ಪುತ್ತೂರು | ಕೋವಿಡ್ ನಿರ್ವಹಣಾ ಕರ್ತವ್ಯದಲ್ಲಿ ಇಲಾಖಾಧಿಕಾರಿಗಳು ವಿಫಲ- ತಾ.ಪಂ.ಇಓ ನವೀನ್ ಭಂಡಾರಿ ಅಸಮಾಧಾನ

ಕೋವಿಡ್ ನಿರ್ವಹಣಾ ಕರ್ತವ್ಯದಲ್ಲಿ ಇಲಾಖಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ಪುತ್ತೂರು ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅಸಮಾಧಾನ ಹೊರಹಾಕಿದ್ದು ಕೋವಿಡ್ ನಿರ್ವಹಣಾ ಸಭೆಯಲ್ಲಿ ಇಲಾಖಾಧಿಕಾರಿಗಳನ್ನು ತರಾಟೆಗೆತ್ತಿಕೊಂಡು ಕೊನೆಗೆ ಸಭೆಯಿಂದಲೇ ಹೊರಗೆ ಹೋದ ಘಟನೆ ಜೂ.10ರಂದು ಪುತ್ತೂರು ತಾ.ಪಂ.ಸಭಾಂಗಣದಲ್ಲಿ ನಡೆದಿದೆ.

ತಾ.ಪಂ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಕೋವಿಡ್ ನಿರ್ವಹಣೆ ಕುರಿತು ಮಾತನಾಡಿದ ಅವರು ಕೋವಿಡ್ ಆರಂಭಗೊಂಡಾಗಿನಿಂದ ಸಚಿವಾಲಯ ಸೇರಿದಂತೆ ರಾಜ್ಯ ಮಟ್ಟದ ಕಚೇರಿಗಳಲ್ಲಿ ಮತ್ತು ಜಿಲ್ಲೆಗಳ ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಇಲಾಖೆಗಳ ಅಧಿಕಾರಿ/ ನೌಕರರು ಕೇಂದ್ರಸ್ಥಾನದಲ್ಲಿ ಲಭ್ಯವಿದ್ದು, ಕೋವಿಡ್ -19 ಕರ್ತವ್ಯಕ್ಕಾಗಿ ನಿಯೋಜಿಸಿದ್ದಲ್ಲಿ ತಪ್ಪದೆ ಹಾಜರಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಸರಕಾರದ ಸುತ್ತೋಲೆ ಇದ್ದರೂ ತಾಲೂಕಿನ ಇಲಾಖಾಧಿಕಾರಿಗಳು ತಮ್ಮ ಸಿಬ್ಬಂದಿಗಳನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸದಿರುವುದು ಭಾರಿ ಬೇಸರ ತಂದಿದೆ. ಸರಕಾರಿ ಆಸ್ಪತ್ರೆಯಲ್ಲಿ ತೆರೆದಿರುವ ಕೋವಿಡ್ -19 ಪರೀಕ್ಷಾ ಕೇಂದ್ರದಲ್ಲಿ ಡಾಟಾ ಎಂಟ್ರಿ ನಡೆಸಲು ವಿವಿಧ ಇಲಾಖೆಗಳ ಸಿಬ್ಬಂದಿಗಳನ್ನು ನಿಯೋಜಿಸಲು ಸಹಾಯಕ ಆಯುಕ್ತರು ನೀಡಿದ ಸೂಚನೆಯಂತೆ ಇಲಾಖಾ ಸಿಬ್ಬಂದಿಗಳನ್ನು ಡಾಟಾ ಎಂಟ್ರಿ ನಡೆಸಲು ನಿಯೋಜಿಸಿ ಆದೇಶಿಸಲಾಗಿತ್ತು.

ಕಾಯ್ದಿರಿಸಿದ ಸಿಬ್ಬಂದಿಗಳು ಯಾವುದೇ ಸಂದರ್ಭದಲ್ಲಿ ಲಭ್ಯವಿರುವಂತೆ ಇಲಾಖಾ ಮುಖ್ಯಸ್ಥರು ನಿಯೋಜಿತ ಸಿಬ್ಬಂದಿಗಳಿಗೆ ಸೂಚಿಸಿಬೇಕೆಂದು ತಿಳಿಸಲಾಗಿತ್ತು. ಆದರೂ ನಿಮ್ಮ ಇಲಾಖೆಯಿಂದ ಯಾರೊಬ್ಬ ಸಿಬ್ಬಂದಿಯೂ ಕರ್ತವ್ಯಕ್ಕೆ ಹಾಜರಾಗದಿದ್ದರಿಂದ ಆಸ್ಪತ್ರೆಯಿಂದ ಯಾವಾಗಾಲೂ ನನಗೆ ಪೋನ್ ಮಾಡಿ ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ನಾನೇನು ಉತ್ತರ ಕೊಡಬೇಕು. ಕೊನೆಗೆ ನಮ್ಮ ತಾ.ಪಂ ಸಿಬ್ಬಂದಿಗಳನ್ನು ಅಲ್ಲಿಗೆ ಕಳುಹಿಸುವ ಪರಿಸ್ಥಿತಿ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಿಮ್ಮ ಇಲಾಖೆಯ ಸಿಬ್ಬಂದಿಗಳು ನಿಮ್ಮ ಕಂಟ್ರೋಲ್‌ನಲ್ಲಿ ಇಲ್ಲ ಎಂದಾದರೆ ನೀವು ಇರೋದಾದರೂ ಯಾಕೆ ಎಂದು ಇಲಾಖಾಧಿಕಾರಿಗಳ ವಿರುದ್ಧ ಅಸಹನೆ ತೋರ್ಪಡಿಸಿದರು.

