ದೈವಸ್ಥಾನದ ಆವರಣದಲ್ಲಿ ಕ್ರಿಕೆಟ್ ಆಟ ಆಕ್ಷೇಪ | ಧರ್ಮ ದ್ವೇಷ ಬಿತ್ತುವ ಕೆಲಸ ಆರೋಪ ,ಪ್ರಕರಣ ಸುಖಾಂತ್ಯ

ಸುಳ್ಯದ ಜಯನಗರ ಸಮೀಪದ ಕೊರಂಬಡ್ಕ ಆದಿಮೊಗೆರ್ಕಳ ದೈವಸ್ಥಾನದಲ್ಲಿ ಕ್ರಿಕೆಟ್ ಆಡುತ್ತಿದ್ದದ್ದಕ್ಕೆ ಸಂಬಂಧಿಸಿ ವಿರೋಧ ವ್ಯಕ್ತಪಡಿಸಿದ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.

ದೈವಸ್ಥಾನಕ್ಕೆ ಸಂಬಂಧಿಸಿದ ಜಾಗದಲ್ಲಿ ಗಿಡ ನೆಡಲು ಆಡಳಿತ ಮಂಡಳಿ ನಿರ್ಧರಿಸಿತ್ತು. ಅದಕ್ಕಾಗಿ ಅಲ್ಲಿ ಗುಂಡಿ ತೆಗೆಯಲಾಗಿತ್ತು. ಇದರಿಂದ ಕ್ರಿಕೆಟ್ ಆಡಲು ಆಗಲ್ಲ ಎಂಬ ಕಾರಣಕ್ಕೆ ಸ್ಥಳೀಯ ಕೆಲ ಯುವಕರು ಆಡಳಿತ ಮಂಡಳಿಯವರ ಕ್ರಮ ಸರಿಯಲ್ಲ ಎಂದು ಪ್ರತಿಭಟಿಸಿದರು. ದೈವಸ್ಥಾನ ಆಡಳಿತ ಮಂಡಳಿಯ ಪ್ರವೀಣ್ ಉಬರಡ್ಕ ಎಂಬವರು ಮಾತನಾಡಿ ಕ್ರಿಕೆಟ್ ಆಡಲು ಇಲ್ಲಿ ಅವಕಾಶವಿಲ್ಲ ಎಂದದ್ದಕ್ಕೆ ನಾವೂ ಹಿಂದುಗಳು ಎಂದು ಯುವಕರು ಮರು ಉತ್ತರಿಸಿದ್ದಾರೆ.

ಇದರಿಂದ ಪ್ರವೀಣ್ ಅವರು ಇಲ್ಲ ಇಲ್ಲಿ ಕ್ರಿಶ್ಚಿಯನ್ ಕೂಡ ಇದ್ದಾರೆ ಎಂದು ಕ್ರಿಶ್ಚಿಯನ್ ಯುವಕನಿಗೆ ಹೊರಗೆ ಹೋಗುವಂತೆ ಹೇಳಿದ್ದಾರೆ. ಇದು ಧರ್ಮ ದ್ವೇಷ ಬಿತ್ತುವ ಮಾತು ಎಂದು ಕ್ರಿಕೆಟ್ ಆಡುವ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ.

ಬಳಿಕ ಪೊಲೀಸ್ ಠಾಣೆಗೆ ಎರಡೂ ತಂಡಗಳು ತೆರಳಿ ಮುಂದೆ ಈ ರೀತಿ ಆಗುವುದಿಲ್ಲ. ದೈವಸ್ಥಾನದ ಆವರಣದಲ್ಲಿ ಕ್ರಿಕೆಟ್ ಆಡುವ ಕ್ರಮ ಸರಿಯಲ್ಲ ಎಂಬ ಕುರಿತು ಮೊದಲೇ ಸಾರ್ವಜನಿಕವಾಗಿ ನಿರ್ಧಾರವಾಗಿದ್ದರೂ ಆಟ ಆಡಿದ್ದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದು ಬಿಟ್ಟರೆ ಧರ್ಮ ದ್ವೇಷ ಬಿತ್ತುವ ಉದ್ದೇಶ ನಮಗಿರಲಿಲ್ಲ ಎಂದು ಪ್ರವೀಣ್ ಅವರು ಪೊಲೀಸ್ ಠಾಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.