ಐಎಂಎ ಬಹುಕೋಟಿ ಹಗರಣ ಮಾಜಿ ಸಚಿವ ರೋಷನ್ ಬೇಗ್ ಆಸ್ತಿ ಜಪ್ತಿ

ಹೈಕೋರ್ಟ್ ಸೂಚನೆಯಂತೆ ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಆರೋಪಿ ಮಾಜಿ ಸಚಿವ ರೋಷನ್ ಬೇಗ್ ಅವರ ಆಸ್ತಿಯನ್ನು ರಾಜ್ಯ ಸರಕಾರ ಬುಧವಾರ ಜಪ್ತಿ ಮಾಡಿದೆ.

ರೋಷನ್ ಬೇಗ್‍ಗೆ ಸೇರಿದ ಸ್ಥಿರಾಸ್ತಿ, ಬ್ಯಾಂಕ್ ಅಕೌಂಟ್ ಜಪ್ತಿ ಮಾಡಲಾಗಿದ್ದು, ಎಷ್ಟು ಪ್ರಮಾಣದ ಆಸ್ತಿಯನ್ನು ಸರಕಾರ ಜಪ್ತಿ ಮಾಡಿದೆ ಎನ್ನುವುದು ತಿಳಿಯಬೇಕಿದೆ.ರೋಷನ್ ಬೇಗ್ ಆಸ್ತಿ ಜಪ್ತಿಗೆ ಹೈಕೋರ್ಟ್ ನ್ಯಾಯಪೀಠ ಸಾಕಷ್ಟು ಬಾರಿ ಆದೇಶ ನೀಡಿದ್ದರೂ ಸರಕಾರ ಆದೇಶವನ್ನು ಪಾಲಿಸಿರಲಿಲ್ಲ.

ಹೀಗಾಗಿ, ನ್ಯಾಯಪೀಠ ಕೆಲ ದಿನಗಳ ಹಿಂದೆ ಸರಕಾರವು ಯಾಕೋ ಐಎಂಎ ಬಗ್ಗೆ ಮೃದು ಧೋರಣೆ ತಳೆದಿದೆ. ಅಲ್ಲದೇ, ಸಕ್ಷಮ ಪ್ರಾಧಿಕಾರದೊಂದಿಗೆ ಸಹಕರಿಸುತ್ತಿಲ್ಲ ಎಂದು ರಾಜ್ಯ ಸರಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿತ್ತು.

ಐಎಂಎಯಿಂದ ಸರಕಾರಿ ಶಾಲೆಗೆ ನೀಡಿರುವ 12.58 ಕೋಟಿ ದೇಣಿಗೆ ಹಿಂತಿರುಗಿಸುವ ಬಗ್ಗೆ ಶೀಘ್ರದಲ್ಲೇ ಸರಕಾರ ತನ್ನ ನಿಲುವು ಏನು ಎಂಬುದನ್ನು ತಿಳಿಸಬೇಕು ಎಂದು ನ್ಯಾಯಲಯ ಸೂಚಿಸಿತ್ತು.

ಜು.19ರಂದು ಐಎಂಎ ಪ್ರಕರಣದ ವಿಚಾರಣೆ ಮತ್ತೆ ನ್ಯಾಯಪೀಠದ ಎದುರು ಬರಲಿದೆ. ಇದರ ಬೆನ್ನಲ್ಲೇ ರಾಜ್ಯ ಸರಕಾರ ಬೇಗ್ ಅವರ ಆಸ್ತಿಯನ್ನು ಜಪ್ತಿ ಮಾಡಿದೆ.

ಐಎಂಎ ಸಂಸ್ಥಾಪಕ ಹಾಗೂ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಅಲಿಖಾನ್‍ನಿಂದ ರೋಷನ್ ಬೇಗ್ ಅಕ್ರಮವಾಗಿ ಹಣ ಪಡೆದಿದ್ದಾರೆ ಎಂಬ ಆರೋಪದಡಿ 2020ರ ನವೆಂಬರ್ 22ರಂದು ರೋಷನ್ ಬೇಗ್ ಅವರನ್ನು ಸಿಬಿಐ ಬಂಧಿಸಿತ್ತು. ಆ ನಂತರ ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು.

Leave A Reply

Your email address will not be published.