ಕಡಬ ತಾ. : ಕೊರೊನಾ ನಿರ್ವಹಣೆಯಲ್ಲಿ ಪಿಡಿಓ,ಅಧಿಕಾರಿಗಳು ಫೈಲ್ | ಕೆಲಸ ಮಾಡಲು ಆಗದಿದ್ದರೆ ರಾಜಿನಾಮೆ ಕೊಟ್ಟು ಹೋಗಿ | ಅಧಿಕಾರಿಗಳ ಚಳಿ ಬಿಡಿಸಿದ ಸಿಇಒ ಡಾ.ಕುಮಾರ್

ಕಡಬ: ಗ್ರಾಮದಲ್ಲಿ ಎಷ್ಟು ಕೊರೋನಾ ಸೋಂಕು ಪೀಡಿತರಿದ್ದಾರೆ? ಎಷ್ಟು ಜನ ಹೋಂ ಐಸೋಲೇಶನ್‌ನಲ್ಲಿದ್ದಾರೆ? ಅವರ ಪ್ರಾಥಮಿಕ ಸಂಪರ್ಕದವರು ಎಷ್ಟು ಜನರಿದ್ದಾರೆ? ಅವರನ್ನು ಸ್ಲಾಬ್ ಟೆಸ್ಟ್ ಮಾಡಲಾಗಿದೆಯೇ? ಕೊರೋನಾ ನಿರ್ವಹಣೆಯ ಬಗ್ಗೆ ಯಾವ
ಆಪ್‌ನಲ್ಲಿ ನೋಂದಾಣಿ ಮಾಡಬೇಕು? ಎಂಬಿತ್ಯಾದಿ ಪ್ರಶ್ನೆಗಳು ಅಲ್ಲದೆ ಸ್ವಚ್ಚ ಭಾರತ ಮತ್ತು ನರೇಗಾ ಯೋಜನೆ, 15ನೇ ಹಣಕಾಸು ಯೋಜನೆಯ ನಿರ್ವಹಣೆ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಕಡಬ ತಾಲೂಕಿನ ಗ್ರಾ.ಪಂ. ಅಭಿವೃದ್ದಿ ಅಧಿಕಾರಿಗಳು ಉತ್ತರಿಸಿದೆ ಇದ್ದಾಗ ಗರಂಗೊಂಡ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ| ಕುಮಾರ್ ಅವರು ಕಡಬ ತಾಲೂಕು ಮಟ್ಟದ ಕೋವಿಡ್ ಸಭೆಯಲ್ಲಿ ಪಿಡಿಒಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಜೂ.18ರಂದು ನಡೆದಿದೆ.

ಸಭೆಯು ಕಡಬ ಅಂಬೇಡ್ಕರ್ ಭವನದಲ್ಲಿ ನಡೆದಿದ್ದು, ಸಭೆಯಲ್ಲಿ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ, ಕಡಬ ತಹಶೀಲ್ದಾರ್ ಅನಂತ ಶಂಕರ್, ತಾಲೂಕು ವೈದ್ಯಾಧಿಕಾರಿ ಡಾ| ದೀಪಕ್ ರೈ, ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್ ಅವರುಗಳು ವೇದಿಕೆಯಲ್ಲಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿಡಿಪಿಒ ಶ್ರೀಲತಾ, ಉಪ ತಹಶೀಲ್ದಾರ್ ಮನೋಹರ್ ಕೆ.ಟಿ. ಉಪಸ್ಥಿತರಿದ್ದರು. ಕಡಬ ತಾ.ಪಂ. ಯೋಜನಾ ನಿರ್ದೇಶಕ ಚೆನ್ನಪ್ಪ ಗೌಡ ಸಹಕರಿಸಿದರು.