ಪ್ರತಿಯೊಂದು ವಿಚಾರದಲ್ಲೂ ಕಳೆದ ಒಂದೂವರೆ ತಿಂಗಳಿನಿಂದ ತಾ.ಪಂ.ನ ಸಿಬ್ಬಂದಿಗಳು ಕರ್ತವ್ಯಕ್ಕೆ ಹೋಗುತ್ತಿದ್ದು, ಅವರಿಗೂ ಪ್ಯಾಮಿಲಿ ಇಲ್ವ. ಸ್ವಲ್ಪ ಯೋಚಿಸಿ ಎಂದ ಅವರು ಕೇವಲ ಕೋವಿಡ್ ಕಾರ್ಯಪಡೆ ಸಭೆಗೆ ಹೋದರೆ ಸಾಲದು. ಕೋವಿಡ್ ನಿರ್ವಹಣೆಯಲ್ಲಿ ಟೀಮ್ ವರ್ಕ್ ಆಗಿ ಕೆಲಸ ಮಾಡಿ ಎಂದರು.

ನನಗೂ ಬೇರೆ ಕೆಲಸ ಇದೆ

ತಾಲೂಕಿನ 41 ಗ್ರಾ.ಪಂ ರಜೆಯ ದಿವಸವೂ ಕರ್ತವ್ಯದಲ್ಲಿದೆ. ನಿಮ್ಮ ಇಲಾಖೆಗೆ ಈ ಕೆಲಸ ಯಾಕೆ ಆಗುವುದಿಲ್ಲ ಎಂದ ತಾ.ಪಂ ಕಾರ್ಯನಿರ್ವಹಣಾಧಿಕಾರಿಯವರು ನನಗೂ ಬೇರೆ ಕೆಲಸ ಇದೆ. ಆದರೂ ಹೆಚ್ಚುವರಿ ಕೆಲಸ ಮಾಡಲೇ ಬೇಕಾಗಿದೆ. ಆದರೆ ಅದನ್ನೇ ನಿಮಗೆ ಯಾಕೆ ಮಾಡಲು ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ನೀವು ಯಾರಿಗೆ ಬೇಕಾದರೂ ದೂರು ಕೊಡಿ. ನಾನು ಇಲ್ಲಿಂದ ಯಾವುದೇ ಬಿಲ್ ಪಾಸ್ ಮಾಡುವುದಿಲ್ಲ. ಚುನಾವಣೆ ಡ್ಯೂಟಿ ಆದರೆ ಜಿಲ್ಲಾಧಿಕಾರಿಯವರ ಭಯದಿಂದ ಬೆಳಗ್ಗೆ ಎಲ್ಲರೂ ಬರುತ್ತೀರಿ. ಆದರೆ ಈ ಪರಿಸ್ಥಿತಿಯಲ್ಲಿ ನನ್ನ ಆದೇಶಕ್ಕೆ ನಾನೇ ನಿಮ್ಮಲ್ಲಿ ವಿನಂತಿ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಏನಿದ್ದರೂ ಮುಂದೆ ನಿಮ್ಮ ವರದಿಯನ್ನು ಸಿಇಒ, ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಎಂದರು.

ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್, ಸಿಡಿಪಿಒ ಶ್ರೀಲತಾ, ಸಹಾಯಕ ಕೃಷಿ ನಿದೇರ್ಶಕ ನಾರಾಯಣ ಶೆಟ್ಟಿ, ತೋಟಗಾರಿಕಾ ಇಲಾಖೆ ನಿರ್ದೇಶಕಿ ರೇಖಾ, ಪಶುಸಂಗೋಪನಾ ವೈದ್ಯಾಧಿಕಾರಿ ಡಾ.ಪ್ರಸನ್ನ ಹೆಬ್ಬಾರ್, ಸಾಮಾಜಿಕ ಅರಣ್ಯಾಧಿಕಾರಿ ವಿದ್ಯಾರಾಣಿ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Leave A Reply

Your email address will not be published.