ಎಂಡಿಎಂಎ ಸಿಂಥೆಟಿಕ್ ಡ್ರಗ್ಸ್ ಮಾರಾಟ ಜಾಲ ಪತ್ತೆ | ಮೂರು ಆರೋಪಿಗಳ ಬಂಧನ

ಎಂಡಿಎಂಎ ಸಿಂಥೆಟಿಕ್ ಮಾದಕ ದ್ರವ್ಯವನ್ನು ಮಂಗಳೂರು ಹಾಗೂ ಕೇರಳದಲ್ಲಿ ಸಾಗಾಟ ಹಾಗೂ ಮಾರಾಟದಲ್ಲಿ ತೊಡಗಿದ್ದ ಕೇರಳ ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 170 ಗ್ರಾಂ ತೂಕದ 10,20,000 ರೂ. ಮೌಲ್ಯದ ಎಂಡಿಎಂಎ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಮಂಗಳೂರು ನಗರದಲ್ಲೇ ಪ್ರಥಮ ಬಾರಿಗೆ ಇಷ್ಟೊಂದು ಪ್ರಮಾಣದ ಎಂಡಿಎಂಎ ಡ್ರಗ್ಸ್ ಪತ್ತೆಯಾಗಿದೆ. ಮಂಜೇಶ್ವರ ಉಪ್ಪಳ ಗೇಟ್ ಬಳಿ ನಿವಾಸಿ ಮುಹಮ್ಮದ್ ಮುನಾಫ್, ಮುಹಮ್ಮದ್ ಮುಝಂಬಿಲ್ ಮತ್ತು ಅಹ್ಮದ್ ಮಸೂಕ್ ಬಂಧಿತ ಆರೋಪಿಗಳಾಗಿದ್ದಾರೆ. ಇವರನ್ನು ಕೊಣಾಜೆ ಠಾಣಾ ವ್ಯಾಪ್ತಿಯ ಮಂಗಳೂರು ವಿ.ವಿ. ಬಳಿ ಬಂಧಿಸಲಾಗಿದೆ ಎಂದರು.

ಬಂಧಿತರಿಂದ ಡ್ರಗ್ಸ್, ಅವುಗಳ ಸಾಗಾಟಕ್ಕೆ ಉಪಯೋಗಿಸಿದ ಕಾರು, ನಾಲ್ಕು ಮೊಬೈಲ್ ಫೋನ್ ಸೇರಿದಂತೆ ಒಟ್ಟು 17,37,000 ರೂ. ಅಂದಾಜು ಮೌಲ್ಯದ ಸೊತ್ತುಗಳನು ವಶಪಡಿಸಿಕೊಳ್ಳಲಾಗಿದೆ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

ಬಂಧಿತ ಆರೋಪಿ ಮುಹಮ್ಮದ್ ಮುನಾಫ್ ಬಿಬಿಎ ವಿದ್ಯಾರ್ಥಿಯಾಗಿದ್ದು, ಮುಹಮ್ಮದ್ ಮಸೂಕ್ ಸ್ಪೋರ್ಟ್ಸ್ ಶಾಪ್ ಹೊಂದಿದ್ದಾನೆ. ಇನ್ನೋರ್ವ ಆರೋಪಿ ಮುಹ್ಮಮದ್ ಮುಝಂಬಿಲ್ ಬೆಂಗಳೂರಿನ ಜೆ.ಪಿ. ನಗರದಲ್ಲಿ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಬೆಂಗಳೂರಿನಿಂದ ಈ ಮಾದಕ ದ್ರವ್ಯವನ್ನು ತಂದು ಮಂಗಳೂರು ಹಾಗೂ ಕೇರಳದ ಜಿಲ್ಲೆಗಳಲ್ಲಿ ಮಾರಾಟ ಮಾಡಲು ಯತ್ನಿಸಲಾಗಿತ್ತು. ಕೊಣಾಜೆ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಶರಣಪ್ಪ ಭಂಡಾರಿಯವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಮಂಗಳೂರಿಗೆ ಕಾರಿನಲ್ಲಿ ಎಂಡಿಎಂಎ ಸಾಗಿಸುವಾಗ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಸೊತ್ತಿನೊಂದಿಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದರು.

ಪ್ರಾಥಮಿಕ ತನಿಖೆಯ ಪ್ರಕಾರ ಆರೋಪಿಗಳು ಆಫ್ರಿಕನ್ ಪ್ರಜೆಯಿಂದ ಈ ಎಂಡಿಎಂಎಯನ್ನು ಪಡೆದು ಕೇರಳ ಮತ್ತು ಕರ್ನಾಟಕದಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದರು. ಈ ಆರೋಪಿಗಳು ಎಂಡಿಎಂಎ ಅಲ್ಲದೆ ಈ ಹಿಂದೆ ಗಾಂಜಾ ಮಾರಾಟದಲ್ಲೂ ಸಕ್ರಿಯರಾಗಿರುವುದು ತಿಳಿದು ಬಂದಿದೆ. ಕೊಣಾಜೆ ಠಾಣೆ ಅಧಿಕಾರಿಗಳು, ಸಿಬ್ಬಂದಿ ಜತೆಗೆ ಸಿಸಿಬಿ ತಂಡವೂ ಕಾರ್ಯಾಚರಣೆಯಲ್ಲಿ ಸಹಕರಿಸಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಹರಿರಾಂ ಶಂಕರ್, ಎಸಿಪಿ ರಂಜಿತ್ ಕುಮಾರ್ ಉಪಸ್ಥಿತರಿದ್ದರು.

Leave A Reply

Your email address will not be published.