ಸಿಎಂ ಯಡಿಯೂರಪ್ಪಗೆ ರಿಲೀಫ್ |ಯಡಿಯೂರಪ್ಪ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಸಲ್ಲಿಸಿದ್ದ ದೂರು ವಜಾ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಸಲ್ಲಿಸಲಾಗಿದ್ದ ಖಾಸಗಿ ದೂರನ್ನು ವಜಾಗೊಳಿಸಿ ಕೋರ್ಟ್ ಆದೇಶ ಹೊರಡಿಸಿದೆ.

ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಸಲ್ಲಿಸಿದ್ದ ದೂರನ್ನು ವಜಾಗೊಳಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ನೀಡಿದೆ. ಪ್ರಾಸಿಕ್ಯೂಷನ್​ಗೆ ಗವರ್ನರ್ ಪೂರ್ವಾನುಮತಿ ನೀಡದ ಹಿನ್ನೆಲೆಯಲ್ಲಿ ಖಾಸಗಿ ದೂರನ್ನು ವಜಾಗೊಳಿಸಿ ಕೋರ್ಟ್ ಆದೇಶ ಹೊರಡಿಸಿದೆ ಎನ್ನಲಾಗಿದೆ.

ಸಿಎಂ ಬಿಎಸ್ ವೈ ಮತ್ತು ಇತರರು ನಡೆಸಿದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ಆದೇಶ ಕೋರಿ ಆಂಟಿ-ಗ್ರಾಫ್ಟ್ ಮತ್ತು ಎನ್ವಿರಾನ್ಮೆಂಟಲ್ ಫೋರಂ ಅಧ್ಯಕ್ಷ ಟಿ.ಜೆ. ಅಬ್ರಹಾಂ ಅವರು ದೂರು ದಾಖಲಿಸಿದ್ದರು. ಸಿಎಂ ಯಡಿಯೂರಪ್ಪ, ಅವರ ಪುತ್ರ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ್ ಮರಡಿ, ಸಂಬಂಧಿ ವಿರೂಪಾಕ್ಷಪ್ಪ ಯಮಕನಮರಡಿ, ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿ ಅವರ ಪುತ್ರ ಸಂಜಯ್ ಶ್ರೀ ಮತ್ತು ಇತರರ ಅವರ ವಿರುದ್ಧ ದೂರು ದಾಖಲಿಸಲಾಗಿತ್ತು.

ಸಿಎಂ ಅವರ ಕುಟುಂಬವು ಕೋಟ್ಯಂತರ ರೂಪಾಯಿಗಳ ಅಕ್ರಮ ವರ್ಗಾವಣೆ ಮಾಡಿಕೊಂಡಿದ್ದು, ಅಕ್ರಮದ ಆದಾಯವನ್ನು ಕೊಲ್ಕತ್ತಾ ಮೂಲದ ಕೆಲವು ಶೆಲ್ ಕಂಪನಿಗಳ ಮೂಲಕ ಕೋಲ್ಕತ್ತಾಗೆ ಅವರ ಕುಟುಂಬ ಸದಸ್ಯರ ಒಡೆತನದ ಕಂಪನಿಗಳಿಗೆ ರವಾನಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದರು. ವಾದಗಳನ್ನು ಆಲಿಸಿದ ನಂತರ ಆದೇಶಗಳನ್ನು ಕಾಯ್ದಿರಿಸಿದ್ದ ನ್ಯಾಯಾಲಯ ಗುರುವಾರ ಅರ್ಜಿಯನ್ನು ವಜಾಗೊಳಿಸಿದೆ.

Leave A Reply

Your email address will not be published.