ಕೊರೋನಾ ನಿರ್ವಹಣೆಯಲ್ಲಿ ಪಿಡಿಒಗಳು, ಅಧಿಕಾರಿಗಳು ವಿಫಲ-ಜಿ.ಪಂ. ಸಿ.ಇ.ಒ ಗರಂ
ಕೊರೋನಾ ನಿರ್ವಹಣೆಯ ಬಗ್ಗೆ ಅಧಿಕಾರಿಗಳು ಮತ್ತು ಪಿಡಿಒಗಳ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿ.ಇ.ಒ. ಡಾ| ಕುಮಾರ್ ಅವರು ಗ್ರಾಮದಲ್ಲಿರುವ ಕೊರೋನಾ ಸೋಂಕಿತರ ನಿರ್ವಹಣೆ, ಅವರ ಪ್ರಾಥಮಿಕ ಸಂಪರ್ಕದವರ ಮಾಹಿತಿ ಹಾಗೂ ಕೊರೋನಾ ಪರೀಕ್ಷೆಗಳನ್ನು ಮಾಡುವುದು ಮತ್ತು ಅದನ್ನು ಸರಕಾರ ಸಿದ್ದಪಡಿಸಿದ ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಪಿಡಿಒಗಳಿಗೆ ಸಿ.ಇ.ಒ. ಅವರು ಕ್ಲಾಸ್ ತೆಗೆದುಕೊಂಡರು. ಒಬ್ಬರೊಬ್ಬರನ್ನೆ ನಿಲ್ಲಿಸಿ ಕೊರೋನಾ ನಿರ್ವಹಣೆಯ ಬಗ್ಗೆ ಸ್ವಷ್ಟ ಮಾಹಿತಿಯನ್ನು ಕೇಳಿದಾಗ ಉತ್ತರ ನೀಡದೆ ಮೌನಕ್ಕೆ ಶರಣಾದ ಪಿಡಿಒಗಳನ್ನು ಕಂಡು ದಂಗಾದ ಸಿ.ಇ.ಒ ರವರು ಕನಿಷ್ಟ ನಿಮಗೆ ಮಾಹಿತಿ ಇಲ್ಲದಿದ್ದರೆ ಯಾವ ರೀತಿ ಕೆಲಸ ನಿರ್ವಹಿಸುತ್ತಿರಿ, ನಿಮ್ಮಲ್ಲಿ ಕಷ್ಟ ಸುಖ ಮಾತನಾಡಿ ಹೋಗಲು ನಾನು ಬಂದಿಲ್ಲ, ಕೊರೋನಾ ನಿರ್ವಹಣೆಯ ಬಗ್ಗೆ ಸರಿಯಾದ ಮಾಹಿತಿ ನೀಡಿ, ನನಗೆ ಕಾರಣಗಳು ಬೇಡ, ಮೊಬೈಲ್ ಆಪ್ ಬಗ್ಗೆ ಗೊತ್ತಿಲ್ಲದ ನೀವು ಹೇಗೆ ಕೆಲಸ ಮಾಡುತ್ತಿರಿ, ಕೋವಿಡ್ ಕಾರ್ಯಪಡೆಯ ಸಭೆಗಳನ್ನು ಹೇಗೆ ಮಾಡುತ್ತಿದ್ದಿರಿ, ಅಲ್ಲಿ ಸಭೆ ಮಾಡಿ ಚಾ ಕುಡಿದು ಹೋದರೆ ಸಾಕಾ, ಕಾಟಚಾರಕ್ಕೆ ಸಭೆಗಳನ್ನು ಮಾಡಬೇಡಿ, ಸ್ವಷ್ಟವಾದ ವಿವರಗಳನ್ನು ಪಡೆದುಕೊಂಡು ಚರ್ಚೆ ನಡೆಸಿ ಅದನ್ನು ನಿರ್ವಹಣೆ ಮಾಡಿ, ಕೆಲವು ವಿಚಾರಗಳಿಗೆ ಸಂಬಂಧಿಸಿ ಕಾಣಿಯೂರು ಪಿಡಿಒ, ಶಿರಾಡಿ ಪಿಡಿಒ, ಕುಟ್ರುಪಾಡಿ ಪಿಡಿಒ, ಬಳ್ಪ ಪಿಡಿಒರವರನ್ನು ತರಾಟೆಗೆ ತೆಗೆದುಕೊಂಡರು.

ಕೊರೋನಾ ನಿರ್ವಹಣೆಯ ಪ್ರಶ್ನೆಗೆ ಉತ್ತರಿಸದೆ ತಡಕಾಡಿದ ಪಿಡಿಒಗಳು
ಕೊರೋನಾ ನಿರ್ವಹಣೆಯ ಬಗ್ಗೆ ಪಿಡಿಒರವರುಗಳನ್ನು ಸಿಇಒರವರು ಪ್ರಶ್ನಿಸಿದಾಗ, ಉತ್ತರಕ್ಕಾಗಿ ತಡಕಾಡಿದ ಪ್ರಸಂಗವೂ ನಡೆಯಿತು.

