ದೇಶದಲ್ಲಿ ಆತ್ಮಾಹುತಿ ದಾಳಿ ನಡೆಸಲು ಸಂಚು ಹೂಡಿದ್ದ ಇಬ್ಬರು ಅಲ್ ಖೈದಾ ಉಗ್ರರ ಬಂಧನ

ದೇಶದಲ್ಲಿ ಆತ್ಮಾಹುತಿ ದಾಳಿ ಮೂಲಕ ವಿಧ್ವಂಸಕ ಕೃತ್ಯ ಎಸಗಲು ಹೂಡಿದ್ದ ಉಗ್ರರ ಸಂಚನ್ನು ಎಟಿಎಸ್ ಭೇದಿಸಿದೆ. ಉತ್ತರಪ್ರದೇಶದಲ್ಲಿ ಇಬ್ಬರು ಅಲ್ ಖೈದಾ ಶಂಕಿತ ಉಗ್ರರನ್ನು ಭಯೋತ್ಪಾದನಾ ನಿಗ್ರಹ ದಳ ಪೋಲೀಸರು ಬಂಧಿಸಿದ್ದಾರೆ.

ಮಿನಾಜ್ ಅಹ್ಮದ್ ಹಾಗೂ ನಾಸಿರುದ್ದೀನ್ ಅಕಾ ಮುಶೀರ್ ಬಂಧಿತರಾಗಿದ್ದು, ಇಬ್ಬರೂ ಕಕೋರಿ ಪ್ರದೇಶದ ನಿವಾಸಿಗಳಾಗಿದ್ದಾರೆ.

ಲಖನೌದಲ್ಲಿರುವ ಕಾಕೋರಿಯ ರಿಂಗ್ ರಸ್ತೆಯ ಬಳಿಯ ದುಬಗ್ಗ ಪ್ರದೇಶದಲ್ಲಿನ ಮನೆಯೊಂದರ ಮೇಲೆ ದಾಳಿ ನಡೆಸಿದ ಎಟಿಎಸ್ ಅಧಿಕಾರಿಗಳು ಸರಣಿ ಆತ್ಮಹತ್ಯಾ ದಾಳಿಗೆ ಮುಂದಾಗಿದ್ದ ಉಗ್ರಪಡೆಯ ಜಾಲವನ್ನು ಭೇದಿಸಿದ್ದಾರೆ. ಹಾಗೆಯೇ ಸಜೀವ ಬಾಂಬ್, ಶಸ್ತ್ರಾಸ್ತ್ರ ಸೇರಿದಂತೆ ಇಬ್ಬರು ಶಂಕಿತ ಉಗ್ರರನ್ನು ವಶಕ್ಕೆ ಪಡೆದಿದ್ದಾರೆ.

ಇಬ್ಬರಿಗೂ ಪಾಕಿಸ್ತಾನ, ಅಫ್ಘಾನಿಸ್ತಾನದ ಉಗ್ರರ ನಂಟಿರುವ ಸಾಧ್ಯತೆ ಇದೆ. ಕಾರ್ಯಾಚರಣೆ ವೇಳೆ ನಾಲ್ವರು ಪರಾರಿಯಾಗಿದ್ದು ಅವರನ್ನು ಹಿಡಿಯಲು ಬಲೆ ಬೀಸಲಾಗಿದೆ ಎಂದು ಎಡಿಜಿಪಿ ಪ್ರಶಾಂತ್ ಕುಮಾರ್ ಹೇಳಿದ್ದಾರೆ.

ಅಲ್‍ಖೈದಾ ಉಗ್ರರ ಜೊತೆಗಿನ ನಂಟಿನ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದಷ್ಟೇ 11 ಸರ್ಕಾರಿ ಅಧಿಕಾರಿಗಳನ್ನು ಜಮ್ಮು ಕಾಶ್ಮೀರ ಸರ್ಕಾರ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಮತ್ತಷ್ಟು ರೈಡ್ ಮಾಡಿರುವ ಎಟಿಎಸ್ ಅಲ್‍ಖೈದಾ ಸಂಪರ್ಕ ಹೊಂದಿದ್ದ ಇಬ್ಬರನ್ನು ಬೇಟೆಯಾಡಿದೆ.

Leave A Reply

Your email address will not be published.