ಉಡುಪಿ ಮಗು ಕಿಡ್ನಾಪ್ | ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಕಿಡ್ನಾಪರ್ ಅರೆಸ್ಟ್, ಮಗು ಸೇಫ್ !!

ಉಡುಪಿ: ನಗರ ಠಾಣಾಧಿಕಾರಿ ಅಶೋಕ್ ಮತ್ತು ಅವರ ತಂಡದ ಮಿಂಚಿನ ಕಾರ್ಯಾಚರಣೆಯ ಮೂಲಕ ಮಗು ಮತ್ತು ಅಪಹರಣಕೋರನನ್ನು ಪತ್ತೆಮಾಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಕರಾವಳಿ ಬೈಪಾಸ್ ಬಳಿಯ ವಾಸವಾಗಿದ್ದ ಕೂಲಿ ಕಾರ್ಮಿಕ ದಂಪತಿ ಭಾರತಿ ಮತ್ತು ಅರುಣ್ ಅವರ ಅವಳಿ ಮಕ್ಕಳಲ್ಲಿ ಶಿವರಾಜ್ (2.5) ವರ್ಷದ ಮಗುವನ್ನು ಪರಿಚಯದ ಬಾದಾಮಿ ನಿವಾಸಿ ಪರಶುರಾಮ ಹರಿಜನ ಎನ್ನುವಾತ ಅಪಹರಿಸಿದ್ದ.

ಆರೋಪಿ ಪರಶು ಕೆಲವು ದಿನಗಳ ಹಿಂದಷ್ಟೇ ದಂಪತಿಗೆ ಪರಿಚಿತನಾಗಿದ್ದ. ಪ್ರತಿದಿನ ಮಗುವಿಗೆ ಚಾಕ್‌ಲೇಟ್ ಕೊಡಿಸಿ ಸಲುಗೆ ಬೆಳೆಸಿಕೊಂಡಿದ್ದ. ಭಾನುವಾರ ಬೆಳಿಗ್ಗೆ ತಿಂಡಿ ಕೊಡಿಸಿಕೊಂಡು ಬರುವುದಾಗಿ ಮಗುವನ್ನು ಕರೆದೊಯ್ದು ಮರಳಿ ಬಂದಿಲ್ಲ ಎಂದು ಪೋಷಕರು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಬಗ್ಗೆ ತಕ್ಷಣ ಕಾರ್ಯಪ್ರವೃತ್ತರಾದ ನಗರ ಠಾಣಾಧಿಕಾರಿ ಅಶೋಕ್ ನೇತೃತ್ವದ ತಂಡವು ಬೆಲ್ಟ್ ಬಿಗಿಮಾಡಿಕೊಂಡು, ಜೀಪು ಹತ್ತಿ, ಉಡುಪಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಅದಾಗಲೇ ಕೂಂಬಿಂಗ್ ಪ್ರಾರಂಭಿಸಿತ್ತು.

ಆರೋಪಿ ಮಗುವನ್ನು ಅಪಹರಿಸಿ ಕರಾವಳಿ ಜಂಕ್ಷನ್ ನಿಂದ ಸಿಟಿಬಸ್ ನಲ್ಲಿ ಹೋಗಿರುವ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಅದರ ಜಾಡು ಹಿಡಿದು ಆರೋಪಿ ಪತ್ತೆಗೆ ಕಾರ್ಯಾಚರಿಸಿದ ಪೊಲೀಸರು, ಆತ ಸಂತೆಕಟ್ಟೆ ಬಳಿ ಇಳಿದು ಬೇರೊಂದು ಬಸ್ ನಲ್ಲಿ ಹೋಗಿದ್ದ ಮಾಹಿತಿ ಕಲೆಹಾಕಿ, ಎಲ್ಲಾ ರೈಲ್ವೆ ನಿಲ್ದಾಣಗಳಿಗೆ ಮಾಹಿತಿ ನೀಡಿದ್ದರು.

ಅದಲ್ಲದೆ ಹೊನ್ನಾವರ, ಕುಮಟಾ, ಭಟ್ಕಳ ಪೊಲೀಸರಿಗೂ ಮಾಹಿತಿ ನೀಡಿದರು. ಅಲ್ಲಿನ ಪೊಲೀಸರ ಸಹಕಾರದೊಂದಿಗೆ ಆರೋಪಿ ಮತ್ತು ಮಗುವನ್ನು ವಶಕ್ಕೆ ಪಡೆದರು.

ಪೊಲೀಸರ ತಂಡ ತಡ ರಾತ್ರಿ ಕುಮಟದಿಂದ ಆರೋಪಿ ಪರಶುರಾಮ ಮತ್ತು ಮಗುವನ್ನು ವಶಕ್ಕೆ ತೆಗೆದುಕೊಂಡು ಉಡುಪಿಗೆ ಕರೆತಂದಿದ್ದಾರೆ.

ಕೊನೆಗೂ ಮಗು ಹೆತ್ತವರ ಮಡಿಲು ಸೇರಿದೆ. ಕೂಲಿ ಕಾರ್ಮಿಕರ ಮಗು ಎಂದು ಒಂದಿನಿತೂ ತಾತ್ಸಾರ ಮಾಡದೆ ಉಡುಪಿ ನಗರ ಪೊಲೀಸರು ಕೈಗೊಂಡ ಕೂಂಬಿಂಗ್ ಆಪರೇಷನ್ ಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ಕೇಳಿಬಂದಿದೆ.

Leave A Reply

Your email address will not be published.