ಕೊರೋನಾ ಸೋಂಕಿತರ ಪ್ರಾಥಮಿಕ ಸಂಪರ್ಕದವರ ಮಾಹಿತಿಯನ್ನು ನೋಂದಾಣಿ ಮಾಡುವ ಆಪ್ ಯಾವುದೇ ಕೇಳಿದಾಗ ಯಾರಲ್ಲಿಯೂ ಉತ್ತರ ಇಲ್ಲ, ಕೆಲವರು ಉತ್ತರ ಹೇಳಿದರೂ ಅದು ತಪ್ಪಾಗಿತ್ತು, ಇದಕ್ಕೆ ಆಕ್ರೋಶಗೊಂಡ ಸಿ.ಇ.ಒ. ಅವರು ಏನ್ರಿ ಎಲ್.ಕೆ.ಜಿ. ಮಕ್ಕಳು ಮಾಡುವ ತರ ಮಾಡ್ತಿರಲ್ವ, ಕೇವಲ ಗೊಂಬೆಗಳ ಹಾಗೆ ಸಭೆಯಲ್ಲಿ ಇದ್ದರೆ ಏನು ಪ್ರಯೋಜನ, ನಿಮ್ಮ ಕೆಲಸದ ಬಗ್ಗೆಯೇ ನಿಮಗೆ ಸರಿಯಾದ ಮಾಹಿತಿ ಇಲ್ಲದಿದ್ದರೆ ನೀವು ಯಾವ ರೀತಿ ಕೆಲಸ ಮಾಡಲು ಸಾಧ್ಯ, ನಿಮ್ಮ ಯೋಗ ಕ್ಷೇಮ ವಿಚಾರಿಸಿ ಹೋಗಲು ಬಂದಿಲ್ವ, ಸರಿಯಾದ ಮಾಹಿತಿ ನೀಡಬೇಕು, ಎಲ್ಲ ಇಲಾಖೆಯ ಜತೆ ವಿಚಾರಿಸಿಕೊಂಡು ಕೆಲಸ ನಿರ್ವಹಿಸಬೇಕು, ಕೇವಲ ಕಾಟಚಾರಕ್ಕೆ ಕೆಲಸ ನಿರ್ವಹಿಸಿದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

10 ಸೆಂಟ್ಸ್ ಜಾಗ ಹುಡುಕಿಕೊಟ್ಟರೆ ರಾಜಿನಾಮೆ ಕೊಡುತ್ತಿರಾ, ಶಿರಾಡಿ ಪಿಡಿಒ ವೆಂಕಟೇಶ್ ತರಾಟೆಗೆ
ಸ್ವಚ್ಚ ಭಾರತ ಕಾರ್ಯಕ್ರಮ ಅನುಷ್ಠಾನಕ್ಕಾಗಿ ತ್ಯಾಜ್ಯ ಘಟಕಕ್ಕೆ ಸಂಬಂಧಿಸಿ ಇದುವರೆಗೆ ಜಾಗ ಗುರುತು ಪಡಿಸಿಕೊಳ್ಳದ ಶಿರಾಡಿ ಪಿಡಿಒ ವೆಂಕಟೇಶ್ ಅವರನ್ನು ಸಿ.ಇ.ಒ ಅವರು ಪ್ರಶ್ನಿಸಿದಾಗ ಉತ್ತರಿಸಿದ ಪಿಡಿಒರವರು ಜಾಗ ಇಲ್ಲ ಎಂದು ಹೇಳಿದರು, ಇದಕ್ಕೆ ಸಿ.ಇ.ಒರವರು ಮಾತನಾಡಿ ಶಿರಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ೧೦ ಸೆಂಟ್ಸ್ ಜಾಗ ನಾನು ಹುಡುಕಿಕೊಡುತ್ತೇನೆ, ಹುಡುಕಿಕೊಟ್ಟರೆ ಕೆಲಸಕ್ಕೆ ರಾಜಿನಾಮೆ ಕೊಡ್ತಿರಾ ಎಂದು ಪ್ರಶ್ನಿಸಿದಾಗ ಪಿಡಿಒ ಏನು ಉತ್ತರ ನೀಡದೆ ಸುಮ್ಮನಾಗಿದ್ದರು, ಈ ಬಗ್ಗೆ ಮಾತನಾಡಿದ ಸಿ.ಇ.ಒ ರವರು ಹಳೆ ಕಾಲದ ಒಂದೇ ಮಾತುಗಳನ್ನು ತಲೆಯಲ್ಲಿ ಇಟ್ಟುಕೊಳ್ಳಬಾರದು, ಕಂದಾಯ ಇಲಾಖೆ, ಗ್ರಾಮ ಕರಣಿಕರಲ್ಲಿ ಹೋಗಿ ಜಾಗದ ಬಗ್ಗೆ ಹುಡುಕಾಡಬೇಕು, ತಾವು ಕುಳಿತುಕೊಂಡು ಇದ್ದಲ್ಲಿಗೆ ಜಾಗ ಹುಡುಕಿಕೊಂಡು ಬರುತ್ತದಾ ಎಂದು ಹೇಳಿದರು. ಘನ ತ್ಯಾಜ್ಯ ಘಟಕಕ್ಕೆ ಜಾಗ ಪಡೆದುಕೊಳ್ಳದ ಕುಟ್ರುಪಾಡಿ ಪಿಡಿಒ ಜೆರಾಲ್ದ್ ಮಸ್ಕರೇನಸ್ ಅವರನ್ನು ಸಿ.ಇ.ಒ ಅವರು ತರಾಟೆಗೆ ತೆಗೆದುಕೊಂಡರು.

