Ad Widget

ಶತಕ ದಾಟಿದ ಪೆಟ್ರೋಲ್, ಡೀಸೆಲ್ ಬೆಲೆ | ಮಂಗಳೂರಿನಲ್ಲಿ ಕಾಂಗ್ರೆಸ್ ನಿಂದ ‘100 ನಾಟೌಟ್’ ಪ್ರತಿಭಟನೆ | ಕೇಕ್ ಕತ್ತರಿಸಿ ವ್ಯಂಗ್ಯ

ಪೆಟ್ರೋಲ್ ಡೀಸಲ್ ಬೆಲೆಯೇರಿಕೆಯನ್ನು ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ದ.ಕ. ಜಿಲ್ಲಾ ಕಾಂಗ್ರೆಸ್ ನಿಂದ ಮಂಗಳೂರಿನ ಕೆಪಿಟಿಯಲ್ಲಿರುವ ಪೆಟ್ರೋಲ್ ಪಂಪ್ ಎದುರು ಇಂದು ಬೆಳಗ್ಗೆ ವಿನೂತನ ಪ್ರತಿಭಟನೆ ನಡೆಯಿತು.

‘ 100 ನಾಟೌಟ್’ ಎಂಬ ಹೆಸರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಜಾಗಟೆ ಬಾರಿಸುವ ಮೂಲಕ ಇಂಧನ ತೈಲ ಬೆಲೆ ಏರಿಕೆಯನ್ನು ಖಂಡಿಸಲಾಯಿತು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಬ್ಯಾರೆಲ್ ಗೆ 140 ಡಾಲರ್ ಇದ್ದಾಗಲೂ ಮೇಲಿದ್ದರೂ 70 ವರ್ಷದಲ್ಲಿ ಪೆಟ್ರೋಲ್ ಗೆ 70 ರೂ. ಏರಿಕೆಯಾಗದಂತೆ ಕಾಂಗ್ರೆಸ್ ನೋಡಿಕೊಂಡಿತ್ತು. ಇದೀಗ ಬ್ಯಾರೆಲ್ ಬೆಲೆ ಅತೀ ಕಡಿಮೆ ಆಗಿದ್ದರೂ ಇಂಧನ ತೈಲ ಬೆಲೆಯನ್ನೂ ನಿರಂತವಾಗಿ ಏರಿಕೆ ಮಾಡುತ್ತಿದೆ. ಈ ಬಗ್ಗೆ ಜನಸಾಮಾನ್ಯರೊಂದಿಗೆ ವಿಪಕ್ಷಗಳು ಧ್ವನಿ ಎತ್ತಬೇಕಾಗಿದೆ. ಕೊರೋನ ಸಂದರ್ಭದಲ್ಲಿ ಜನ ಸಾಮಾನ್ಯರು ಬದುಕಬೇಕಾದರೆ ಇಂಧನ ಬೆಲೆ ಕಡಿಮೆಯಾಗಬೇಕು. ಅಗ ಅಗತ್ಯ ವಸ್ತುಗಳ ಬೆಲೆ ಏರಿಕೆಯೂ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಿದರು.

ಕೆಪಿಸಿಸಿ ಸೂಚನೆ ಮೇರೆಗೆ ಇಂದಿನಿಂದ ಆರಂಭಗೊಂಡ ಈ ಪ್ರತಿಭಟನೆ ಮುಂದೆ ವಿಧಾನಸಭೆ, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾತ್ ಮಟ್ಟದಲ್ಲಿ ನಿರಂತರವಾಗಿ ಐದು ದಿನಗಳ ಕಾಲ ಮುಂದುವರಿಯಲಿದೆ ಎಂದು ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದರು.

30 ರೂ.ನಲ್ಲಿ ಸಿಗಬೇಕಾದ ಪೆಟ್ರೋಲ್ ಬೆಲೆ ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಶತಕ ಬಾರಿಸಿದೆ. ಹಿಂದೆ ತೈಲ ಬೆಲೆ ಒಂದು ರೂ. ಏರಿಕೆ ಆದಾಗ ಜಿಲ್ಲಾಧಿಕಾರಿ ಕಚೇರಿ ಎದುರು ಅಡುಗೆ ಮಾಡಿ ಪ್ರತಿಭಟಿಸುತ್ತಿದ್ದ ಬಿಜೆಪಿ ಜನಪ್ರತಿನಿಧಿಗಳು ಈಗ ಎಲ್ಲಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಪ್ರಶ್ನಿಸಿದರು.

ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಅಚ್ಚೇ ದಿನ್ ಬರುವ ನಿರೀಕ್ಷೆಯಲ್ಲಿದ್ದ ಜನತೆಗೆ ಪೆಟ್ರೋಲ್ ಬೆಲೆ ಏರಿಕೆಯು 100 ನಾಟೌಟ್ ಮೂಲಕ ಬಿಜೆಪಿ ಸರಕಾರ ಅಚ್ಚೇ ದಿನ ತಂದಿದೆ ಎಂದು ಹೇಳಿದರು

ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾತನಾಡಿ, ಈ ನಮ್ಮ ಹೋರಾಟ ಪ್ರಾಮಾಣಿಕ, ಸ್ವಾಭಿಮಾನದಿಂದ ಬದುಕುವ ನಾಗರಿಕರ ಪರವಾಗಿಯೇ ಹೊರತು, ಅಂಧ ಭಕ್ತರ ವಿರೋಧಕ್ಕಾಗಿ ಅಲ್ಲ ಎಂದರು.

ಮಾಜಿ ಶಾಸಕರಾದ ಮೊಯ್ದಿನ್ ಬಾವ, ಜೆ. ಆರ್.ಲೋಬೊ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.

ಇಂಧನ ಬೆಲೆ ಏರಿಕೆ ವಿರುದ್ಧ ಭಿತ್ತಿ ಫಲಕಗಳನ್ನು ಪ್ರದರ್ಶಿಸಿದ ಪ್ರತಿಭಟನಾಕಾರರು ಬಿಜೆಪಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಶಶಿಧರ್ ಹೆಗ್ಡೆ, ಸದಾಶಿವ ಉಳ್ಳಾಲ್, ಪಿ‌.ವಿ.ಮೋಹನ್, ವಿನಯ್ ರಾಜ್, ಪ್ರತಿಭಾ ಕುಳಾಯಿ, ಭಾಸ್ಕರ ಕೆ., ಅಪ್ಪಿ, ನವೀನ್ ಡಿಸೋಜ, ಟಿ.ಕೆ.ಸುಧೀರ್, ಶಬೀರ್, ಸವಾದ್ ಸುಳ್ಯ, ವಿಶ್ವಾಸ್ ಕುಮಾರ್ ದಾಸ್, ವಿವೇಕ್ ರಾಜ್, ಸಂಶುದ್ದೀನ್ ಮೊದಲಾದವರು ಭಾಗವಹಿಸಿದ್ದರು.

ಇದೇ ವೇಳೆ 100 ನಾಟೌಟ್ ಕೇಕ್ ಕತ್ತರಿಸಿ ಇಂಧನ ತೈಲ ಬೆಲೆಯೇರಿಕೆಯನ್ನು ಖಂಡಿಸಿದರು.

Leave a Reply

error: Content is protected !!
Scroll to Top
%d bloggers like this: