ಪರಿಸರ ಹೋರಾಟಗಾರ್ತಿಯಿಂದ ಕೇಂದ್ರ ಸಚಿವರ ತನಕ ಏರಿದ ಚಾರ್ವಾಕದ ಶೋಭಾ ಕರಂದ್ಲಾಜೆ

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆ ಕಡಬ ತಾಲೂಕು ಚಾರ್ವಾಕ ಗ್ರಾಮದ ಶೋಭಾ ಕರಂದ್ಲಾಜೆ ಅವರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸೇರಿದ್ದಾರೆ. ತಾನೆಷ್ಟೇ ದೊಡ್ಡ ಸ್ಥಾನಕ್ಕೆ ಏರಿದರೂ ಹುಟ್ಟೂರಿನ ಅಭಿಮಾನ ಹಾಗೂ ಸಂಪರ್ಕವನ್ನು ಇಂದಿಗೂ ಇರಿಸಿಕೊಂಡಿದ್ದಾರೆ.

ಪ್ರತೀ ಬಾರಿಯೂ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವ ಮುನ್ನ ತನ್ನ ಊರಿನ ದೇವಸ್ಥಾನಗಳಿಗೆ ಬೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಮುಂದಿನ ಕಾರ್ಯ ನಡೆಸುವುದು ವಾಡಿಕೆ ಮಾಡಿಕೊಂಡವರು.

ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೂ ಸಕ್ರಿಯವಾಗಿ ಗುರುತಿಸಿಕೊಂಡ ಶೋಭಾ ಕರಂದ್ಲಾಜೆ ಸಂಸದೆ, ಮಾಜಿ ಸಚಿವೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹೀಗೆ ವಿವಿಧ ಸ್ತರಗಳಲ್ಲಿ ಬಿಜೆಪಿಯ ಪ್ರಮುಖರಾಗಿ ಗುರುತಿಸಿಕೊಂಡವರು.

ರಾಜಕೀಯ ಹಾಗೂ ಸಾಮಾಜಿಕವಾಗಿ ತಮ್ಮ ಕಟ್ಟಾ ಹಿಂದುತ್ವದ ವಿಚಾರಧಾರೆಗಳಿಂದ, ಹರಿತವಾದ ಹೇಳಿಕೆಗಳಿಗೆ ಹೆಸರುವಾಸಿ ಹಲವು ಬಾರಿ ವಿವಾದಕ್ಕೂ ಈಡಾಗಿದ್ದರು.

ಪರಿಸರ ಹೋರಾಟಗಾರ್ತಿಯಾಗಿ ಮೊದಲಿಗೆ ಗುರುತಿಸಿಕೊಂಡಿದ್ದ ಶೋಭಾ ಕುಮಾರಧಾರಾ ನದಿಗೆ ಉರುಂಬಿಯಲ್ಲಿ ಡ್ಯಾಂ ನಿರ್ಮಿಸಲು ವಿರೋಧ ವ್ಯಕ್ತಪಡಿಸಿದ್ದರು. ಇದು ಜನರ ಸಂಘಟನೆಗೂ ಪೂರಕವಾಗಿತ್ತು.

ಕರಾವಳಿಯಲ್ಲಿ ಶಾಂತಿ ಕದಡಿದ ಆರ್ ಎಸ್ ಎಸ್ ಕಾರ್ಯಕರ್ತರ ಹತ್ಯೆಯ ಸಂದರ್ಭದಲ್ಲೂ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಿ, ಕರ್ನಾಟಕದ ದಿಟ್ಟ ಮಹಿಳಾ ರಾಜಕಾರಣಿ ಎಂಬ ಖ್ಯಾತಿಗೆ ಪಾತ್ರರಾದವರು.

ರಾಜಕೀಯ ಪ್ರವೇಶ ನಂತರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರನ್ನು ರಾಜಕೀಯ ಗುರುವಾಗಿ ಪರಿಗಣಿಸಿ ಅವರ ರಾಜಕೀಯ ಏಳು ಬೀಳುಗಳಲ್ಲಿ ಜೊತೆಯಾಗಿದ್ದವರು.ರಾಜ್ಯ ಇಂಧನ ಸಚಿವರಾಗಿ ಅತ್ಯುತ್ತಮ ಕಾರ್ಯನಿರ್ವಹಣೆ ಮಾಡುವ ಮೂಲಕ ಗುರುತಿಸಿಕೊಂಡವರು.