ಸರಿಯಾಗಿ ಕರ್ತವ್ಯನಿರ್ವಹಿಸಲು ಆಗದಿದ್ದರೆ ರಾಜಿನಾಮೆ ಕೊಟ್ಟು ಹೋಗಿ

ಹಲವಾರು ವಿಚಾರಗಳ ಬಗ್ಗೆ ಮಾಹಿತಿಗೆ ಸರಿಯಾದ ಉತ್ತರ ಸಿಗದಿದ್ದಾಗ ಗರಂಗೊಂಡಿದ್ದ ಸಿ.ಇ.ಒ ಡಾ| ಕುಮಾರ್ ಅವರು ನಿಮಗೆ ಸರಿಯಾಗಿ ಕರ್ತವ್ಯನಿರ್ವಹಿಸಲು ಆಗುವುದಾದರೆ ಕೆಲಸ ಮಾಡಿ ಇಲ್ಲದಿದ್ದರೆ ರಾಜಿನಾಮೆ ಕೊಟ್ಟು ಹೋಗಿ ಎಂದು ಹೇಳಿದರು. ತಾಲೂಕಿನಲ್ಲಿ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿಲ್ಲ, ಗ್ರಾ.ಪಂ. ಅಭಿವೃದ್ದಿ ಅಧಿಕಾರಿಗಳಲ್ಲಿ ಪ್ರತಿದಿನ ಕೊರೋನಾ ನಿರ್ವಹಣೆ, ಹೋಂ ಐಸೋಲೇಶನ್, ಪ್ರಾಥಮಿಕ ಸಂಪರ್ಕದ ಬಗ್ಗೆ ಸಂಪೂರ್ಣ ಮಾಹಿತಿ ಇರಬೇಕು, ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮಾಡುವ ಕೆಲಸವೆಂದು ಸುಮ್ಮನೆ ಕುಳಿತುಕೊಳ್ಳಬಾರದು, ಆರೋಗ್ಯ ಇಲಾಖೆಯನ್ನು ಸಂಪರ್ಕದಲ್ಲಿಟ್ಟುಕೊಂಡು ಎಲ್ಲರೂ ಜತೆಯಾಗಿ ಕೆಲಸ ಮಾಡಬೇಕು, ಗ್ರಾಮ ಪಂಚಾಯತ್ ಮಟ್ಟದಲ್ಲಿ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕು, ಅಲ್ಲದೆ ಹೆಚ್ಚಿನ ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಬೇಕು ಎಂದ ಅವರು ಈ ಎಲ್ಲ ಚಟುವಟಿಕೆಗಳ ಅಂಕಿ ಅಂಶವನ್ನು ಸಂಬಂಧಪಟ್ಟ ಆಪ್‌ನಲ್ಲಿ ನೊಂದಾಣಿ ಮಾಡಿಕೊಳ್ಳಬೇಕು. ಗ್ರಾಮದ ದಿನ ದಿನದ ಮಾಹಿತಿಗಳನ್ನು ತಿಳಿದುಕೊಂಡು ಕೆಲಸ ನಿರ್ವಹಿಸಬೇಕೆಂದು ಸೂಚನೆ ನೀಡಿದರು. ಪ್ರತಿ ಪಂಚಾಯತ್‌ಗೆ ವಾಹನಗಳನ್ನು ನೀಡಲಾಗಿದೆ, ದುರ್ಬಲ ವರ್ಗದವರು, ಅಂಗವಿಕಲರು, ವಯೋ ವೃದ್ದರಿಗೆ ಪ್ರಥಮ ಪ್ರಾಶಸ್ತ್ಯದಲ್ಲಿ ಸೇವೆ ಒದಗಿಸಬೇಕು ಎಂದು ಹೇಳಿದರು.

