಿಯ ದೇಗುಲಗಳ ದರ್ಶನಕ್ಕೆಂದು ಬಂದವರು ಬೀಚ್ ನೋಡೋಕೆ ಅಂತ ಬಂದಿದ್ದು, ಇಲ್ಲಿ ನೋಡಿದರೆ ಮಳೆಯಿಂದಾಗಿ ಎಲ್ಲಾ ಡೇಂಜರ್ ಆಗಿ ಕಾಣುತ್ತಿದೆ. ಒಂದು ಥರಾ ಭಯ ಆಗ್ತಿದೆ ” ಎಂದು ಪ್ರವಾಸಿಗರೊಬ್ಬರು ತಮ್ಮ ಅಭಿಪ್ರಾಯ ಹೇಳಿಕೊಂಡರು.
ಈಗಾಗಲೇ ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ರೆಡ್,ಯೆಲ್ಲೋ ಹಾಗೂ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲೂ ಕೂಡ ಇಂದು ಮತ್ತು ನಾಳೆ ಭಾರೀ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದ್ದು, ಜು. 16ರಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜು.17ರಂದು ಈ ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಪ್ರದೇಶದ ಮೀನುಗಾರರಿಗೂ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.