ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಚಾಲನಾ ಪರೀಕ್ಷೆ ನೀಡಬೇಕಾಗಿಲ್ಲ

ಈಗ ಡ್ರೈವಿಂಗ್ ಲೈಸೆನ್ಸ್ ಯಾರಿಗೆ ಬೇಡ ಹೇಳಿ. ಅದು ಕೂಡ ಒಂದು ಮುಖ್ಯ ಗುರುತಿನ ಚೀಟಿಯಾಗಿ ಮಾರ್ಪಾಟಾಗಿದೆ. ಡ್ರೈವಿಂಗ್‌ ಲೈಸನ್ಸ್‌ ಬೇಕು, ಆದರೆ, RTO ದಲ್ಲಿ ಚಾಲನಾ ಪರೀಕ್ಷೆಯನ್ನು ನೀಡಲು ಇಷ್ಟವಿಲ್ಲ ಅನ್ನೋರಿಗೆ ಇಲ್ಲಿದೆ ಗುಡ್‌ ನ್ಯೂಸ್‌ .

ಹೌದು, ಶೀಘ್ರದಲ್ಲೇ ಜನರು RTOದಲ್ಲಿ ಚಾಲನಾ ಪರೀಕ್ಷೆಯಿಲ್ಲದೆ ಚಾಲನಾ ಪರವಾನಗಿ ಪಡೆಯಬಹುದು. ಆದ್ರೆ, ಇದಕ್ಕಾಗಿ ನೀವು ರಸ್ತೆ ಸಾರಿಗೆ ಸಚಿವಾಲಯದಿಂದ ಮಾನ್ಯತೆ ಪಡೆದ ಚಾಲನಾ ಪರೀಕ್ಷಾ ಕೇಂದ್ರದಿಂದ ತರಬೇತಿ ಪಡೆಯಬೇಕಾಗುತ್ತದೆ. ನಂತರ ಕೇಂದ್ರದಿಂದ ಪ್ರಮಾಣಪತ್ರ ನೀಡಲಾಗುತ್ತದೆ. ಇನ್ನು ಚಾಲನಾ ಪರವಾನಗಿ ಪಡೆಯುವಾಗ ನೀವಿದನ್ನು ತೋರಿಸಿದರೆ ಸಾಕು, ಪರೀಕ್ಷೆ ಇಲ್ಲದೆಯೇ ಲೈಸನ್ಸ್‌ ನೀಡಲಾಗುತ್ತದೆ.

ಈ ಮಾನ್ಯತೆ ಪಡೆದ ಟ್ರೈನಿಂಗ್ ಕೇಂದ್ರಗಳು 1 ಜುಲೈ 2021 ರಿಂದ ಪ್ರಾರಂಭವಾಗುತ್ತವೆ. ಈ ಸಂಬಂಧ ರಸ್ತೆ ಸಾರಿಗೆ ಸಚಿವಾಲಯ ಆದೇಶ ಹೊರಡಿಸಿದೆ. ರಸ್ತೆ ಸಾರಿಗೆ ಸಚಿವಾಲಯದ ಪ್ರಕಾರ, ಪ್ರತಿ ವರ್ಷ ದೇಶದಲ್ಲಿ ಅಪಘಾತಗಳಿಗೆ ಒಂದು ಸಾಮಾನ್ಯ ಕಾರಣವೆಂದರೆ, ಟ್ರೆಂಡ್ ಚಾಲಕರ ಕೊರತೆ. ಸಚಿವಾಲಯದ ಪ್ರಕಾರ, ಪ್ರಸ್ತುತ ದೇಶದಲ್ಲಿ ಸುಮಾರು 22 ಲಕ್ಷ ಚಾಲಕರ ಕೊರತೆ ಇದೆ. ಈ ಕೊರತೆಯನ್ನು ನೀಗಿಸಲು ಮತ್ತು ರಸ್ತೆ ಅಪಘಾತಗಳನ್ನ ಕಡಿಮೆ ಮಾಡಲು, ರಸ್ತೆ ಮತ್ತು ಸಾರಿಗೆ ಸಚಿವಾಲಯವು ನಿಗದಿಪಡಿಸಿದ ಮಾರ್ಗಸೂಚಿಗಳ ಪ್ರಕಾರ ದೇಶಾದ್ಯಂತ ಚಾಲಕ ಟ್ರೈನಿಂಗ್ ಕೇಂದ್ರಗಳನ್ನ ತೆರೆಯಲು ಅನುಮತಿ ನೀಡಿದೆ.

