ನಾಳೆ ದಕ್ಷಿಣಕನ್ನಡದಲ್ಲಿ ಖಾಸಗಿ ಬಸ್ಸುಗಳು ರಸ್ತೆಗೆ | ರೈ..ರೈಟ್ ಮತ್ತು ಥರಾವರಿ ವಿಷಲ್ ಸದ್ದುಗಳಿಂದ ಪೇಟೆ ಪಟ್ಟಣಗಳಿಗೆ ಬರಲಿದೆ ಒಂದು ಹೊಸ ಜೀವಂತಿಕೆ !

ನಾಳೆಯಿಂದ ದಕ್ಷಿಣಕನ್ನಡದ ಮತ್ತು ಸುತ್ತಲಿನ ಜಿಲ್ಲೆಗಳಲ್ಲಿ ಖಾಸಗಿ ಬಸ್ಸುಗಳ ಭೋರಿಡುತ್ತ ಸಾಗುವ ಸದ್ದು, ಪ್ರತಿ ಸ್ಟಾಪ್ ಗೊಮ್ಮೆ ಕೇಳಿ ಬರುವ ಹೋಲ್ಡ್ ಆನ್, ರೈ ರೈಟ್ ಬೊಬ್ಬೆಯ ಜತೆಗೆ ಕಿವಿ ಸೀಳಿ ಹಾಕುವ ಥರಾವರಿ ವಿಷಲ್ ಮ್ಯೂಸಿಕ್ ಮತ್ತೆ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಉಡುಪಿಯಾದ್ಯಂತ ಮರುಕಳಿಸಲಿದೆ.

ಖಾಸಗಿ ಬಸ್ಸುಗಳು ಜನರಲ್ ಸರ್ವಿಸ್ ಮತ್ತು ಆಯಿಲ್ ಸರ್ವಿಸ್ ಮಾಡಿಕೊಂಡು ಈಗಾಗಲೇ ರೆಡಿಯಾಗಿ ನಿಂತಿದ್ದು, ನಾಳೆ ಒಂದು ಹಿಡಿ ಊದುಬತ್ತಿ ಹೊತ್ತಿಸಿಕೊಂಡು ಬೀದಿಗೆ ಬಂದು ನಿಂತವೆಂದರೆ ಒಂದು ಹೊಸ ಚೈತನ್ಯ ಇಡೀ ಜಿಲ್ಲೆಗೆ ವ್ಯಾಪಿಸಲಿದ್ದು, ಮತ್ತೆ ದಕ್ಷಿಣಕನ್ನಡದ ಪೇಟೆ ಪಟ್ಟಣಗಳು ಹೊಸ ಜೀವಂತಿಕೆಯೊಂದಿಗೆ ಕಂಗೊಳಿಸಲಿವೆ.

ಯೆಸ್, ನಾಳೆ ಜುಲೈ 1 ರಂದು ಖಾಸಗಿ ಬಸ್ ಗಳ ಓಡಾಟ ದಕ್ಷಿಣಕನ್ನಡದಲ್ಲಿ ಪ್ರಾರಂಭವಾಗಲಿದೆ. ಎಲ್ಲಾ ಬಸ್ಸುಗಳು ಮಧ್ಯಾಹ್ನ 2 ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ. ಈ ಬಗ್ಗೆ  ದಕ್ಷಿಣಕನ್ನಡ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್ರಾಜ ಆಳ್ವ ಅವರು ಹೇಳಿಕೆ ನೀಡಿದ್ದಾರೆ.

ಆದರೆ ಖಾಸಗಿ ಬಸ್ಸುಗಳು ಬರುತ್ತಿರುವುದು ಒಂದು ಥರದ ಖುಷಿಯಾದರೆ, ಬಸ್ಸುಗಳ ದರದಲ್ಲಿ ಭಾರಿ ಏರಿಕೆ ಕಂಡು ಬರಲಿದೆ. ಇಪ್ಪತ್ತು ಪರ್ಸೆಂಟ್ ದರ ಏರಿಕೆಯಿಂದ ಬಸ್ಸುಗಳು ಕಾರ್ಯಾಚರಿಸಲಿವೆ. ಈ ಪ್ರಕಾರ, ಮಂಗಳೂರಿನಿಂದ ಮಣಿಪಾಲಕ್ಕೆ ತೆರಳುವ ಬಸ್ಸುಗಳಿಗೆ 100 ರೂಪಾಯಿ ದರ ಇರಲಿದೆ. ಮಂಗಳೂರಿನಿಂದ ಉಡುಪಿಗೆ 95 ರೂಪಾಯಿ ದರ ನಿಗದಿಯಾಗಿದೆ.

ತೀವ್ರವಾಗಿ ಏರಿಕೆಯಾದ ಡೀಸೆಲ್ ಬೆಲೆ ಮತ್ತು ಕೋವಿದ ನಿಯಮಾವಳಿಗಳ ಪ್ರಕಾರ ಬಸ್ಸಿನಲ್ಲಿ 50 ಪರ್ಸೆಂಟ್ ನಷ್ಟು ಜನರನ್ನು ಮಾತ್ರ ಹಾಕಿಕೊಂಡು ಹೋಗಲು ಅವಕಾಶವಿರುವ ಕಾರಣ ಇದರ ಅನಿವಾರ್ಯ ಎಂದಿದೆ ಖಾಸಗಿ ಬಸ್ ಮಾಲಕರ ಸಂಘ. ಅಲ್ಲದೆ, ಮಂಗಳೂರಿನಿಂದ ಕುಂದಾಪುರ ಕ್ಕೆ ಹೋಗಿ ಬರುವ ಬಸ್ಸಿಗೆ ಟೂಲ್ ಮೊತ್ತವೇ 1000 ರೂಪಾಯಿಗಳಷ್ಟಾಗುತ್ತವೆ. ಇದೆಲ್ಲವನ್ನು ಭರಿಸಲು ದರ ಏರಿಕೆ ಅನಿವಾರ್ಯ ಎನ್ನಲಾಗಿದೆ.

ಈ ನಡುವೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಟಿಕೆಟ್ ದರ ಏರಿಸದಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ನಾಯಕರು ಬಸ್ಸು ಮಾಲಕ ಸಂಘದ ಅಧ್ಯಕ್ಷರಿಗೆ ಇಂದು ಮನವಿಯನ್ನು ಸಲ್ಲಿಸಿದ್ದಾರೆ.

Leave A Reply

Your email address will not be published.