ಜೂ.15ರಿಂದ ಶೈಕ್ಷಣಿಕ ಚಟುವಟಿಕೆ ಆರಂಭ | ನಡೆಯುತ್ತಿದೆ ಸಿದ್ಧತೆ
2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಜೂ. 15ರಿಂದ ಆರಂಭವಾಗುವ ನಿರೀಕ್ಷೆಯಿದ್ದು,ಈ ಬಗ್ಗೆ ಸಿದ್ಧತೆ ಆರಂಭಿಸಲಾಗಿದೆ.
ರಾಜ್ಯ ಪಠ್ಯಕ್ರಮ ಹೊಂದಿರುವ ಶಿಕ್ಷಣ ಸಂಸ್ಥೆಗಳ ಪ್ರೌಢಶಾಲೆಯು ಜೂ. 1ರಿಂದಲೇ ಆರಂಭವಾಗುವ ಬಗ್ಗೆ ಈ ಹಿಂದೆ ಸರಕಾರ ತಿಳಿಸಿತ್ತು. ಆದರೆ ಮಕ್ಕಳಿಗೆ ಇದೀಗ ಬೇಸಗೆ ರಜೆಯನ್ನು ಮತ್ತಷ್ಟು ಮುಂದುವರಿಸಿರುವ ಕಾರಣದಿಂದ ಪ್ರೌಢಶಾಲೆಗಳು ಜೂ. 15ರಿಂದ ಪ್ರಾರಂಭವಾಗಲಿವೆ. ಹಾಗೂ ಈ ಹಿಂದೆಯೇ ಗೊತ್ತುಪಡಿಸಿದಂತೆ ಪ್ರಾಥಮಿಕ ಶಾಲಾ ತರಗತಿಗಳು ಜೂ. 15ರಿಂದ ಆರಂಭ ವಾಗಲಿವೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಈ ಮಧ್ಯೆ ಕೇಂದ್ರೀಯ ಪಠ್ಯಕ್ರಮ ಹೊಂದಿರುವ ಶಿಕ್ಷಣ ಸಂಸ್ಥೆಗಳಲ್ಲಿ ಜೂ. 15ರಿಂದ ತರಗತಿಗಳು ಆರಂಭವಾಗಲಿವೆ. ಈ ಬಗ್ಗೆ ಸಂಬಂಧಪಟ್ಟ ಆಯಾ ಶೈಕ್ಷಣಿಕ ಸಂಸ್ಥೆಗಳಿಂದಲೇ ವಿದ್ಯಾರ್ಥಿಗಳ ಹೆತ್ತವರಿಗೆ ಸದ್ಯಕ್ಕೆ ಮಾಹಿತಿ ಕಳುಹಿಸಲಾಗುತ್ತಿದೆ. ಜತೆಗೆ, ಶುಲ್ಕ ಪಾವತಿಸುವ ಬಗ್ಗೆಯೂ ಸೂಚನೆ ನೀಡಲಾಗಿದೆ. ಮಂಗಳೂರು ಸಹಿತ ದ.ಕ. ಜಿಲ್ಲೆಯಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳು ಈ ಕ್ರಮದಲ್ಲಿ ಬೋಧನೆ ನಡೆಸುತ್ತಿವೆ.
ಜೂ. 15ರಿಂದ ಶಾಲೆ ಪ್ರಾರಂಭವಾದರೂ ಭೌತಿಕ ತರಗತಿಗಳು ನಡೆಯುವುದು ಬಹುತೇಕ ಅನುಮಾನ.
ಕೋವಿಡ್ ಪ್ರಕರಣಗಳ ಸಂಖ್ಯೆ ಅಧಿಕವಿರುವ ಸಮಯದಲ್ಲಿ ವಿದ್ಯಾರ್ಥಿ ಗಳನ್ನು ತರಗತಿಗೆ ಕರೆ ತರುವುದು ಕೂಡ ಕ್ಲಿಷ್ಟಕರ ಸಂಗತಿ.
ಹೀಗಾಗಿ ಕೆಲವು ಸಮಯ ಆನ್ಲೈನ್ ತರಗತಿಯೇ ನಡೆಯುವುದು ಬಹುತೇಕ ಅಂತಿಮವಾಗಲಿದೆ. ಈ ಮಧ್ಯೆ ಮುಂದಿನ ಒಂದು ವಾರದಲ್ಲಿ ಕೊರೊನಾ ಸಂಖ್ಯೆ ಮತ್ತಷ್ಟು ಏರಿಕೆಯಾದರೆ ಶೈಕ್ಷಣಿಕ ವರ್ಷವನ್ನೇ ಜೂ. 15ರ ಬದಲು ಜುಲೈ 1ಕ್ಕೆ ಮುಂದೂಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.