ನರೇಗಾ ಯೋಜನೆಯಲ್ಲಿ ಬಳ್ಪ ಮತ್ತು ಕಾಣಿಯೂರಿನಲ್ಲಿ ಶೇಖಡವಾರು ಕನಿಷ್ಠ ಕೆಲಸಗಳು ಆಗಿರುವ ಬಗ್ಗೆ ಪಿಡಿಒರವರನ್ನು ಪ್ರಶ್ನಿಸಲಾಯಿತು. ಈ ತಿಂಗಳ ಅಂತ್ಯದೊಳಗೆ ಹೆಚ್ಚು ಕೆಲಸ ನಿರ್ವಹಿಸಲಾಗುವುದು ಎಂದು ಪಿಡಿಒರವರು ಹೇಳಿದಾಗ, ಎರಡೂವರೆ ತಿಂಗಳಿನಲ್ಲಿ ಆಗದ ಕೆಲಸ ಇನ್ನು ಸ್ವಲ್ಪ ದಿನದಲ್ಲಿ ಆಗುತ್ತದೆ ಎಂದರೆ ನಾನು ಹೇಗೆ ನಂಬಬೇಕು, ನಿಮ್ಮಲ್ಲಿ ಜಾದು ಏನಾದರೂ ಇದೆಯಾ ಎಂದು ಹೇಳಿದರು. ಕೊಲ ಗ್ರಾ.ಪಂ.ನಲ್ಲಿ ಲೈಬ್ರೆರಿಯಲ್ಲಿ ಪುಸ್ತಕಗಳನ್ನು ನೆಲದಲ್ಲಿ ಇಟ್ಟಿರುವ ಬಗ್ಗೆ ಪ್ರಶ್ನಿಸಿದ ಸಿ.ಇ.ಒ.ರವರು ನಿಮ್ಮ ಮನೆಯಲ್ಲಿ ಪುಸ್ತಕಗಳನ್ನು ನೆಲದಲ್ಲಿ ಇಡ್ತಿರಾ, ಯಾಕೆ ಅಸಡ್ಡೆ, ವಾಚಾನಾಲಯವನ್ನು ಸರಿಯಾಗಿ ಇಟ್ಟುಕೊಳ್ಳುವಂತೆ ಸೂಚನೆ ನೀಡಿದರು.

ಕಡಬ ಸಮುದಾಯ ಆರೋಗ್ಯ ಕೇಂದ್ರದ ಕಾರ್ಯವೈಖರಿಯ ಬಗ್ಗೆಯೂ ಸಿ.ಇ.ಎಸ್. ಅವರು ಅಸಮಾಧಾನ ವ್ಯಕ್ತಪಡಿಸಿದರು, ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಗುವ ಕೊರೋನಾ ಪರೀಕ್ಷೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯುತ್ತಿಲ್ಲ ಎಂದು ಅಂಕಿ ಅಂಶ ನೋಡಿಕೊಂಡು ಹೇಳಿದರು, ಅಲ್ಲದೆ ಕೊರೋನಾ ಸೊಂಕಿತರ ಪ್ರಾಥಮಿಕ ಸಂಪರ್ಕದ ಮಾಹಿತಿಗಳನ್ನು ನೊಂದಾಯಿಸುವಲ್ಲಿಯೂ ಹಿಂದೆ ಬಿದ್ದಿದೆ ಎಂದು ಕಡಬ ತಹಸೀಲ್ದಾರ್ ಅನಂತ ಶಂಕರ್ ಹಾಗೂ ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್ ಅವರಿಗೆ ಹೇಳಿದರು.

Leave A Reply

Your email address will not be published.