ಗದ್ದೆಯಲ್ಲಿ ನರ್ತನ ನಿಲ್ಲಿಸಿದ ನರ್ತೆ | ಮನುಷ್ಯನ ಸ್ವಾರ್ಥಕ್ಕೆ ಬಲಿಯಾಯಿತೇ ಕರಾವಳಿ ರೈತನ ಬಹುಕಾಲದ ಮಿತ್ರ

ಕರಾವಳಿಯಲ್ಲಿ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ, ಮಳೆಯಲ್ಲಿ ನೆನೆದುಕೊಂಡು ನರ್ತೆ ಹೆಕ್ಕುವ ಸಮೂಹ ಒಂದೆಡೆಯಾದರೆ, ಚಳಿಯ ನಡುವೆ ಅಡುಗೆ ಮನೆಯಿಂದ ನರ್ತೆ(ಶಂಕು ಹುಳು) ಪದಾರ್ಥದ ಘಮ ಮೂಗಿಗೆ ಬಡಿಯುತ್ತದೆ.

ಹಿಂದಿನ ಕಾಲದಿಂದಲೂ ನರ್ತೆ ಗೆ ತುಳುನಾಡಿನಲ್ಲಿ ಭಾರೀ ಬೇಡಿಕೆಯ ಜೊತೆಗೆ ಅದನ್ನು ಸವಿಯದ ಮಾಂಸಾಹಾರ ಇಷ್ಟಪಡುವ ಕರಾವಳಿಗರಿದ್ದರೆ ಅದು ಬಲು ಅಪರೂಪ. ಈ ಅಪರೂಪದ ನಡುವೆ ಇಂದು ನರ್ತೆಯು ಕೂಡಾ ಅಪರೂಪವಾಗಿ, ಅಳಿವಿನಂಚಿಗೆ ಬಂದು ನಿಂತಿದೆ. ಗದ್ದೆ, ತೋಟಗಳಿಂದ, ರೈತನ ಗೆಳೆತನದಿಂದ, ಅಡುಗೆ ಮನೆಯಿಂದ ಈ ನರ್ತೆಯು ಕಣ್ಮರೆಯಾಗುತ್ತಿದೆ ಎಂಬುವುದು ಕಟು ಸತ್ಯ.

ಒಂದು ಕಾಲದಲ್ಲಿ ಕರಾವಳಿ ರೈತನ ಮಿತ್ರನಂತಿದ್ದ ಈ ಮೃದ್ವಂಗಿಗಳು ಇಂದು ವಿನಾಶದ ಅಂಚಿಗೆ ತಲುಪಿವೆ ಎಂದಾಗ ರೈತನು ಬಲು ಬೇಸರಗೋಳ್ಳುತ್ತಿರುವುದು ಕಂಡು ಬರುತ್ತಿದೆ.

ಪ್ರತೀ ವರ್ಷ ಮುಂಗಾರು ಪ್ರವೇಶಿಸುತ್ತಿದ್ದಂತೆ ಕರಾವಳಿಯಲ್ಲಿ, ಅದರಲ್ಲೂ ಗ್ರಾಮೀಣ ಭಾಗದಲ್ಲಿ ಈ ಹಿಂದೆ ನರ್ತೆಗಳು ಹೇರಳವಾಗಿ ಸಿಗುತ್ತಿದ್ದವು. ಗ್ರಾಮೀಣ ಪ್ರದೇಶದ ಪ್ರತಿ ಮನೆಯಲ್ಲೂ ನರ್ತೆ ಅಥವಾ ನಂಗು ರುಚಿಕರ ಖಾದ್ಯ ಕಾಯಂ ಆಗಿ ಇರುತ್ತಿತ್ತು. ಬಸಳೆ, ಸೌತೆಕಾಯಿಯೊಂದಿಗೆ ನರ್ತೆಯನ್ನು ಪದಾರ್ಥ ಮಾಡಿದರೆ ಅದರ ರುಚಿ ಸವಿದವರೇ ಬಲ್ಲರು.

ಅಧಿಕ ಮಳೆ ಸುರಿಯುವ ಜೂನ್ ಹಾಗು ಸೆಪ್ಟೆಂಬರ್ ತಿಂಗಳಲ್ಲಿ ಗದ್ದೆಗಳಲ್ಲಿ ಕಾಣ ಸಿಗುತ್ತಿದ್ದ ಶಂಖಾಕೃತಿಯ ಈ ಉಭಯವಾಸಿ ಜೀವಿಗಳಿಗೆ ಕರಾವಳಿಯಲ್ಲಿ ನರ್ತೆ ಎಂದು ಕರೆಯುತ್ತಾರೆ. ಗದ್ದೆಗಳ ಅಂಟುಮಣ್ಣಿನಲ್ಲಿ ಕಾಣ ಸಿಗುವ ಈ ನರ್ತೆಗಳು ಪಾಚಿ, ಕೆಸರು ಮಣ್ಣನ್ನು ಅಹಾರವಾಗಿ ಸೇವಿಸುತ್ತವೆ.

