ಕುಡಿದ ಅಮಲಿನಲ್ಲಿ ಟಿವಿ ಟವರ್ ಏರಿ ಕುಳಿತ ಯುವಕ

ನವದೆಹಲಿ: ಕುಡಿದ ಅಮಲಿನಲ್ಲಿ 20 ವರ್ಷದ ಯುವಕನೋರ್ವ ಟಿವಿ ಟವರ್ ಏರಿರುವ ಘಟನೆ ದೆಹಲಿಯ ಪುಷ್ಪ ವಿಹಾರ್ ಸೆಕ್ಟರ್-3ರಲ್ಲಿ ನಡೆದಿದೆ.

ಬೆಳಗ್ಗೆ 11.30ಕ್ಕೆ ಯುವಕ ಟಿವಿ ಟವರ್ ಏರಿರುವ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ, ಯುವಕನನ್ನು ಟಿವಿ ಟವರ್‌ನಿಂದ ಕೆಳಗೆ ಇಳಿಯುವಂತೆ ಹೇಳಿದ್ದಾರೆ. ಆದರೆ ಈ ವೇಳೆ ಯುವಕ ಕೆಳಗೆ ಇಳಿಯಲು ನಿರಾಕರಿಸಿದ್ದಾನೆ. ಹೀಗಾಗಿ ಸ್ಥಳಕ್ಕೆ ಅಂಬುಲೆನ್ಸ್ ಹಾಗೂ ಅಗ್ನಿಶಾಮಕ ದಳವನ್ನು ಕರೆಸಲಾಯಿತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.

ನಂತರ ಸ್ಥಳಕ್ಕೆ ಆಗಮಿಸಿದ ಯುವಕನ ಪೋಷಕರು, ಆತನನ್ನು ಮಹೇಶ್ ಯಾದವ್ ಎಂದು ಗುರುತಿಸಿದ್ದು, ಅವರು ಸೈನಿಕ್ ಫಾಮ್ರ್‌ಸ್‌ನ ನಿವಾಸಿಯಾಗಿರುವುದಾಗಿ ತಿಳಿಸಿದ್ದಾರೆ. ಯುವಕನ ತಂದೆ, ಪ್ರತಿ ದಿನ ಮಹೇಶ್ ಯಾದವ್ ಕುಡಿಯುತ್ತಾನೆ,ಅಲ್ಲದೇ ನಿನ್ನೆ ಸಂಜೆ 5 ಗಂಟೆಗೆ ಮನೆಯಿಂದ ಹೋದವನು ಮತ್ತೆ ಹಿಂದಿರುಗಿಲ್ಲ ಎಂದು ಆರೋಪಿಸಿದ್ದಾರೆ.

ಒಂದು ಗಂಟೆಯ ಬಳಿಕ ಮಹೇಶ್ ಯಾದವ್ ತಾನಾಗಿಯೇ ಟಿವಿ ಟವರ್‌ನಿಂದ ಕೆಳಗೆ ಇಳಿದು ಬಂದಿದ್ದಾನೆ. ಇದೀಗ ಆತನನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

ಈತನ ಈ ಹುಚ್ಚಾಟಕ್ಕೆ ಹಲವು ಜನರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಟವರ್ ನ ಮುಂದೆ ಜಮಾಯಿಸಿದ್ದರು. ಕೊನೆಗೆ ತಾನಾಗಿಯೇ ಆತ ಟವರ್ ನಿಂದ ಇಳಿದದ್ದರಿಂದ ಅಲ್ಲಿ ನೆರೆದಿದ್ದ ಜನ ನಿಟ್ಟುಸಿರುಬಿಟ್ಟರು.

Leave A Reply

Your email address will not be published.