1966, ಅಕ್ಟೋಬರ್ 23 ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಚಾರ್ವಾಕ ಎಂಬ ಪುಟ್ಟ ಗ್ರಾಮದಲ್ಲಿ ಜನನ.
ತಂದೆ ಮೋನಪ್ಪ ಗೌಡ, ತಾಯಿ ಪೂವಕ್ಕ.
ಎಳೆ ವಯಸ್ಸಿನಲ್ಲಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಒಡನಾಟ. ಪೂರ್ಣಾವಧಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಸೋಶಿಯಲ್ ವರ್ಕ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಮೈಸೂರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಕುಮಾರಧಾರ ನದಿಗೆ ಉರುಂಬಿಯಲ್ಲಿ ಅಣೆಕಟ್ಟು ಕಟ್ಟುವುದನ್ನು ವಿರೋಧಿಸಿ, ಪಶ್ಚಿಮ ಘಟ್ಟ ಉಳಿಸಿ ಅಭಿಯಾನದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದ್ದರು. ಪರಿಸರಕ್ಕೆ ಹಾನಿಯಾಗುವಂಥ ಯೋಜನೆಗಳನ್ನು ವಿರೋಧಿಸಿ ಹೋರಾಟ. ಕಾಲೇಜು ಓದುವ ಸಮಯದಲ್ಲೇ ಹಲವು ಸಮಾಜ ಸುಧಾರಣಾ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ.

1994 ರಲ್ಲಿ ಬಂಟ್ವಾಳ ವಿಧಾನಸಭೆಗೆ ಸ್ಪರ್ಧಿಸಿದ್ದ ಶಕುಂತಲಾ ಶೆಟ್ಟಿಯವರ ಒಡನಾಟದಿಂದ ರಾಜಕೀಯ ಪ್ರವೇಶ.
1997 ರಲ್ಲಿ ಉಡುಪಿ ಜಿಲ್ಲೆ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆ.
1997 ರಲ್ಲಿ ಬೆಂಗಳೂರು ರಾಜಕೀಯ ರಂಗ ಪ್ರವೇಶ.
1999 ರಲ್ಲಿ ಬಿ.ಎಸ್.ಯಡಿಯೂರಪ್ಪನವರ ಸಂಕಲ್ಪ ರಥಯಾತ್ರೆಯಲ್ಲಿ ಭಾಗಿ. ನಂತರ ಹಲವು ಹೋರಾಟ, ಪಾದಯಾತ್ರೆ, ಸತ್ಯಾಗ್ರಹ ನಡೆಸಿದ ಅನುಭವ.
2000 ನೇ ಇಸವಿಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆ.
2004 ರಲ್ಲಿ ವಿಧಾನ ಪರಿಷತ್ ಸದಸ್ಯೆಯಾಗಿ ಆಯ್ಕೆ.
2008 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕಿಯಾಗಿ ಆಯ್ಕೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಕಾರ್ಯನಿರ್ವಹಣೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕೆಲಸ ನಿರ್ವಹಿಸಿದ ಅನುಭವ, ದಸರಾ ಮಹೋತ್ಸವ ನಿಭಾಯಿಸಿದ ಅನುಭವ.
2009 ರಲ್ಲಿ ಕೆಲವು ರಾಜಕೀಯ ಭಿನ್ನಾಭಿಪ್ರಾಯಗಳಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ.
2010 ರಲ್ಲಿ ಕರ್ನಾಟಕ ಸರ್ಕಾರದಲ್ಲಿ ಇಂಧನ ಸಚಿವೆಯಾಗಿ ಅಧಿಕಾರ ಸ್ವೀಕಾರ.
2012 ರಲ್ಲಿ ಬಿಜೆಪಿಯ ಕೆಲವು ನಾಯಕರೊಂದಿಗೆ ಭಿನ್ನಾಭಿಪ್ರಾಯ ಮೂಡಿ, ಬಿ ಎಸ್ ಯಡಿಯೂರಪ್ಪನವರು ಸ್ಥಾಪಿಸಿದ ಕರ್ನಾಟಕ ಜನತಾ ಪಕ್ಷ(ಕೆಜೆಪಿ)ಕ್ಕೆ ಸೇರ್ಪಡೆ.
2013 ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಬಿಜೆಪಿಯ ಸುರೇಶ್ ಕುಮಾರ್ ವಿರುದ್ಧ ಸೋಲು.
2013 ರಲ್ಲಿ ಬಿಜೆಪಿಯೊಂದಿಗೆ ಕೆಜೆಪಿ ವಿಲೀನ.
2014 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಗರಿಷ್ಠ ಮತಗಳ ಅಂತರದಿಂದ ಗೆಲುವು.
2021ರಲ್ಲಿ ಮೋದಿ ಸರ್ಕಾರ 2.0ರಲ್ಲಿ ಕೇಂದ್ರ ಸಚಿವೆಯಾಗಿ ಪ್ರಮಾಣ ವಚನ ಸ್ವೀಕಾರ.

Leave A Reply

Your email address will not be published.