ಈ ಮೃದ್ವಂಗಿಗಳು ಮಣ್ಣನ್ನು ಆಹಾರವಾಗಿ ಸೇವಿಸುವುದೂ ಅಲ್ಲದೆ, ಮಣ್ಣನ್ನು ಹದಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವು. ಬೆಳೆ ರಕ್ಷಣೆಯಲ್ಲೂ ಇವುಗಳದ್ದು ಮಹತ್ತರ ಪಾತ್ರ ಎಂಬುವುದು ಸೋಜಿಗದ ಸಂಗತಿ. ಹೀಗಾಗಿ ಇದನ್ನು ರೈತನ ಮಿತ್ರ ಎಂದು ಕರೆಯಲಾಗುತ್ತದೆ. ಮಳೆಗಾಲ ಮುಗಿದು ಬೇಸಿಗೆಗಾಲ ಪ್ರಾರಂಭವಾಗುತ್ತಿದ್ದಂತೆ ಸೀದಾ ಮಣ್ಣಿನಡಿಗೆ ತೆರಳುವ ನರ್ತೆ ಪುನಃ ಕಾಣಸಿಗುವುದು ಮಳೆಗಾಲದಲ್ಲಿ.

ತನಗೆ ಬೇಸಿಗೆ ಮುಗಿಯುವ ವರೆಗೂ ಬೇಕಾದಷ್ಟು ಆಹಾರ ಸಂಗ್ರಹಿಸಿ ಮಣ್ಣಡಿ ಹೂತು ಅವಿತುಕೊಳ್ಳುವ ಈ ಜೀವಿಗಳು, ಮಳೆಗಾಲದಲ್ಲಿಯೇ ತನ್ನ ಸಂತತಿಯನ್ನು ಮೊಟ್ಟೆ ಇಡುವ ಮೂಲಕ ಉತ್ಪತಿ ಮಾಡುತ್ತವೆ. ಕಾಗೆ, ಕೊಕ್ಕರೆಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಬಲು ಬುದ್ಧಿ ಉಪಯೋಗಿಸುವುದನ್ನು ಕಾಣುವುದೇ ಒಂದು ಕುತೂಹಲ. ನರ್ತೆಗಳು ಸಾಮಾನ್ಯವಾಗಿ ಕೆಸರು ಮಿಶ್ರಿತ ಮಣ್ಣಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಒಂದು ವೇಳೆ ಮಳೆ ಹೆಚ್ಚಾಗಿ, ನೀರಿನ ರಭಸ ಏರಿದರೆ, ಹರಿಯುವ ನೀರಿನಲ್ಲಿ ಕೊಚ್ಚಿ ಹೋಗದಂತೆ ತಮ್ಮನ್ನು ತಾವು ಪರಸ್ಪರ ಗಟ್ಟಿಯಾಗಿ ಅಪ್ಪಿ ಹಿಡಿದುಕೊಳ್ಳುತ್ತವೆ.

ಇಂದು ಅಳಿವಿನಂಚಿಗೆ ದಾಪುಗಾಲಿಟ್ಟ ಇವುಗಳ ಸಂತತಿಯ ನಾಶಕ್ಕೆ ಮನುಷ್ಯನೇ ಕಾರಣ ಎಂಬುವುದು ದುರಾದೃಷ್ಟವೇ ಸರಿ. ರೈತನ ಮಿತ್ರನಂತಿದ್ದ ಇವುಗಳು, ಮೊಳಕೆಯೊಡೆದು ಬರುವ ನೇಜಿಯನ್ನು ತಿನ್ನುತ್ತವೆ ಎಂಬ ಕಾರಣಕ್ಕಾಗಿ ವಿಷಯುಕ್ತ ಸಿಂಪಡನೆಯನ್ನು ಸಿಂಪಡಿಸಿ, ಸಾವಯವ ಗೊಬ್ಬರ ಹಾಕುವ ಗದ್ದೆಗಳಿಗೆ ರಸಗೊಬ್ಬರವನ್ನು ಪರಿಚಯಿಸಿ, ತೋಟಗಳಿಗೆ ಎಂಡೋಸಲ್ಫನ್ ನಂತಹ ವಿಷವನ್ನು ಸಿಂಪಡಿಸಿದರ ಪರಿಣಾಮವೇ ಇಂದು ಇವುಗಳ ಸಂತತಿ ನಾಶಕ್ಕೆ ಕಾರಣವಾಗಿದೆ.

ಮನುಷ್ಯ ಗದ್ದೆ ಉಳಿಸುವಲ್ಲಿ ಸ್ವಾರ್ಥಿಯಾಗಿ , ನರ್ತೆಗಳ ಸಂತತಿಯು ನಾಶವಾಗಿದೆ. ಅಡುಗೆ ಮನೆಯಲ್ಲಿ ನರ್ತೆ ಪದಾರ್ಥ ಮಾಡುತ್ತಿದ್ದ ಪಾತ್ರೆಯು ಸದ್ದಿಲ್ಲದೇ ಮೂಲೆ ಸೇರಿದೆ, ಅಳಿದು ಉಳಿದಿರುವ ಕೆಲ ನರ್ತೆಗಳ ಸಣ್ಣಪುಟ್ಟ ಸಮೂಹ ಮರಳಿ ಸಂತತಿ ಉತ್ಪತಿಗಾಗಿ ಚಡಪಡಿಸುತ್ತಿವೆ. ಅವುಗಳ ಮೇಲೆ ಈ ದುರಾಸೆಯ ಮನುಷ್ಯರ ಒಂದು ನರ್ತೆ ಗಾತ್ರದಷ್ಟು ಕನಿಕರ ಬೇಕಾಗಿದೆ.

                                                  ?ಬರಹ :✍️ದೀಪಕ್ ಹೊಸ್ಮಠ
Leave A Reply

Your email address will not be published.