ಸೀಲ್ ಡೌನ್ ಆಗಿದ್ದರೂ ಕುಕ್ಕೆಯತ್ತ ಧಾವಿಸುತ್ತಿರುವ ನೆರೆಜಿಲ್ಲೆಗಳ ಭಕ್ತಾದಿಗಳು..ಪೊಲೀಸರ ಹದ್ದಿನ ಕಣ್ಣು ತಪ್ಪಿಸಿ ಕ್ಷೇತ್ರ ತಲುಪಲು ಕಾರಣವಾದರೂ ಏನು?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 21 ರ ವರೆಗೆ ಮುಂದುವರೆದಿರುವ ಲಾಕ್ ಡೌನ್ ನಡುವೆಯೇ, ಜಿಲ್ಲೆಯ ಕೆಲ ಅತಿಹೆಚ್ಚು ಪ್ರಕರಣಗಳಿರುವ 18 ಗ್ರಾಮ ಪಂಚಾಯಿತಿಗಳನ್ನು‌ ಸೀಲ್ ಡೌನ್ ಮಾಡಲಾಗಿದೆ. ಈ ನಡುವೆ ನಾಡಿನ ನಂಬರ್ ವನ್ ಮುಜರಾಯಿ ದೇಗುಲ, ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ವ್ಯಾಪ್ತಿ ಇರುವ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಕೂಡಾ ಸೀಲ್ ಡೌನ್ ಆಗಿದ್ದು, ಇದರ ನಡುವೆಯೇ ರಾಜ್ಯದ ಕೆಲ ಜಿಲ್ಲೆಗಳಿಂದ ಭಕ್ತರು‌ ಸುಬ್ರಹ್ಮಣ್ಯಕ್ಕೆ ಬರುತ್ತಿರುವುದು ಕಂಡುಬಂದಿದ್ದು ದೊಡ್ಡ ಸಮಸ್ಯೆಯ ಜೊತೆಗೆ ಬಂದೋಬಸ್ತ್ ನಲ್ಲಿರುವ ಸಿಬ್ಬಂದಿಗಳಿಗೆ, ಊರಿನ ನಾಗರಿಕರಿಗೆ, ತಲೆನೋವಾಗಿ ಪರಿಣಮಿಸಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊರೊನಾ ಲಾಕ್ ಡೌನ್ ಸಡಿಲಿಕೆ ಮಾಡಿರುವ ಕಾರಣ ಭಕ್ತಾಧಿಗಳ ತಂಡ ಇದೀಗ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಆಗಮಿಸುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸುವ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಪೋಲೀಸರು ಚೆಕ್ ಪೋಸ್ಟ್ ಅಳವಡಿಸಿದ್ದು, ಇದೆಲ್ಲದರ ನಡುವೆ ಪೊಲೀಸರ ಹದ್ದಿನ ಕಣ್ಣು ತಪ್ಪಿಸಿ,ಭಕ್ತಾದಿಗಳು ಒಳ ಮಾರ್ಗದ
ಮೂಲಕವೂ ದೇವಸ್ಥಾನದ ರಥಬೀದಿಗೆ ಆಗಮಿಸುತ್ತಿದ್ದು, ಇವರನ್ನು ನಿಯಂತ್ರಿಸುವುದೇ ಕಷ್ಟಸಾಧ್ಯವಾಗುತ್ತಿದೆ. ಈ ಬಗ್ಗೆ ತಿಳಿಹೇಳಿದರೂ, ಮನವೊಲಿಕೆ ಮಾಡಿದರೂ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ, ಇದರಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಸದ್ಯ ಕುಕ್ಕೆ ಕಲ್ಪಿಸುವ ಕೈಕಂಬ, ಕುಲ್ಕುಂದ, ಸುಬ್ರಹ್ಮಣ್ಯ ಪರಿಸರದಲ್ಲಿ ಭಕ್ತಾದಿಗಳನ್ನು ತಡೆಹಿಡಿಯುವ ಸಲುವಾಗಿ ಬಾರಿಕೆಡ್ ಗಳನ್ನು ಹಾಕಲಾಗಿದ್ದು, ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ವಾಹನಗಳನ್ನು ತಪಾಸಣೆ ನಡೆಸಿ, ತಿಳಿಹೇಳಿ ಮನವರಿಕೆ ಮಾಡಲಾಗುತ್ತಿದೆ. ಆದರೆ ಈ ಬಗ್ಗೆ ನಾಗರೀಕರು ಹೇಳುತ್ತಿರುವುದು ಏನೆಂದರೆ ಕುಕ್ಕೆ ಕಲ್ಪಿಸುವ ಇಚ್ಲಂಪಾಡಿ, ಗುಂಡ್ಯ ಹಾಗೂ ಕಡಬ ಮೂಲಕ ಬರುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಬೇಕಿದೆ. ಈ‌ ಮೂಲಕ ಸೀಲ್ ಡೌನ್ ಬಗ್ಗೆ ಮಾಹಿತಿ ಇಲ್ಲದ ಭಕ್ತಾದಿಗಳಿಗೆ ಅಲ್ಲಿಯೇ ಮಾಹಿತಿ ನೀಡುವ ಕೆಲಸವೂ ನಡೆಯಬೇಕಿದೆ. ಈ ಮೂಲಕ ಸುಬ್ರಹ್ಮಣ್ಯದ‌ ಪೊಲೀಸ್ ಹಾಗೂ ಗ್ರಾಮಪಂಚಾಯತ್ ಸಿಬ್ಬಂದಿಗಳ ಮೇಲಿನ ಒತ್ತಡವನ್ನೂ ಕಡಿಮೆ ಮಾಡಬೇಕಿದೆ ಎಂಬುದಾಗಿದೆ.

Leave A Reply

Your email address will not be published.