ಚಾಲಕ ತರಬೇತಿ ಕೇಂದ್ರಕ್ಕೆ ಕೆಲವು ‌ಷರತ್ತುಗಳನ್ನು ವಿಧಿಸಲಾಗಿದೆ. ಅದರನ್ವಯ, ತರಬೇತಿ ಕೇಂದ್ರಕ್ಕೆ ಬಯಲು ಪ್ರದೇಶಗಳಲ್ಲಿ ಎರಡು ಎಕರೆ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಒಂದು ಎಕರೆ ಭೂಮಿ ಬೇಕಾಗುತ್ತದೆ. ಎಲ್ ಎಂವಿ ಮತ್ತು ಎಚ್ ಎಂವಿ ವಾಹನಗಳಿಗೆ ಸಿಮ್ಯುಲೇಟರ್ ಕಡ್ಡಾಯವಾಗಿರುತ್ತದೆ. ಇದರ ಮೂಲಕ ತರಬೇತಿ ನೀಡಲಾಗುವುದು. ಇಲ್ಲಿ ಬಯೋಮೆಟ್ರಿಕ್ ಹಾಜರಾತಿ ಮತ್ತು ಇಂಟರ್ನೆಟ್ ಗೆ ಬ್ರಾಡ್ ಬ್ಯಾಂಡ್ ಸಂಪರ್ಕ ಅಗತ್ಯವಾಗಿರುತ್ತದೆ. ಪಾರ್ಕಿಂಗ್, ರಿವರ್ಸ್ ಡ್ರೈವಿಂಗ್, ಇಳಿಜಾರಿನ ಚಾಲನೆ ಇತ್ಯಾದಿಗಳಲ್ಲಿ ತರಬೇತಿ ನೀಡಲು ಡ್ರೈವಿಂಗ್ ಟ್ರ್ಯಾಕ್ ಕಡ್ಡಾಯವಾಗಿರುತ್ತದೆ. ಇದರಲ್ಲಿ ಸಿದ್ಧಾಂತ ಮತ್ತು ವಿಭಾಗೀಕರಣ ಕೋರ್ಸ್ ಗಳು ಇರುತ್ತವೆ. ಕೇಂದ್ರದಲ್ಲಿ ಸಿಮ್ಯುಲೇಟರ್ ಗಳ ಸಹಾಯದಿಂದ ಹೆದ್ದಾರಿ, ಗ್ರಾಮೀಣ ಪ್ರದೇಶಗಳು, ಕಿಕ್ಕಿರಿದ ಮತ್ತು ಲೇನ್ ಚಲಿಸುವ ಸ್ಥಳಗಳಲ್ಲಿ ಮಳೆ, ಮಂಜು ಮತ್ತು ರಾತ್ರಿಯಲ್ಲಿ ವಾಹನಗಳನ್ನ ಓಡಿಸಲು ತರಬೇತಿ ನೀಡಲಾಗುವುದು.

ಜನರು ಸಚಿವಾಲಯದ ಮಾನದಂಡಕ್ಕೆ ಅನುಗುಣವಾಗಿ ಕೇಂದ್ರವನ್ನು ತೆರೆಯಬಹುದು ಹಾಗೂ ಇದರಲ್ಲಿ ಜನರಿಗೆ ತರಬೇತಿ ನೀಡಬಹುದು. ತರಬೇತಿಯ ನಂತರ ಪರೀಕ್ಷೆ ನಡೆಸಲಾಗುವುದು. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಕೇಂದ್ರವು ಪ್ರಮಾಣಪತ್ರವನ್ನ ನೀಡಲಾಗುತ್ತೆ. ಅದರ ಆಧಾರದ ಮೇಲೆ ಚಾಲನಾ ‌ಪರೀಕ್ಷೆಯನ್ನು ನೀಡದೇ ಚಾಲನಾ ಪರವಾನಗಿಯನ್ನು ಕೊಡಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

Leave A Reply

Your email address will not be published.