ಇಲ್ಲೊಬ್ಬ ಇದ್ದಾನೆ ‘ ಭಯಂಕರ ವಾರಿಯರ್ ‘ | ಮಾಸ್ಕ್ ಇಲ್ಲದೆ ಬ್ಯಾಂಕ್ ಗೆ ಒಳ ನುಗ್ಗಲು ಯತ್ನಿಸಿದ್ದ ಗ್ರಾಹಕನ ಮೇಲೆ ಗುಂಡು ಹಾರಿಸಿದ ಸೆಕ್ಯೂರಿಟಿ ಗಾರ್ಡ್

ಕೊರೋನಾ ವಾರಿಯರ್ಸ್ ಅಂದರೆ ಯೋಧರಿಗೆ ಸಮನಾಗಿರುತ್ತಾರೆ. ಯೋಧ ಹೇಗೆ ಕೆಚ್ಚೆದೆಯಿಂದ ಹೋರಾಡುತ್ತಾನೆಯೋ ಹಾಗೆಯೇ ವಾರಿಯರ್ಸ್ ಕೂಡ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಹಾಗೆ ಇಲ್ಲೊಬ್ಬ ಭಯಂಕರ ವಾರಿಯರ್ ಇದ್ದಾನೆ. ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಆಗಿರುವ ಆತ ಮಾಸ್ಕ್ ಹಾಕದೇ ಬ್ಯಾಂಕ್ ಗೆ ಒಳಪ್ರವೇಶಿಸಲು ನೋಡಿದ ಬ್ಯಾಂಕ್ ಗ್ರಾಹಕನ ಮೇಲೆ ಗುಂಡು ಹಾರಿಸಿದ್ದಾನೆ!

ಹೌದು, ಕೊರೋನಾ ವೈರಸ್ ಕಾರಣ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಕೊರೋನಾ ನಿಯಮ ಉಲ್ಲಂಘಿಸಿದರೆ ಎಚ್ಚರಿಕೆ ಜೊತೆಗೆ ದಂಡ ವಿಧಿಸಲಾಗುತ್ತದೆ. ಆದರೆ ಹೀಗೆ ಮಾಸ್ಕ್ ಧರಿಸಿದೆ ಬ್ಯಾಂಕ್ ಒಳಪ್ರವೇಶಿಸಲು ಯತ್ನಿಸಿದ ಗ್ರಾಹಕನ ಮೇಲೆ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಗ್ರಾಹಕ ರಾಜೇಶ್ ಕುಮಾರ್ ಬರೇಲಿಯಲ್ಲಿರುವ ಬ್ಯಾಂಕ್ ಆಫ್ ಬರೋಡ ಶಾಖೆಗೆ ಆಗಮಿಸಿದ್ದಾನೆ. ಬ್ಯಾಂಕ್‌ನಲ್ಲಿನ ಕೆಲಸಕ್ಕೆ 11:30 ರ ವೇಳೆಗೆ ಆಗಮಿಸಿದ ರಾಜೇಶ್ ಕುಮಾರ್ ಮಾಸ್ಕ್ ಧರಿಸಿರಲಿಲ್ಲ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಮಾಸ್ಕ್ ಧರಿಸಿದೆ ಒಳ ಪ್ರವೇಶಿಸಲು ಸಾಧ್ಯವಿಲ್ಲ ಎಂದಿದ್ದಾನೆ.

ಸೆಕ್ಯೂರಿಟಿ ಗಾರ್ಡ್ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಹಕ ನೇರವಾಗಿ ಬ್ಯಾಂಕ್ ಒಳ ಪ್ರವೇಶಿಸಲು ಯತ್ನಿಸಿದ್ದಾನೆ. ಇದರಿಂದ ಕೆರಳಿದ ಸೆಕ್ಯೂರಿಟಿ ಗಾರ್ಡ್, ಬಂದೂಕಿನಿಂದ ನೇರವಾಗಿ ಗುಂಡು ಹಾರಿದ್ದಾನೆ. ತೀವ್ರವಾಗಿ ಗಾಯಗೊಂಡ ಗ್ರಾಹಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತ ಸೆಕ್ಯೂರಿಟಿ ಗಾರ್ಡ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಬ್ಯಾಂಕ್ ಅಳವಡಿಸಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಹಾಗೂ ಗ್ರಾಹಕನ ನಡುವಿನ ಮಾತುಕತೆ, ಅಲ್ಲಿನ ಪರಿಸ್ಥಿತಿ ಸಿಸಿಟಿವಿ ದೃಶ್ಯದಿಂದ ಬಯಲಾಗಲಿದೆ. ಇದರಿಂದ ತಪ್ಪಿತಸ್ಥರು ಯಾರು ಅನ್ನೋದು ಹೊರಬೀಳಲಿದೆ ಎಂದು ಬರೋಡ ಜಂಕ್ಷನ ಶಾಖೆಯ ಬ್ಯಾಂಕ್ ಮ್ಯಾನೇಜರ್ ಗೀತಾ ಭುಸಾಲ್ ಹೇಳಿದ್ದಾರೆ.

ಈ ರೀತಿ ಬಂದೂಕಿನಿಂದ ಗುಂಡು ಹಾರಿಸಿದ್ದು ಸೆಕ್ಯೂರಿಟಿ ಗಾರ್ಡ್ ನ ಯೋಧನ ಮನಸ್ಸಿನ ಕರ್ತವ್ಯ ಪ್ರಜ್ಞೆಯೋ ಅಥವಾ ಆತನ ಮುಂಗೋಪವೋ ಎಂಬುದು ತಿಳಿಯದಾಗಿದೆ.

Leave A Reply

Your email address will not be published.