ದ.ಕ. ಜಿಲ್ಲೆ; ಜೂ.6ರಿಂದ ತಾಲೂಕು ಆಸ್ಪತ್ರೆಗಳಲ್ಲಿ ಕೋವ್ಯಾಕ್ಸಿನ್ ಲಸಿಕೆ: ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ

ಕೋವಿಡ್ ನಿರೋಧಕ ಕೋವ್ಯಾಕ್ಸಿನ್ ದ್ವಿತೀಯ ಡೋಸ್ ಲಸಿಕೆಯು ಜೂ.6ರಿಂದ ಜಿಲ್ಲೆಯಲ್ಲಿ ವೆನ್ಲಾಕ್ ಆಸ್ಪತ್ರೆ ಸೇರಿದಂತೆ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ನಿರಂತರ ಲಭ್ಯವಾಗಲಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾಹಿತಿ ನೀಡಿದ್ದಾರೆ.

ಶುಕ್ರವಾರ ‘ಗೂಗಲ್ ಮೀಟ್’ನಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ 35,000 ಜನರಿಗೆ ಕೋವ್ಯಾಕ್ಸಿನ್ ಪ್ರಥಮ ಡೋಸೇಜ್ ನೀಡಲಾಗಿದ್ದು, ಎರಡನೇ ಡೋಸ್‌ನ್ನು 20,000 ಮಂದಿ ಪಡೆದಿದ್ದಾರೆ. ಎರಡನೇ ಡೋಸ್ 13,000 ತಲುಪಿದೆ. ಎರಡನೇ ಡೋಸ್‌ಗೆ ಕೆಲವರು ಬದಲಿ ದೂರವಾಣಿ ಸಂಖ್ಯೆ, ದಾಖಲೆ ಒದಗಿಸಿ ಖಾಸಗಿ ಆಸ್ಪತ್ರೆಯಲ್ಲಿ ತೆಗೆದುಕೊಂಡಿರುವ ಸಾಧ್ಯತೆ ಇದೆ. ಈ ಬಗ್ಗೆ ಸಂಬಂಧಪಟ್ಟವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಖಚಿತಪಡಿಸಿಕೊಳ್ಳಲಾಗುವುದು. ಒಂದು ಶೀಷೆ ತೆರೆದ ಬಳಿಕ ಕನಿಷ್ಠ 10 ಜನರಿಗೆ ವ್ಯಾಕ್ಸಿನ್ ಕೊಡಬೇಕಾಗುತ್ತದೆ. ಆದ್ದರಿಂದ 10 ಜನರ ಪಟ್ಟಿಯಾದ ಕೂಡಲೇ ವ್ಯಾಕ್ಸಿನ್ ಕೊಡಲಾಗುವುದು ಎಂದು ಹೇಳಿದರು.

ಕೋವಿಶೀಲ್ಡ್ ಲಸಿಕೆ 45 ವರ್ಷದಾಟಿದವರಿಗೆ ಶೇ.75 ಭಾಗ ಆನ್‌ಲೈನ್ ನೋಂದಣಿಗೆ ಅವಕಾಶ ನೀಡಲಾಗಿದೆ. ಉಳಿದ ಶೇ.25 ಭಾಗ 70 ವರ್ಷ ದಾಟಿದವರು ಮತ್ತು ಅಂಗವಿಕಲರಿಗೆ ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಲು ಮೀಸಲಿಡಲಾಗಿದೆ. ಜಿಲ್ಲೆಯಲ್ಲಿ 12,000 ಅಂಗವಿಕಲರು ಇದ್ದು, ಅವರಲ್ಲಿ 3,500 ಮಂದಿ ಮಾತ್ರ ಈವರೆಗೆ ವ್ಯಾಕ್ಸಿನ್ ಪಡೆದಿದ್ದಾರೆ. ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಹಾಗೂ ಎಲ್ಲ ತಾಲೂಕುಗಳ ನಗರ ಕೇಂದ್ರಗಳಲ್ಲಿ ಈ ವ್ಯಾಕ್ಸಿನ್ ಸಾರ್ವಜನಿಕರಿಗೆ ಲಭ್ಯವಾಗಲಿದೆ. ವ್ಯಾಕ್ಸಿನ್ ಹಂಚಿಕೆ ಕ್ರಮ ಕುರಿತು ಜಿಲ್ಲಾಡಳಿತವೇ ತೀರ್ಮಾನಿಸಲು ಸರಕಾರ ಈಗಾಗಲೇ ಅನುಮತಿ ನೀಡಿದೆ ಎಂದು ಡಿಸಿ ಸ್ಪಷ್ಟಪಡಿಸಿದರು.

ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಲು ಅವಕಾಶವಿರುವ 70 ವರ್ಷ ದಾಟಿದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರೂ ಕೂಡ ಅವರಿಗೆಲ್ಲಾ ವ್ಯಾಕ್ಸಿನ್ ಲಭ್ಯವಾಗದಿದ್ದರೆ, ಬಾಕಿ ಉಳಿದವರ ಹೆಸರನ್ನು ರನ್ನಿಂಗ್ ರಿಜಿಸ್ಟರ್‌ನಲ್ಲಿ ದಾಖಲಿಸಲಾಗುವುದು. ಮುಂದಿನ ಹಂತದಲ್ಲಿ ರನ್ನಿಂಗ್ ರಿಜಿಸ್ಟರ್‌ನಲ್ಲಿ ದಾಖಲಾದ ಹೆಸರುಗಳನ್ನು ಪರಿಗಣಿಸಲಾಗುವುದು. ಮಗುವಿಗೆ ಹಾಲುಣಿಸುವ ತಾಯಂದಿರು ಕೂಡ ವ್ಯಾಕ್ಸಿನ್ ತೆಗೆದು ಕೊಳ್ಳಬಹುದು ಎಂದು ಆರೋಗ್ಯ ಇಲಾಖೆ ಶಿಫಾರಸು ಮಾಡಿದೆ. ಈ ಹಿಂದೆ ಅವಕಾಶ ಇರಲಿಲ್ಲ. ಆದರೆ ಗರ್ಭಿಣಿಯರು ವ್ಯಾಕ್ಸಿನ್ ತೆಗೆದು ಕೊಳ್ಳಲು ಶಿಫಾರಸು ಮಾಡಿದೆ ಎಂದು ಹೇಳಿದರು.

ಸರ್ಕಾರದ ಮಾರ್ಗಸೂಚಿ ಪ್ರಕಾರ 18 ರಿಂದ 45 ವರ್ಷದೊಳಗಿನವರಲ್ಲಿ ಫ್ರಂಟ್ ಲೈನ್ ವರ್ಕರ್ಸ್‌ಗೆ ಅವರ ಕಚೇರಿಯಲ್ಲೇ ವ್ಯಾಕ್ಸಿನ್ ಒದಗಿ ಸಲಾಗುವುದು. ಈ ಗುಂಪಿನಲ್ಲಿ ಸೇರುವ ಅಸಂಘಟಿತ ಕಾರ್ಮಿಕರಿಗೆ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಒದಗಿಸಲಾಗುವುದು ಎಂದು ಹೇಳಿದರು.

ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಮನೆಯಲ್ಲೇ ಹಾಸಿಗೆಯಲ್ಲಿ ಮಲಗಿದ ಸ್ಥಿತಿಯಲ್ಲಿರುವವರು ಅವರಿರುವ ಕಡೆಗೆ ತೆರಳಿ ವ್ಯಾಕ್ಸಿನ್ ಒದಗಿಸಲು ಪ್ರಯತ್ನಿಸಲಾಗುವುದು. ಶಿಕ್ಷಣ, ಉದ್ಯೋಗ ಮತ್ತು ತುರ್ತು ಅಗತ್ಯಗಳಿಗೆ ವಿದೇಶ ಪ್ರಯಾಣ ನಡೆಸಲು ಉದ್ದೇಶಿಸಿರುವ ಸುಮಾರು 600 ಜನರು ವ್ಯಾಕ್ಸಿನ್ ಪಡೆಯಲು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಅವರ ಆಗಮನ ದೃಢಪಡಿಸಿಕೊಂಡಿರುವ ಸುಮಾರು 500 ಮಂದಿಗೆ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ನಗರದ ಕೆನರಾ ಹೆಣ್ಮಕ್ಕಳ ಪ್ರೌಢಶಾಲೆಯಲ್ಲಿ ಜೂ.6ರಂದು ಲಸಿಕೆ ನೀಡಲಾಗುವುದು ಎಂದು ಡಿಸಿ ಹೇಳಿದರು.

‘ಗೂಗಲ್ ಮೀಟ್’ನಲ್ಲಿ ದ.ಕ.ಜಿಪಂ ಸಿಇಒ ಡಾ.ಕುಮಾರ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕಿಶೋರ್ ಕುಮಾರ್, ಡಾ.ರಾಜೇಶ್, ಡಾ.ಅಶೋಕ್ ಉಪಸ್ಥಿತರಿದ್ದರು.

Leave A Reply

Your email address will not be published.