ಕನ್ನಡಿಗ ಎಂಬ ಕಾರಣಕ್ಕೆ ನಟ ಪ್ರಕಾಶ್ ರೈಗೆ ತೆಲುಗು ಸಿನಿ ಕಲಾವಿದರ ಸಂಘಕ್ಕೆ ಸ್ಪರ್ಧಿಸಲು ವಿರೋಧ !

ಹೈದರಾಬಾದ್: ತೆಲುಗಿನ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷಗಿರಿಗೆ ಸ್ಪರ್ಧಿಸುತ್ತಿರುವ ನಮ್ಮ ಪ್ರಕಾಶ್ ರೈ, ಅವರ ಪ್ರಕಾಶ್ ರಾಜ್ ಅಲ್ಲೀಗ ತೀವ್ರ ಮುಜುಗರ ಎದುರಿಸುತ್ತಿದ್ದಾರೆ. ಪ್ರಮುಖವಾಗಿ, ಅವರು ಕನ್ನಡದವರಾದ್ದರಿಂದ ಅವರನ್ನು ಅಲ್ಲಿ ಹೊರಗಿನವರು ಎಂದು ನೋಡಲಾಗುತ್ತಿದೆ. ಅಷ್ಟೇ ಅಲ್ಲ, ಕಲಾವಿದರ ಸಂಘದ ಅಧ್ಯಕ್ಷಪಟ್ಟವನ್ನು ಹೊರಗಿನವರಿಗೆ ಬಿಟ್ಟುಕೊಡಬಾರದು ಎಂದು ಕಾರಣಕ್ಕೆ, ಅವರನ್ನು ಸೋಲಿಸುವುದಕ್ಕೆ ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ನಟ ಪ್ರಕಾಶ್ ರಾಜ್ ವಿರುದ್ಧ ಬಹಿರಂಗವಾಗಿ ಕ್ಯಾಂಪೇನ್ ನಡೆಯುತ್ತಿದ್ದು ಈ ವಿಷಯ ಪ್ರಕಾಶ್ ರೈಗೆ ಬೇಸರ ತರಿಸಿದೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ವಿಶಾಲ್ ಎಂಬ ತೆಲುಗು ಮೂಲದ ನಟನೊಬ್ಬ ತಮಿಳುನಾಡಿನ ಕಲಾವಿದರ ಸಂಘದ ಅಧ್ಯಕ್ಷರಾಗಬೇಕಾದರೆ, ತಾವು ತೆಲುಗು ಕಲಾವಿದರ ಸಂಘದ ಅಧ್ಯಕ್ಷರಾಗುವುದಕ್ಕೆ ಏಕೆ ಸಾಧ್ಯವಿಲ್ಲ’ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ತಮ್ಮನ್ನು ಹೊರಗಿನವರು ಎಂದು ಹೇಳುವವರ ಸಣ್ಣತನ ತೋರಿಸುತ್ತದೆ. ನಾನು ತೆಲಂಗಾಣದ ಒಂದು ಹಳ್ಳಿಯನ್ನು ದತ್ತು ತೆಗೆದುಕೊಂಡಾಗ, ಯಾರೂ ನನ್ನನ್ನು ಹೊರಗಿನವನು ಎಂದಿಲ್ಲ. ನನ್ನ ಸಹಾಯಕರಿಗೆ ಹೈದರಾಬಾದ್‌ನಲ್ಲಿ ಮನೆ ಕೊಡಿಸಿದಾಗ ಹೊರಗಿನವ ಎಂದು ಬೆಟ್ಟು ಮಾಡಿ ತೋರಿಸಲಿಲ್ಲ. ನನ್ನ ಮಗ ಹೈದರಾಬಾದ್ ನಲ್ಲಿ ಶಾಲೆಗೆ ಹೋಗುತ್ತಾನೆ. ನನ್ನ ಆಧಾರ ಕಾರ್ಡ್‌ನಲ್ಲಿ ಇಲ್ಲಿನ ವಿಳಾಸವಿದೆ. ‘ಅಂತಪುರಂ’ ಎಂಬ ತೆಲುಗು ಚಿತ್ರದಲ್ಲಿನ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಬಂದಿದೆ. ತೆಲುಗು ಚಿತ್ರಗಳಲ್ಲಿನ ಅಭಿನಯಕ್ಕಾಗಿ ನನಗೆ ಒಂಬತ್ತು ನಂದಿ ಪ್ರಶಸ್ತಿಗಳು ಸಿಕ್ಕಿವೆ. ಇವೆಲ್ಲ ಆಗುವಾಗ ಬರದಿದ್ದ ಹೊರಗಿನವ ಎಂಬ ಚರ್ಚೆ, ಈಗ್ಯಾಕೆ? ನನ್ನನ್ನು ಹೊರಗಿನವನು ಎಂದು ಹೇಳುವವರ ಸಂಕುಚಿತ ಮನೋಭಾವ ತೋರಿಸುತ್ತದೆ’ ಎಂದು ಹೇಳಿದ್ದಾರೆ.

