ನಿನ್ನೆ ಗಾಯಗೊಂಡು ಪತ್ತೆಯಾಗಿದ್ದ ಕಡವೆ, ಚಿಕಿತ್ಸೆಯ ನಂತರ ಹೃದಯಾಘಾತದಿಂದ ಮೃತ್ಯು

ಧರ್ಮಸ್ಥಳ: ಇಲ್ಲಿಯ ನೇತ್ರಾವತಿ ಬಳಿ ರಸ್ತೆ ಬದಿಯಲ್ಲಿ ಕಡವೆಯೊಂದು ಗಾಯಗೊಂಡ ಸ್ಥಿತಿಯಲ್ಲಿ ಜೂ.17 ರಂದು ಪತ್ತೆಯಾಗಿದ್ದು, ಸ್ಥಳೀಯರು, ಉರಗ ತಜ್ಞ ಸ್ನೇಕ್ ಪ್ರಕಾಶ್ ಹಾಗೂ ಅರಣ್ಯ ಇಲಾಖಾ ಸಿಬ್ಬಂದಿಗಳ ಮುತುವರ್ಜಿಯಿಂದ ಕಡವೆಯ ರಕ್ಷಣೆ ಮಾಡಲಾಗಿತ್ತು.ಆದರೆ ಆ ಕಡವೆ ಈಗ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಯಾವುದೋ ವಾಹನ ಡಿಕ್ಕಿ ಹೊಡೆದು ಗಾಯಗೊಂಡು ರಸ್ತೆ ಬದಿಯಲ್ಲಿ ಹೊರಳಾಡುತ್ತಿದ್ದ ಈ ಹೆಣ್ಣು ಕಡವೆಗೆ ಉಜಿರೆಯ ಇಚ್ಚಿಲ ಪಶು ವೈದ್ಯಾಲಯದಲ್ಲಿ ಸೂಕ್ತ ಚಿಕಿತ್ಸೆ ಕೂಡ ನೀಡಲಾಗಿತ್ತು. ವೈದ್ಯರ ಚಿಕಿತ್ಸೆಯಿಂದ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದ ಈ ಕಡವೆಯನ್ನು ಮತ್ತೆ ಕಾಡಿಗೆ ಬಿಡಲಾಗಿತ್ತು. ಆದರೆ ಸಂಜೆ ವೇಳೆ ಆ ಕಡವೆ ಸಾವನ್ನಪ್ಪಿದೆ.

ಪಶುವೈದ್ಯಾಧಿಕಾರಿ ಡಾ| ಕಾರ್ತಿಕ್ ಪಿ ಯವರ ನೇತೃತ್ವದಲ್ಲಿ ಕಡವೆಯ ಮರಣೋತ್ತರ ಪರೀಕ್ಷೆಯನ್ನು ಉಜಿರೆಯ ಇಚ್ಚಿಲ ಪಶು ವೈದ್ಯಾಲಯದಲ್ಲಿ ನಡೆಸಲಾಯಿತು.

ಕಡವೆಗೆ ವಾಹನ ಅಪಘಾತದಿಂದ ಯಾವುದೇ ಗಂಭೀರ ಗಾಯಗಳಾಗಿಲ್ಲ. ಆದರೆ ಅಪಘಾತಗೊಂಡ ಸಮಯದಲ್ಲಿ ಹಾಗೂ ಅದಕ್ಕೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ತುಂಬಾ ಜನ ಸೇರಿರುವುದರಿಂದ ಭೀತಿಗೊಂಡಿರುವ ಕಡವೆಗೆ ಹೃದಯಾಘಾತವಾಗಿದೆ. ಕಡವೆ ಸೂಕ್ಷ್ಮ ಮನಸ್ಸಿನ ಪ್ರಾಣಿಯಾಗಿದ್ದು, ಜನರ ಗದ್ದಲಕ್ಕೆ ಹೆದರಿ ಅದರ ಮನಸ್ಸಿಗೆ ಘಾಸಿಯಾಗಿರುವ ಕಾರಣ ಹೃದಯಾಘಾತವಾಗಿ ಈ ಸಾವು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷೆಯನ್ನು ನಡೆಸಿದ ಡಾ| ಕಾರ್ತಿಕ್ ಪಿ ಯವರು ಹೇಳಿದ್ದಾರೆ.

Leave A Reply

Your email address will not be published.