ಕರಾವಳಿಯ ಮೀನುಗಾರಿಕೆ ಸಮಸ್ಯೆಗಳ ಕುರಿತು ಶೀಘ್ರದಲ್ಲೇ ಬೆಂಗಳೂರಿನಲ್ಲಿ ಸಭೆ | ಕಡಲ ದುರಂತ ತಪ್ಪಿಸಲು ಕಾರ್ಯಪಡೆ ರಚನೆ -ಸಚಿವ ಎಸ್.ಅಂಗಾರ

ಉಡುಪಿ : ಕರಾವಳಿ ಜಿಲ್ಲೆಯ ಮೀನುಗಾರಿಕೆಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಶೀಘ್ರದಲ್ಲೇ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು.

ಅವರು ಕಾಪು ಬಿಜೆಪಿ ಕಛೇರಿಗೆ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿದರು.

ಸಮುದ್ರದಲ್ಲಿ ಆಗುವ ದುರಂತಗಳನ್ನು ಎದುರಿಸುವ ಮತ್ತು ಅದರಿಂದಾಗುವ ಅಪಾಯಗಳನ್ನು ತಪ್ಪಿಸಲು ತುರ್ತು ಕಾರ್ಯಪಡೆ ರಚನೆ ಬಗ್ಗೆಯೂ ಚರ್ಚಿಸಲಾಗುವುದು ಎಂದು ಹೇಳಿದರು.

ಮೀನುಗಾರಿಕೆ ಸಮಸ್ಯೆ ಕುರಿತ ಸಭೆಯಲ್ಲಿ ಕರಾವಳಿಯ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗು ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ಹೆಜಮಾಡಿ ಬಂದರು ನಿರ್ಮಾಣಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಿ ಕೂಡಲೇ ಕಾಮಗಾರಿ ಆರಂಭಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಬಂದರು ಅಭಿವೃದ್ಧಿ ಕಾಮಗಾರಿಯ ಬಗ್ಗೆ ಟೆಂಡರ್ ಕುರಿತು ಇರುವ ತಡೆಯಾಜ್ಞೆ ತೆರವುಗೊಳಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದ ಅವರು, ಟೆಂಡರ್ ನೀಡಿಕೆ ಕುರಿತಂತೆ ಆಗಿರುವ ಗೊಂದಲಕ್ಕೆ ಅಧಿಕಾರಿಗಳೇ ಹೊಣೆಗಾರರಾಗಿದ್ದಾರೆ ಎಂದರು.

ಕೋವಿಡ್ ಸಂಕಷ್ಟದಲ್ಲಿರುವವರಿಗೆ ಮುಖ್ಯಮಂತ್ರಿಗಳು 500 ಕೋಟಿ ಪರಿಹಾರವನ್ನು ಘೋಷಿಸಿದ್ದಾರೆ. ಅದರಲ್ಲಿ ಮೀನುಗಾರ ಫಲಾನುಭವಿಗೆ ಪರಿಹಾರ ಹಂಚುವಿಕೆ ಬಗ್ಗೆ ಇಲಾಖಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದ ಅವರು, ಹೆಚ್ಚಿನ ಪರಿಹಾರಕ್ಕಾಗಿ ಬೇಡಿಕೆಗಳಿದ್ದು, ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಹೇಳಿದರು.

ಆದ್ಯತೆ ಮೇರೆಗೆ ಜಟ್ಟಿ ನಿರ್ಮಾಣ: ಕಾಪುವಿನಲ್ಲಿ ಮೀನುಗಾರಿಕಾ ಜಟ್ಟಿ ನಿರ್ಮಾಣ ಮೀನುಗಾರರ ಮನವಿ ಸ್ವೀಕರಿಸಿದ ಅವರು ಕರಾವಳಿಯಲ್ಲಿ ಜಟ್ಟಿ ಮತ್ತು ಜಟ್ಟಿ ವಿಸ್ತರಣೆ ಬಗ್ಗೆ ಮೀನುಗಾರಿಕಾ ಇಲಾಖೆಯ ಕಾರ್ಯದರ್ಶಿಯವರೊಂದಿಗೆ ಮಾತುಕತೆ ನಡೆಸಲಾಗಿದೆ. ಎಲ್ಲೆಲ್ಲಿ ಜಟ್ಟಿ ನಿರ್ಮಾಣದ ಬಗ್ಗೆ ಪ್ರಸ್ತಾವನೆ ಮತ್ತು ಅವಶ್ಯಕತೆ ಇದೆಯೋ ಅಲ್ಲಿ ಆದ್ಯತೆ ಮೇರೆಗೆ ಜಟ್ಟಿ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದರು.

ಕರಾವಳಿ ತೀರದಲ್ಲಿ ಡ್ರೆಜ್ಜಿಂಗ್ ಸಮಸ್ಯೆಗಳಿದ್ದು, ಈವರೆಗೆ ಸರಕಾರವೇ ಡ್ರೆಜ್ಜಿಂಗ್ ಮಾಡುತ್ತಿತ್ತು. ಸರಕಾರದಿಂದ ಡ್ರೆಜ್ಜಿಂಗ್ ಮಾಡಲು ಅಸಾಧ್ಯವಾದಲ್ಲಿ ಮೀನುಗಾರಿಕ ಪೆಡರೇಷನ್ ಮೂಲಕ ಡ್ರೆಜ್ಜಿಂಗ್ ಆಗಬೇಕಿದ್ದಲ್ಲಿ ಅವಕಾಶ ನೀಡುವ ಬಗ್ಗೆ ತೀರ್ಮಾಣಿಸಲಾಗುವುದು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಲಾಲಾಜಿ ಆರ್ ಮೆಂಡನ್, ಹೆಜಮಾಡಿ ಬಂದರು. ಮೀನುಗಾರಿಕಾ ರಸ್ತೆಗಳ ಅಭಿವೃದ್ಧಿ ಸಹಿತ, ಹಾನಿಗೊಳಗಾದ ಪ್ರದೇಶದ ಮೀನುಗಾರರ ವಿವಿಧ ಸಮಸ್ಯೆಗಳ ಬಗ್ಗೆ ಸಚಿವರಿಗೆ ವಿವರಿಸಿದರು.

ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಬಿಜೆಪಿ ರಾಷ್ಟ್ರೀಯ ಮೀನುಗಾರ ವೇದಿಕೆ ಪ್ರಧಾನ ಕಾರ್ಯದರ್ಶಿ ಯಶ್‍ಪಾಲ್ ಸುವರ್ಣ, ಬಿಜೆಪಿ ರಾಜ್ಯ ಮಹಿಳಾ ಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ಮುಖಂಡರಾದ ಪ್ರಕಾಶ್ ಶೆಟ್ಟಿ, ಪಾದೆಬೆಟ್ಟು, ಬಿಜೆಪಿ ಕ್ಷೇತ್ರ ಅಧ್ಯಕ್ಷ ಶ್ರೀಕಾಂತ್ ನಾಯಕ್, ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ ರಾವ್, ಅನಿಲ್ ಶೆಟ್ಟಿ ಮಾಮ್ಬಾಡಿ ಮೊದಲಾದವರು ಉಪಸ್ಥಿತರಿದ್ದರು.

Leave A Reply

Your email address will not be published.