ಇಷ್ಟಕ್ಕೂ ಪ್ರಕಾಶ್ ರೈ ಅವರಿಗೇಕೆ ತೆಲುಗು ಚಲನಚಿತ್ರ ಕಲಾವಿದರ ಸಂಘದ ಜವಾಬ್ದಾರಿ ಎಂಬ ಪ್ರಶ್ನೆ ಬರಬಹುದು. ಈ ಕುರಿತು ಮಾತನಾಡಿರುವ ಅವರು, ‘ಇದು ನಿನ್ನೆ-ಮೊನ್ನೆ ತೆಗೆದುಕೊಂಡ ನಿರ್ಧಾರವಲ್ಲ. ಒಂದು ವರ್ಷದಿಂದ ಅಳೆದು ತೂಗಿ ತೆಗೆದುಕೊಂಡ ನಿರ್ಧಾರ. ನಾನು ಚಿತ್ರರಂಗದಲ್ಲಿ ಮೂರು ದಶಕಗಳಿಂದ ಇದ್ದೇನೆ. ಚಿತ್ರರಂಗ ನನಗೆ ಎಲ್ಲವನ್ನೂ ಕೊಟ್ಟಿದೆ. ಆದರೆ, ಇತ್ತೀಚಿನ ಬೆಳವಣಿಗೆಗಳು ನನಗೆ ಈ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತು. ನನಗೆ ಸುಮ್ಮನೆ ಮಾತನಾಡುವುದಕ್ಕೆ ಇಷ್ಟವಿಲ್ಲ. ಇಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕೊಡುವುದು ನನ್ನ ಮೊದಲ ಆದ್ಯತೆ. ಒಂದೊಳ್ಳೆಯ ತಂಡ ಕಟ್ಟಿಕೊಂಡಿದ್ದೇನೆ. ಗೆಲ್ಲುವ ವಿಶ್ವಾಸವಿದೆ’ ಎಂದು ಪ್ರಕಾಶ್ ರೈ ಹೇಳಿದ್ದಾರೆ.

ಪ್ರಕಾಶ್ ರಾಜ್ ಹೇಳುವುದರಲ್ಲಿ ಅರ್ಥವಿದೆ. ಹಲವು ಭಾಷೆಗಳಲ್ಲಿ ತೆಲುಗು ಸೇರಿದಂತೆ ಅವರು ಹಲವು ದಶಕಗಳಿಂದ ನಟಿಸಿದ್ದಾರೆ. ಎಲ್ಲ ಭಾಷೆಯ ಅಭಿಮಾನಿಗಳು ಇರುವ ನಟ ಪ್ರಕಾಶ್ ರೈ. ಆದರೆ ಈ ನಟ, ‘ಜಗತ್ತು ಒಳ್ಳೆಯದು’ ಎಂದು ಪರಿಗಣಿಸಿದ್ದ ಸಂಗತಿಗಳನ್ನು ಈ ಹಿಂದೆ ವಿನಾ ಕಾರಣ ಅವರು ವಿರೋಧಿಸಿದ್ದರು. ಈಗ ಕಾಲಚಕ್ರದ ಟೈರ್ ಗಳು ಕೆಲವೇ ಸುತ್ತು ಹೊಡೆದಿವೆ. ಪ್ರಕಾಶ್ ರಾಜ್ ಅಂತಹ ಒಳ್ಳೆಯ ನಟ ತೆಲುಗು ಚಿತ್ರರಂಗದ ಕಲಾವಿದರ ಸಂಘದ ಅಧ್ಯಕ್ಷಗಿರಿಗೆ ಏರಬೇಕು: ಆದ್ರೆ ಆತನ ಈ ಹಿಂದಿನ ರಾಜಕೀಯ ಚಟುವಟಿಕೆ ಮತ್ತು ನೀತಿಯಿಂದಾಗಿ ಆತನಿಗೆ ಕಡು ವಿರೋಧ ಇಂದು ಕಂಡುಬಂದಿದೆ.

Leave A Reply

Your email address will not be published.