ಅಡಿಕೆ ಮತ್ತೆ ಚಿನ್ನದ ಬಣ್ಣದಲ್ಲಿ ಫಳ ಫಳ | ಹಳೆ ಅಡಿಕೆಗೆ 510 ರೂ., ಗಗನ ಮುಖಿಯಾದ ಕೃಷಿ ಭೂಮಿಯ ಬೆಲೆ

ಅಡಿಕೆ ಇವತ್ತು 22 ಕ್ಯಾರೆಟ್ ಚಿನ್ನದ ಬಣ್ಣದಲ್ಲಿ ಫಳಫಳ ಬೆಳಗುತ್ತಿದೆ. ನಿನ್ನೆ ಅಡಿಕೆಗೆ 510 ರೂಪಾಯಿ ಬೆಲೆ ದಾಖಲಾಗುವುದರೊಂದಿಗೆ ಅಡಿಕೆ ರೈತರು ಕೂಡಾ ಹೆಮ್ಮೆಯಿಂದ ಬೀಗಲು ಸಕಾರಣ ಸಿಕ್ಕಿದೆ.

ಕೊವಿಡ್ ಲಾಕ್ ಡೌನ್ ಚಾಲ್ತಿಯಲ್ಲಿರುವಾಗಲೇ ಮಂಗಳೂರಿನ ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯಲ್ಲಿ ಉಬ್ಬರ ಕಂಡಿದೆ. ನಿನ್ನೆ ಜೂ.10ರಂದು  ಮಾರುಕಟ್ಟೆಯಲ್ಲಿ ಹಳೆ ಅಡಿಕೆ ಕೆ.ಜಿ.ಗೆ 510 ರೂ.ಗಳಂತೆ ಖರೀದಿಯಾಗಿದೆ. ಇದೇ ವೇಳೆ ಹೊಸ ಅಡಿಕೆ ಧಾರಣೆಯೂ ಏರಿಕೆ ಕಂಡಿದೆ.

ಜೂ. 10ರಂದು ಹಳೆ ಅಡಿಕೆ ಕೆ.ಜಿ.ಗೆ 510 ರೂ. ಗೆ ಮಾರಾಟ ಆಗಿದ್ದರೆ, ಹೊಸ ಅಡಿಕೆ 410 ರೂ.ಗೆ ಖರೀದಿಯಾಗಿದೆ. ಕ್ಯಾಂಪ್ಕೊದಲ್ಲಿ ಹಳೆ ಅಡಿಕೆ ಕೆ.ಜಿ.ಗೆ 500 ರೂ. ಗೆ ಖರೀದಿ ಆಗಿತ್ತು. ಹೊಸ ಅಡಿಕೆಗೆ ಕೆ.ಜಿ.ಗೆ 400 ರೂ. ಗೆ ಖರೀದಿ ಆಗಿದೆ.

ಲಾಕ್ ಡೌನ್ ನಿಮಿತ್ತ ನಿಗದಿತ ಅವಧಿಯಲ್ಲಿ ಮಾತ್ರ ಖರೀದಿಗೆ ಅವಕಾಶ ಇದ್ದ ಕಾರಣ ಬೇಡಿಕೆ ಪೂರೈಕೆಯಲ್ಲಿ ತಕ್ಕಷ್ಟು ಪೂರೈಕೆ ಆಗದಿರುವ ಕಾರಣ ಧಾರಣೆ ನಿರಂತರ ಏರಿಕೆಯತ್ತ ಮುಖ ಮಾಡಿದೆ.
ಕಳೆದ ವರ್ಷ ಲಾಕ್‌ಡೌನ್ ಹಲವು ಕ್ಷೇತ್ರಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡಿದ್ದರೂ ಅಡಿಕೆ ಬೆಳೆಗಾರರ ಪಾಲಿಗೆ ಶುಭ ಸುದ್ದಿಯೇ ಸಿಕ್ಕಿತ್ತು. ಕಳೆದ ವರ್ಷ, ಇದೆ ಅವಧಿಯಲ್ಲಿ ಅಡಿಕೆ ಧಾರಣೆ ಇದೇ ಥರ ದಾಖಲೆ ಸೃಷ್ಟಿ ಸಿತ್ತು. ಇತಿಹಾಸ ಮತ್ತೆ ಒಂದೇ ವರ್ಷದಲ್ಲಿ ಮರುಕಳಿಸಿದೆ.

