ಎಸ್ಎಸ್ಎಸ್ ಸಿ ಪರೀಕ್ಷೆ ರದ್ಧತಿ ಕೋರಿ ಸಲ್ಲಿಸಿದ್ದ ಅರ್ಜಿ ವಜಾ | ನಿಗದಿಯಂತೆ ಜುಲೈ 19, 22 ರಂದು ಪರೀಕ್ಷೆ ಫಿಕ್ಸ್ !

ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದತಿ ಬಗ್ಗೆ ಕೋರಿದ್ದ ರಿಟ್ ಅರ್ಜಿಯನ್ನು ವಜಾ ಮಾಡಿರುವ ಕರ್ನಾಟಕ ಹೈಕೋರ್ಟ್, 2020-21ರ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿದೆ. ಜುಲೈ 19 ಮತ್ತು 22 ರಂದು ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆಗಳು ನಡೆಯಲಿವೆ ಎನ್ನಲಾಗಿದೆ.

ಕೊರೋನಾ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಎಸ್‌ವಿ ಸಿಂಗ್ರೇ ಗೌಡ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಹಂಚಾಟೆ ಸಂಜೀವ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠಠ ವಜಾಗೊಳಿಸಿದೆ.

ಇಂದು ಅರ್ಜಿದಾರರ ಹಾಗೂ ಸರ್ಕಾರದ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಅರ್ಜಿಯನ್ನು ವಜಾ ಮಾಡಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದಕ್ಕೆ ಅನುವು ಮಾಡಿಕೊಟ್ಟಿದೆ. ರಾಜ್ಯದಲ್ಲಿ ಸದ್ಯ ಕೋವಿಡ್ ಸೋಂಕು ಕಡಿಮೆ ಇರುವುದರಿಂದ ಪರೀಕ್ಷೆ ನಡೆಸುವುದು ಸೂಕ್ತವಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೋರ್ಡ್ ಪರೀಕ್ಷೆ ಬರೆಯಬೇಕಿದೆ. ಅವರ ಭವಿಷ್ಯದ ಆಯ್ಕೆ ದೃಷ್ಟಿಯಿಂದ ಪರೀಕ್ಷೆ ನಡೆಯುವುದು ಮುಖ್ಯವಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಎರಡು ದಿನಗಳ ಅವಧಿಯಲ್ಲಿ ಪರೀಕ್ಷೆಗಳು ನಡೆಯಲಿದ್ದು, ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಸರಕಾರದ ಪರ ಹಾಜರಾದ ಅಡ್ವಕೇಟ್ ಜನರಲ್ ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿದ್ದಾರೆ. ನಾವು ಒಂದು ತರಗತಿಯಲ್ಲಿ ಕೇವಲ 12 ವಿದ್ಯಾರ್ಥಿಗಳನ್ನು ಹೊಂದಿದ್ದೇವೆ. ಒಬ್ಬ ವಿದ್ಯಾರ್ಥಿಗೆ ಒಂದು ಮೇಜು. ಸಾಮಾಜಿಕ ಅಂತರವಿರಲಿದ್ದು, ಆರೋಗ್ಯ ತಪಾಸಣೆಗಾಗಿ 2 ಅರೆವೈದ್ಯಕೀಯ ಸಿಬ್ಬಂದಿ ಇರುತ್ತಾರೆ ಎಂದು ಎಜಿ ಹೇಳಿದರು.

ಅರ್ಜಿದಾರರು ತಮ್ಮ ಮನವಿಯಲ್ಲಿ, ಕೆಲವು ಸಂಸ್ಥೆಗಳಲ್ಲಿ ಆನ್‌ಲೈನ್ ತರಗತಿಗಳನ್ನು ಸರಿಯಾಗಿ ನಡೆಸಲಾಗಿಲ್ಲ ಮತ್ತು ಅನೇಕ ಮಕ್ಕಳು ಆನ್‌ಲೈನ್ ತರಗತಿಗಳ ಮೂಲಕ ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಿದೆ ಎಂದು ವಾದಿಸಿದ್ದರು.

ಕೊರೊನಾ ಹಿನ್ನೆಲೆಯಲ್ಲಿ 6 ದಿನಗಳ ಬದಲಿಗೆ ಈ ವರ್ಷ 2 ದಿನಗಳ ಪರೀಕ್ಷೆ ನಡೆಯುತ್ತಿದೆ. ಜುಲೈ 19 ರಂದು ಸಮಾಜ ವಿಜ್ಞಾನ, ವಿಜ್ಞಾನ ಹಾಗೂ ಗಣಿತ ಪರೀಕ್ಷೆ ಹಾಗೂ 22 ರಂದು ಭಾಷಾ ಪರೀಕ್ಷೆಗಳು ನಡೆಯಲಿವೆ.

Leave A Reply

Your email address will not be published.