ಅಡಿಕೆ ಬೆಲೆಯಲ್ಲಿ ಚೇತರಿಕೆ ಬೆನ್ನಲ್ಲೇ ಕೃಷಿಭೂಮಿಗೆ ಬೆಲೆ ಏರಿಕೆ

ಅತ್ತ ಅಡಿಕೆ ಧಾರಣೆ ಒಂದೇಸಮನೆ ಏರಿಕೆ ಕಾಣುತ್ತಿರುವಾಗ ರೈತಾಪಿ ವರ್ಗ ಕೃಷಿ ಭೂಮಿ ಖರೀದಿಯತ್ತ ಒಲವು ತೋರಿದೆ. ಕೃಷಿ ಆಸಕ್ತರು ಅಡಿಕೆ ತೋಟಗಳನ್ನು ಹುಡುಕುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಕೃಷಿಭೂಮಿಯಲ್ಲಿ ಹತ್ತರಿಂದ ಹದಿನೈದು ಪರ್ಸೆಂಟ್ ಬೆಲೆ ಏರಿಕೆ ಕಂಡಿದೆ. ದುಡ್ಡಿರುವ ಮಂದಿ ಕೃಷಿಭೂಮಿ ಕೊಳ್ಳಲು ಮುಂದೆ ಬಂದ ರೂ, ಇವತ್ತು ಭೂಮಿ ಮಾರುವವರಿಲ್ಲ. ಮಾರಲು ಹೊರಟವರು ಊರಲ್ಲಿಲ್ಲದ ಬೆಲೆ ಹೇಳುತ್ತಿದ್ದಾರೆ. ಕಾರಣ ಒಂದೇ : ಅಡಿಕೆ ಧಾರಣೆಯಲ್ಲಿ ಕಂಡ ಗಗನಮುಖಿ ಏರಿಕೆ.

ಅತ್ತ ರಬ್ಬರ್ ಬೆಳಗಾರರು ರಬ್ಬರ್ ಬೆಳೆಯಿಂದ ಅಡಿಕೆಗೆ ಶಿಫ್ಟ್ ಆಗುವ ಹುನ್ನಾರದಲ್ಲಿದ್ದಾರೆ. ಕೆಲವರು ರಬ್ಬರ್ ಗಿಡಗಳ ಮಧ್ಯೆ ಅಡಿಕೆ ಪ್ಲಾಂಟೇಶನ್ ಮಾಡಿ, ಒಂದೆರಡು ವರ್ಷಗಳಲ್ಲಿ ರಬ್ಬರ್ ಗಿಡಗಳನ್ನು ಕಡಿದು ಅಡಿಕೆ ತೋಟದ ಒನರ್ ಗಳಾಗುವ ಕನಸು ಅವರದು. ಕೊರೋನಾ ಸಮಯದ ಸ್ಥಿತ್ಯಂತರಗಳ ನಡುವೆಯೂ ಅಡಿಕೆ ತನ್ನ ಬೆಲೆಯನ್ನು ಕಾಯ್ದುಕೊಂಡು ಮತ್ತಷ್ಟು ಏರಿಕೆ ಕಾಣುತ್ತಿರುವುದು ಕರಾವಳಿಯ ನಂಬರ್ 1 ಆದಾಯ ಮೂಲವಾಗಿರುವ ಬೆಳೆಗಾರರಿಗೆ ಸಂಭ್ರಮ ತರಿಸಿದೆ. ಇವತ್ತು ಕರಾವಳಿಯಲ್ಲಿ ಮತ್ತು ಮಲೆನಾಡಿನಲ್ಲಿ ಒಕ್ಕಣ್ಣನೇ ಸೂಪರ್ ಸ್ಟಾರ್ !

Leave A Reply

Your email address will not be published.